ಕೂಡಿಗೆ, ಜೂ. 28: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿಯ ಹಿನ್ನೀರಿನ ಸಮೀಪದ ಜಾಗದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಆನೆ ಕ್ಯಾಂಪ್ ಮಾಡುವ ಪ್ರಸ್ತಾವನೆಯು ಈಗಾಗಲೇ ಜಿಲ್ಲಾ ಮಟ್ಟದ ಅರಣ್ಯ ಇಲಾಖೆಯ ವತಿಯಿಂದ ಸಿದ್ಧಗೊಂಡಿರುತ್ತದೆ.ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರು ಸೇರಿದಂತೆ ಪರಿಸರದ ಬಗ್ಗೆ ನುರಿತ ತಜ್ಞರ ತಂಡ ಕಳೆದ ತಿಂಗಳು ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲೆಯ ಪ್ರಮುಖ ದುಬಾರೆ ಆನೆ ಕ್ಯಾಂಪ್ನ್ನು ವೀಕ್ಷಣೆ ಮಾಡಿದ್ದರು. ಆ ಸಂದರ್ಭದಲ್ಲಿ ದುಬಾರೆ ಆನೆ ಶಿಬಿರದಲ್ಲಿ 30 ಆನೆಗಳು ಇರುವ ಮಾಹಿತಿಯನ್ನು ಸಂಗ್ರಹಿಸಿದರು. ಆದರೆ ಒಂದು ಆನೆ ಶಿಬಿರದಲ್ಲಿ 15ಕ್ಕೂ ಹೆಚ್ಚು ಆನೆಗಳು ಇರಬಾರದು ಎಂದು ಜಿಲ್ಲೆಗೆ ಆಗಮಿಸಿದ ತಂಡ ಜಿಲ್ಲಾ ಮಟ್ಟದ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರು.ಅದರಂತೆ ಮೈಸೂರು ಮತ್ತು ಕೊಡಗು ಮುಖ್ಯ ಅರಣ್ಯ ಸಂರಕ್ಷಣಾ ಹೀರಲಾಲ್ ಮತ್ತು ಜಿಲ್ಲಾ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಪ್ರಭಾಕರನ್ ಸೋಮವಾರಪೇಟೆ ತಾಲೂಕು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ನೆಹರು ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ. ಹಾರಂಗಿಯ ಅಣೆಕಟ್ಟೆಯ ಹಿನ್ನೀರಿನ ಪ್ರದೇಶದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಜಾಗವನ್ನು ಪರಿಶೀಲನೆ ಮಾಡಿ ಆನೆ ಶಿಬಿರವನ್ನು ಪ್ರಾರಂಭ ಮಾಡಲು ಬೇಕಾಗುವ ಎಲ್ಲಾ ಸೌಕರ್ಯಗಳು ಇರುವುದನ್ನು ಮತ್ತು ಪ್ರಮುಖವಾಗಿ ನೀರಿನ ಸೌಲಭ್ಯದ ವ್ಯವಸ್ಥೆಗೆ ಹಿನ್ನೀರಿನ ಪ್ರದೇಶದ ಸಮೀಪದಲ್ಲಿ ದೊಡ್ಡ ನೀರಿನ ಕೆರೆ ಇದ್ದು ಇದರಿಂದ ಆನೆಗಳಿಗೆ ನೀರಿನ ಸೌಲಭ್ಯಕ್ಕೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಅರಣ್ಯ ಇಲಾಖೆಯ ವತಿಯಿಂದ ಹಾರಂಗಿಯ ಹಿನ್ನೀರಿನ ಪ್ರದೇಶ ಆನೆ ಶಿಬಿರ ಪ್ರಾರಂಭಿಸಲು ಸೂಕ್ತವಾದ ಸ್ಥಳವಾಗಿದೆ (ಮೊದಲ ಪುಟದಿಂದ) ಎಂದು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಸಿದ್ಧತೆ ನಡೆಸಿದೆ.
ಹಾರಂಗಿ ಅಣೆಕಟ್ಟೆ ಸಂಗೀತ ಕಾರಂಜಿಯ ಸಮೀಪದಲ್ಲಿ ಅರಣ್ಯ ಇಲಾಖೆಯ ವತಿಯಿಂದ ಟ್ರೀ ಪಾರ್ಕ್ ಮಾಡುವ ಯೋಜನೆಯು ಈಗಾಗಲೇ ಕಾರ್ಯಗತವಾಗಿದೆ. ಟ್ರೀಪಾರ್ಕ್ ಸಮೀಪದ ಜಾಗದಲ್ಲಿ ಆನೆ ಕ್ಯಾಂಪ್ ಮಾಡಲು ಸ್ಥಳ ಪರಿಶೀಲನೆ ನಡೆದಿದ್ದು ಜಿಲ್ಲೆಯಲ್ಲಿ ಎರಡನೇಯ ಆನೆ ಕ್ಯಾಂಪ್ ಆಗಲಿದೆ.
ಈ ವಿಷÀಯಕ್ಕೆ ಸಂಬಂಧಿಸಿದಂತೆ ತಾಲೂಕು ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಯೊಂದಿಗೆ ಮಾಹಿತಿಯನ್ನು ಸಂಗ್ರಹಿಸಿದಾಗ ಜಿಲ್ಲಾ ಮಟ್ಟದಲ್ಲಿ ಸರಕಾರಕ್ಕೆ ಆನೆ ಶಿಬಿರ ಪ್ರಾರಂಭಿಸುವ ಬಗ್ಗೆ ಪ್ರಸ್ತಾವನೆ ಸಿದ್ಧಗೊಂಡಿದ್ದು, ಯೋಜನೆಯು ಸರಕಾರದಿಂದ. ಆದೇಶ ಬಂದ ನಂತರ ಚುರುಕುಗೊಳ್ಳಲಿದೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾಗಿರುವ ಹಾರಂಗಿ ಅಣೆಕಟ್ಟೆಯು ಹೆಚ್ಚು ಅಭಿವೃದ್ಧಿ ಹೊಂದಿ ಅಣೆಕಟ್ಟೆಯ ಮುಂಭಾಗದಲ್ಲಿ ಹತ್ತು ಎಕರೆ ಪ್ರದೇಶದಲ್ಲಿ ಸುಂದರವಾದ ಪಾರ್ಕ್ ವ್ಯವಸ್ಥೆ ಇದೆ. ಇದರ ಜೊತೆಯಲ್ಲಿ ಸಂಜೆ ಸಮಯದಲ್ಲಿ ಪ್ರವಾಸಿಗರಿಗೆ ಮನರಂಜನೆ ನೀಡಲು ಆಧುನಿಕ ತಂತ್ರಜ್ಞಾನ ಬಳಸಿ ಸುಂದರ ಸಂಗೀತ ಕಾರಂಜಿ ವ್ಯವಸ್ಥೆ ಇದೆ. ಈಗಾಗಲೇ ಹಾರಂಗಿ ಅಣೆಕಟ್ಟೆಯ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆಯ ವತಿಯಿಂದ ಟ್ರೀ ಪಾರ್ಕ್ ಮತ್ತು ಆನೆ ಕ್ಯಾಂಪ್ ಪ್ರಾರಂಭಗೊಂಡಲ್ಲಿ ಹಾರಂಗಿಗೆ ಪ್ರವಾಸಿಗರ ದಂಡೇ ಬರುವುದರಲ್ಲಿ ಸಂಶಯವಿಲ್ಲ. ಈ ಎರಡು ಯೋಜನೆಗಳನ್ನು ಅತಿ ಶೀಘ್ರವಾಗಿ ಕಾರ್ಯಗತಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ.
-ಕೆ.ಕೆ. ನಾಗರಾಜಶೆಟ್ಟಿ.