ಇಂದು ಕಾಂಗ್ರೆಸ್ ಸೈಕಲ್ ಚಳವಳಿ

ಬೆಂಗಳೂರು, ಜೂ. 28: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ತಾ. 29 ರಂದು ಸೈಕಲ್ ಚಳವಳಿ ನಡೆಸಲು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಹಿರಿಯ ನಾಯಕ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪೆಟ್ರೋಲ್, ಡೀಸೆಲ್ ದರ ಏರಿಕೆ ವಿರೋಧಿಸಿ ತಾ. 29 ರಂದು ನಾನು ಮತ್ತು ಸಿದ್ದರಾಮಯ್ಯ ಅವರನ್ನೊಳಗೊಂಡು ಕಾಂಗ್ರೆಸ್, ಮುಖಂಡರು, ಕಾರ್ಯಕರ್ತು ಸೈಕಲ್‍ನಲ್ಲಿ ಆಗಮಿಸಿ ಕೇಂದ್ರ ಅಂಚೆ ಕಚೇರಿ ವೃತ್ತದ ಬಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು. ಇದಲ್ಲದೆ, ಕೋವಿಡ್-19ರ ನಿಯಂತ್ರಣ ವೈಫಲ್ಯ, ಎಪಿಎಂಸಿ ಹಾಗೂ ಭೂ ಕಾಯ್ದೆ ತಿದ್ದುಪಡಿ ವಿರುದ್ಧ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್ ಹೋರಾಟ ನಡೆಸಲಿದೆ. ರಾಜ್ಯಮಟ್ಟದಿಂದ ಗ್ರಾಮ ಪಂಚಾಯಿತಿ ಮಟ್ಟದವರೆಗೂ ವಿವಿಧ ಹಂತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಕಾಂಗ್ರೆಸ್ ನಿರಂತರವಾಗಿ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದ್ದಾರೆ.

ಕೊರೊನಾ ನಿಯಂತ್ರಣ:ಕಾರ್ಯತಂಡ ರಚನೆ

ಬೆಂಗಳೂರು, ಜೂ. 28: ಕೋವಿಡ್-19 ನಿಯಂತ್ರಣಕ್ಕಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕು ತಡೆಯುವ ವ್ಯವಸ್ಥೆಯ ಮೇಲೆ ಕಣ್ಗಾವಲು ಇಡಲು ಎರಡು ಹೊಸ ಕಾರ್ಯತಂಡಗಳನ್ನು ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಜೋಡಿಸಲಾಗಿರುವ ಆಸ್ಪತ್ರೆಗಳಲ್ಲಿನ ವ್ಯವಸ್ಥೆ ಮತ್ತು ಕೋವಿಡ್ ಆರೈಕೆ ಕೇಂದ್ರಗಳಿಗೆ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ವ್ಯವಸ್ಥೆ ಮಾಡಲು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ. ಅನಿಲ್‍ಕುಮಾರ್ ನೇತೃತ್ವದ ಸಮಿತಿ ರಚಿಸಲಾಗಿದೆ. ತಂಡದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಉಪಕುಲಪತಿ ಡಾ. ಸಚ್ಚಿದಾನಂದ, ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಗಿರೀಶ್, ಆಯುಷ್ ಇಲಾಖೆ ಆಯುಕ್ತ ಮೀನಾಕ್ಷಿ ನೇಗಿ ಸದಸ್ಯರಾಗಿರಲಿದ್ದಾರೆ.

ಬೆಂಗಳೂರಿನಲ್ಲಿ 1 ತಿಂಗಳು ನಿಷೇಧಾಜ್ಞೆ

ಬೆಂಗಳೂರು, ಜೂ. 28: ಕೊರೊನಾ ತಡೆಗಟ್ಟಲು ಬೆಂಗಳೂರು ನಗರದಲ್ಲಿ ಮತ್ತೆ ಒಂದು ತಿಂಗಳ ಕಾಲ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಜುಲೈ 26 ರವರೆಗೆ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ಕೋವಿಡ್-19 ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಮತ್ತೆ ಕಟ್ಟುನಿಟ್ಟಾಗಿ ಕ್ರಮಗಳನ್ನು ಜಾರಿಗೊಳಿಸಿದ್ದಾರೆ.

ಕೊರೊನಾಗೆ ಇಲ್ಲಿಯವರೆಗೆ 5 ಲಕ್ಷ ಬಲಿ

ನವದೆಹಲಿ, ಜೂ. 28: ಜಗತ್ತಿನಾದ್ಯಂತ ಕೊರೊನಾ ವೈರಸ್ ಇನ್ನಿಲ್ಲದಂತೆ ಪಸರಿಸುತ್ತಿದ್ದು ಸೋಂಕಿತರ ಸಂಖ್ಯೆ 1 ಕೋಟಿ ದಾಟಿದ್ದು ಬರೋಬ್ಬರಿ 5 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಮೇರಿಕಾದಲ್ಲಿ 25 ಲಕ್ಷಕ್ಕೂ ಹೆಚ್ಚು ಮಂದಿ ಕೊರೊನಾಗೆ ತುತ್ತಾಗಿದ್ದಾರೆ. ಈ ಪೈಕಿ 1,28 ಲಕ್ಷ ಮಂದಿ ಬಲಿಯಾಗಿದ್ದಾರೆ. ನಂತರ ಬ್ರೆಜಿಲ್‍ನಲ್ಲಿ 13 ಲಕ್ಷ ಸೋಂಕಿತರಿದ್ದು 57 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 6.34 ಲಕ್ಷಕ್ಕೆರಿದ್ದು 9 ಸಾವಿರ ಮಂದಿ ಬಲಿಯಾಗಿದ್ದಾರೆ. ಇನ್ನು ಭಾರತದಲ್ಲಿ 5.30 ಲಕ್ಷ ಮಂದಿ ಸೋಂಕಿಗೆ ತುತ್ತಾಗಿದ್ದು 16 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಜಗತ್ತಿನಾದ್ಯಂತ 213 ದೇಶಗಳು ಸದ್ಯ ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿವೆ.

ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಬೇಕು

ಬೆಂಗಳೂರು, ಜೂ. 28: ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಖಡಕ್ ವಾರ್ನಿಂಗ್ ನೀಡಿದ್ದು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಸರ್ಕಾರದ ಆದೇಶ ಹೊರಡಿಸಲಾಗಿದೆ. ರಾಜ್ಯದ ಖಾಸಗಿ ಆಸ್ಪತ್ರೆಗಳಿಗೆ ಆದೇಶ ಹೊರಡಿಸಿರುವ ವಿಜಯ್ ಭಾಸ್ಕರ್ ಅವರು, ಕೋವಿಡ್ ರೀತಿಯ ಲಕ್ಷಣ ಇರುವವರಿಗೂ ಪರೀಕ್ಷೆ ಹಾಗೂ ಚಿಕಿತ್ಸೆ ನಿರಾಕರಿಸುವಂತಿಲ್ಲ. ಜೊತೆಗೆ ಚಿಕಿತ್ಸೆ ಮತ್ತು ಪರೀಕ್ಷೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ಅನ್ವಯ ಕೇಸ್ ದಾಖಲಿಸಿ ಕ್ರಮ ಜರುಗಿಸಲು ನಿರ್ಧರಿಸಿದ್ದಾರೆ. ಇದಲ್ಲದೆ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯವೂ ಕೇಸ್ ದಾಖಲಿಸಲು ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದಾರೆ.

ಪಾಕ್‍ಗೆ ಭಾರತ ತಿರುಗೇಟು

ನವದೆಹಲಿ, ಜೂ. 28: ಸಿಖ್ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ತಾ. 29 ರಿಂದ ಕರ್ತಾರ್ಪುರ ಕಾರಿಡಾರ್‍ನ್ನು ತೆರೆಯಲು ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ಪಾಕಿಸ್ತಾನ ಹೇಳಿದ್ದು, ಇದಕ್ಕೆ ಭಾರತ ತಿರುಗೇಟು ನೀಡಿದೆ. ಪಾಕಿಸ್ತಾನ ವಿದೇಶಾಂಗ ಸಚಿವ ಶಾ. ಮಹಮ್ಮೂದ್ ಖುರೇಷಿಯವರು ಟ್ವೀಟ್ ಮಾಡಿದ್ದು ಕರ್ತಾಪುರ ಕಾರಿಡಾರ್ ತೆರೆಯುವ ಬಗ್ಗೆ ತಿಳಿಸಿದ್ದಾರೆ. ವಿಶ್ವದಾದ್ಯಂತ ಧಾರ್ಮಿಕ ಕೇಂದ್ರಗಳು ಪುರರಾರಂಭಗೊಳ್ಳುತ್ತಿದ್ದಂತೆ, ಕರ್ತಾರ್ಪುರ ಕಾರಿಡಾರ್‍ನ್ನು ತೆರೆಯಲು ಪಾಕಿಸ್ತಾನ ಸಿದ್ಧತೆ ನಡೆಸುತ್ತಿದೆ. ಮಹಾರಾಜ ರಂಜೀತ್ ಸಿಂಗ್ ಅವರ ಮರಣ ವರ್ಷಾಚರಣೆಯ ಅಂಗವಾಗಿ ತಾ. 29 ರಂದು ಎಲ್ಲಾ ಸಿಖ್ ಯಾತ್ರಾರ್ಥಿಗಳಿಗೆ ಕರ್ತಾರ್ಪುರ ಸಾಹಿಬ್ ಕಾರಿಡಾರ್‍ನ್ನು ಮತ್ತೆ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಭಾರತಕ್ಕೆ ಮಾಹಿತಿ ನೀಡಲಾಗಿದೆ ಎಂದು ಹೇಳಿಕೊಂಡಿದ್ದರು. ಇದಕ್ಕೆ ಭಾರತ ಪಾಕಿಸ್ತಾನ ಇದೀಗ ತಾನು ಸೌಹಾರ್ಧ ಸಂಬಂಧ ಹರಿಕಾರ ಎಂದು ಬಿಂಬಿಸಿಕೊಳ್ಳುವ ನಾಟಕವಾಡುತ್ತಿದೆ. ಸೋಮವಾರದಿಂದ ಕಾರಿಡಾರ್ ಆರಂಭವಾಗುವುದಿದ್ದರೆ ಈ ಮೊದಲೇ ವಿಷಯವನ್ನು ತಿಳಿಸಬೇಕಿತ್ತು ಎಂದು ತಿರುಗೇಟು ನೀಡಿದೆ.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಗೆ ಸೋಂಕು

ಉಡುಪಿ, ಜೂ. 28: ಉಡುಪಿ ಜಿಲ್ಲೆ ಪಡುಬಿದ್ರಿಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯೋರ್ವಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ವಿದ್ಯಾರ್ಥಿನಿಯ ಕುಟುಂಬದ ಇಬ್ಬರು ಸದಸ್ಯರಿಗೆ ಶನಿವಾರ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಆದರೆ, ವಿದ್ಯಾರ್ಥಿನಿ ಶನಿವಾರ ಪರೀಕ್ಷೆಗೆ ಹಾಜರಾಗಿದ್ದಳು. ಪರೀಕ್ಷೆ ಮುಗಿದ ತಕ್ಷಣ ವಿದ್ಯಾರ್ಥಿನಿಯ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ವರದಿಯಲ್ಲಿ ಆಕೆಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. ಸೋಂಕಿತ ವಿದ್ಯಾರ್ಥಿನಿ ತಾ. 25 ರಂದು ಕನ್ನಡ ಹಾಗೂ ತಾ. 27 ರಂದು ತಾಲೂಕಿನ ಪರೀಕ್ಷಾ ಕೇಂದ್ರದಲ್ಲಿ ಗಣಿತ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದಾಳೆ. ಸೋಂಕಿತ ವಿದ್ಯಾರ್ಥಿನಿಗೆ ಮುಂದಿನ ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ. ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಲಾಗುವುದು ಎಂದು ಅವರು ತಿಳಿಸಿದರು.

ದಕ್ಷಿಣ ಕನ್ನಡದಲ್ಲಿ ಸೋಂಕಿಗೆ 2 ಸಾವು

ಮಂಗಳೂರು, ಜೂ. 28: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಕೋವಿಡ್ ಸೋಂಕಿನಿಂದ ಮತ್ತಿಬ್ಬರು ಸಾವನ್ನಪ್ಪುವುದರೊಂದಿಗೆ ಸಾವಿನ ಸಂಖ್ಯೆ 12 ಕ್ಕೆ ಏರಿದೆ. ಮೃತರ ಪೈಕಿ ಬಂಟ್ವಾಳ ಮೂಲದ 57 ವರ್ಷದ ಮಹಿಳೆ ಮತ್ತು ಸೂರತ್ಕಲ್‍ನ 31 ವರ್ಷದ ಯುವಕ ಸೇರಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಒಂದೇ ಕುಟುಂಬದ 16 ಸದಸ್ಯರು ಸೇರಿದಂತೆ 49 ಜನರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದಕ್ಷಿಣ ಕನ್ನಡದಲ್ಲಿ ಪ್ರಕರಣಗಳ ಒಟ್ಟು ಪ್ರಕರಣಗಳ ಸಂಖ್ಯೆ 566 ಕ್ಕೆ ಏರಿದೆ. 17 ಮಾದರಿಗಳ ಪರೀಕ್ಷೆಗಳ ಪೈಕಿ 7 ಪುರುಷರು, 4 ಮಕ್ಕಳು, 4 ಮಹಿಳೆಯರು ಮತ್ತು ವೃದ್ಧೆ ಸೇರಿದಂತೆ 16 ಮಂದಿಗೆ ಸೋಂಕು ದೃಢಪಟ್ಟಿದೆ. ಮಹಿಳಾ ಉದ್ಯೋಗಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟ ನಂತರ ಅಧಿಕಾರಿಗಳು ಉಲ್ಲಾಳದ ಮಾಸ್ತಿಕಟ್ಟೆ ಪ್ರದೇಶ ಮತ್ತು ಉಜಿರೆಯ ಪೆಟ್ರೋಲ್ ಬಂಕ್ ಸೀಲ್‍ಡೌನ್ ಮಾಡಿದ್ದಾರೆ.