ಸಿದ್ದಾಪುರ, ಜೂ. 28: ನೆಲ್ಲಿಹುದಿಕೇರಿ ಬೆಟ್ಟದಕಾಡು ಭಾಗದಲ್ಲಿ ನಿಬರ್ಂಧ ವಿಧಿಸಿರುವ ಜಾಗದಿಂದ ನಿವಾಸಿಗಳು ಹೊರಬರುತ್ತಿರುವ ದೂರಿನ ಮೇರೆಗೆ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಪಿಡಿಓ ಅನಿಲ್ ಕುಮಾರ್ ನಿವಾಸಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬೆಟ್ಟದಕಾಡು ಭಾಗದಲ್ಲಿ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಸೀಲ್‍ಡೌನ್ ಮಾಡಲಾಗಿತ್ತು.

ಆದರೆ ಆ ಭಾಗದಿಂದ ಕೆಲವರು ಬೇರೆ ದಾರಿಯ ಮೂಲಕ ಪಟ್ಟಣಕ್ಕೆ ಸಾಮಗ್ರಿಗಳನ್ನು ಖರೀದಿಸಲು ಬರುತ್ತಿದ್ದಾರೆ ಎಂದು ಗ್ರಾಮಸ್ಥರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್ ನಿಬರ್ಂಧ ವಿಧಿಸಿರುವ ಜಾಗಗಳಿಂದ ನಿವಾಸಿಗಳು ಬೇರೆ ದಾರಿಯ ಮೂಲಕ ಪಟ್ಟಣಗಳಿಗೆ ಸಾಮಗ್ರಿಗಳನ್ನು ಖರೀದಿಸಲು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.

ಪಿಡಿಒ ಮುಂದಾಳತ್ವದಲ್ಲಿ ನಿಬರ್ಂಧ ಪ್ರದೇಶದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮನೆಮನೆ ಸಮೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅನಿಲ್ ಕುಮಾರ್ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು ಈಗಾಗಲೇ ಗ್ರಾಮದಲ್ಲಿ ಕೊರೊನಾ ವಾರಿಯರ್ಸ್ ತಂಡ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.