ಮಡಿಕೇರಿ, ಜೂ. 28: ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು 43ಕ್ಕೆ ಏರಿಕೆಯೊಂದಿಗೆ ಇಂದು ಇಬ್ಬರಲ್ಲಿ ಈ ಸೋಂಕು ಪತ್ತೆಯಾಗಿದೆ. ಅಂತೆಯೇ ಜಿಲ್ಲೆಯ 20 ಜನ ವಸತಿಗಳಲ್ಲಿ ಈ ಸಂಬಂಧ ಸಾರ್ವಜನಿಕರ ಸಂಪರ್ಕ ನಿರ್ಬಂಧಿಸಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.ಅಲ್ಲದೆ ಕೊರೊನಾ ಸೋಂಕಿತರ ಮೂವರು ಗುಣಮುಖರಾಗುವುದ ರೊಂದಿಗೆ ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಎಲ್ಲ 40 ಕೊರೊನಾ ರೋಗಿಗಳ ಆರೋಗ್ಯ ಸ್ಥಿರವಿದ್ದು, ಯಾರೂ ಆತಂಕಗೊಳ್ಳುವ ಅವಶ್ಯಕತೆ ಇರುವುದಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.ಕೊರೊನಾ ಸೋಂಕಿತರು ಮತ್ತು ನಿರ್ಬಂಧಿತ ಜನವಸತಿ ನಿವಾಸಿಗಳನ್ನು ಸರಕಾರದ ಮಾರ್ಗಸೂಚಿಯಂತೆ ನೋಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನೆನಪಿಸಿದ್ದಾರೆ.ಹೊಸ ಪ್ರಕರಣ: ಜಿಲ್ಲೆಯಲ್ಲಿ ಈ ದಿನ ಹೊಸದಾಗಿ 3 ಕೋವಿಡ್ ಸೋಂಕು ಪ್ರಕರಣಗಳು ವರದಿ ಯಾಗಿದೆ. ಜ್ವರದ ಲಕ್ಷಣವಿದ್ದ ಕುಶಾಲನಗರದ ಪದವಿ ಕಾಲೇಜು ಬಳಿ ಇರುವ ಅಣ್ಣೇಗೌಡ ಬಡಾವಣೆಯ ನಿವಾಸಿ 43 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಆ ಮೇರೆಗೆ ಇವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಇನ್ನು ವೀರಾಜಪೇಟೆಯ ಮೀನುಪೇಟೆ ನಿವಾಸಿ 41 ವರ್ಷದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಇವರು ವಿದೇಶದಿಂದ ಹಿಂತಿರುಗಿದವರಾಗಿದ್ದಾರೆ. ಅಲ್ಲದೆ ಮಡಿಕೇರಿ ತಾಲೂಕಿನ ನಾಪೋಕ್ಲುವಿನ 43 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂದು ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವ್ಯಕ್ತಿ ವಿದೇಶದಿಂದ ಹಿಂತಿರುಗಿದವ ರಾಗಿದ್ದಾರೆ. ಇವರಿಗೆ ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ.
ಹೊಸದಾಗಿ ಕುಶಾಲನಗರದ ಅಣ್ಣೇಗೌಡ ಬಡಾವಣೆ ಮತ್ತು ವೀರಾಜಪೇಟೆ ನಗರದ ಮೀನುಪೇಟೆ ಯನ್ನು ನಿಯಂತ್ರಿತ ಪ್ರದೇಶವನ್ನು ಈಗಾಗಲೇ ಘೋಷಿಸಿದ್ದು, ಜಿಲ್ಲೆಯಲ್ಲಿ
(ಮೊದಲ ಪುಟದಿಂದ) ಕೋವಿಡ್-19 ಸೋಂಕಿತರ ಸಂಖ್ಯೆ 43ಕ್ಕೆ ಏರಿದ್ದು, 3 ಪ್ರಕರಣದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿರುತ್ತಾರೆ. 40 ಪ್ರಕರಣಗಳು ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿರುವ ನಿಯಂತ್ರಿತ ಪ್ರದೇಶಗಳ ಸಂಖ್ಯೆ ಒಟ್ಟು 20ಕ್ಕೆ ಏರಿಕೆಯಾಗಿದೆ.
ಸೌಲಭ್ಯ ಕಲ್ಪಿಸಲು ಮೀನಾಮೇಷ
ಸೋಮವಾರಪೇಟೆ: ಕಂಟೈನ್‍ಮೆಂಟ್ ಏರಿಯಾ ಎಂದು ಘೋಷಿಸಿರುವ ಪಟ್ಟಣ ಸಮೀಪದ ಕರ್ಕಳ್ಳಿ ಬಳಗುಂದ ಗ್ರಾಮ ವ್ಯಾಪ್ತಿಯ ಸಾರ್ವಜನಿಕರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದೆರಡು ದಿನಗಳ ಹಿಂದೆ ಕಂಟೈನ್‍ಮೆಂಟ್ ಏರಿಯಾ ಎಂದು ಘೋಷಿಸಿ ಸಾರ್ವಜನಿಕರ ಓಡಾಟಕ್ಕೆ ತಡೆಯೊಡ್ಡಲಾಗಿದ್ದು, ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಇಂದೂ ಸಹ ವ್ಯತ್ಯಯ ಉಂಟಾಯಿತು.
ಸೋಮವಾರಪೇಟೆ ಪಟ್ಟಣ ಪಂಚಾಯಿತಿ, ಬೇಳೂರು ಮತ್ತು ನೇರುಗಳಲೆ ಗ್ರಾಮ ಪಂಚಾಯಿತಿಗಳಿಗೆ ಒಳಪಡುವ ನಿರ್ದಿಷ್ಟ ಪ್ರದೇಶದಲ್ಲಿನ ಜನರ ಸಂಚಾರಕ್ಕೆ ಅವಕಾಶ ಇಲ್ಲದೇ ಇರುವದರಿಂದ ಪ್ರತಿಯೊಂದು ವಸ್ತುಗಳನ್ನೂ ಮನೆ ಬಾಗಿಲಿಗೆ ತಲುಪಿಸಬೇಕಾದ ಅನಿವಾರ್ಯತೆ ಒದಗಿದೆ.
ನಿನ್ನೆಯಿಂದಲೂ ಕಂಟೈನ್ ಮೆಂಟ್ ಏರಿಯಾದಲ್ಲಿ ಹಾಲಿನ ವ್ಯವಸ್ಥೆಯಾಗಿಲ್ಲ. ಇಂದು ಕೆಲವರಿಗೆ ಮಾತ್ರ ಹಾಲು ಲಭಿಸಿದ್ದು, ಹಲವಷ್ಟು ಮಂದಿಗೆ ಹಾಲು ಸಿಕ್ಕಿಲ್ಲ. ಅಧಿಕಾರಿಗಳು ಕಂಟೈನ್‍ಮೆಂಟ್ ಏರಿಯಾದ ಮಂದಿಯ ಬಗ್ಗೆ ಇನ್ನಷ್ಟು ಕಾಳಜಿ ವಹಿಸಬೇಕು ಎಂದು ಅಲ್ಲಿನ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಂಟೈನ್‍ಮೆಂಟ್ ಏರಿಯಾದ ಈರ್ವರಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆ, ಇವರುಗಳ ಪ್ರಾಥಮಿಕ ಸಂಪರ್ಕ ಹೊಂದಿದ್ದ ಒಟ್ಟು 8 ಮಂದಿಯ ಗಂಟಲು ದ್ರವವನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸಲಾಗಿದೆ. 6 ಮಂದಿಗೆ ಹೋಂ ಕ್ವಾರಂಟೈನ್ ವಿಧಿಸಲಾಗಿದೆ.
ದಿನಸಿ ಸಾಮಾಗ್ರಿ ವಿತರಣೆ: ಕರ್ಕಳ್ಳಿ ಬಳಗುಂದ ಗ್ರಾಮ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕ ಕುಟುಂಬಗಳೇ ಅಧಿಕ ವಾಗಿರುವದರಿಂದ ತಾಲೂಕು ಆಡಳಿತದ ಮೂಲಕ ದಿನಸಿ ಸಾಮಗ್ರಿಗಳ ಕಿಟ್‍ಗಳನ್ನು ವಿತರಿಸಲಾಯಿತು.
ಪಟ್ಟಣ ಪಂಚಾಯಿತಿಯ 65, ನೇರುಗಳಲೆ ಗ್ರಾ.ಪಂ. ನ 40, ಬೇಳೂರು ಗ್ರಾ.ಪಂ. ವ್ಯಾಪ್ತಿಯ 231 ಸೇರಿದಂತೆ ಒಟ್ಟು 336 ಮನೆಗಳಿಗೆ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಿಸಲಾಯಿತು. ಬೇಳೂರು ಪಂಚಾಯಿತಿ ಅಧ್ಯಕ್ಷೆ ಭಾಗ್ಯ ಮಂಜುನಾಥ್, ಪಿಡಿಒ ಚನ್ನಕೇಶವ, ಸದಸ್ಯೆ ಸುಭದ್ರ, ಬಿಲ್ ಕಲೆಕ್ಟರ್ ರಶೀದ್, ವಾಟರ್‍ಮೆನ್‍ಗಳಾದ ಅಣ್ಣು, ಶಂಕರ ಅವರುಗಳು ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ತಲುಪಿಸಿದರು.
ವೀರಾಜಪೇಟೆ ಪ್ರಕರಣ : ದುಬೈಯಿಂದ ವೀರಾಜಪೇಟೆಗೆ ಬಂದಿದ್ದ ವ್ಯಕ್ತಿಯ ದ್ರವವನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆ ವ್ಯಕ್ತಿ ಹೋಮ್ ಕ್ವಾರಂಟೈನ್‍ನಲ್ಲಿದ್ದ ಪ್ರದೇಶವಾದ ಮೀನುಪೇಟೆಯ ಒಂದು ಭಾಗವನ್ನು ತಾಲೂಕು ಆಡಳಿತ ಸೀಲ್‍ಡೌನ್ ಮಾಡಿದೆ.
ನಾಪೋಕ್ಲು ಬಳಿಯ ಕೊಳಕೇರಿ ಮೂಲ ನಿವಾಸಿಯಾಗಿದ್ದು, ದುಬೈನಲ್ಲಿ ನೆಲೆಸಿದ್ದು ಕೆಲವು ತಿಂಗಳ ಹಿಂದೆ ಇಲ್ಲಿನ ಮೀನುಪೇಟೆಯಲ್ಲಿ ಮನೆ ಖರೀದಿ ಮಾಡಿದ್ದರು. ತಾ. 20ರಂದು ದುಬೈನಿಂದ ವೀರಾಜಪೇಟೆಗೆ ಬಂದಿದ್ದಾಗ ಇವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಆರೋಗ್ಯ ತಪಾಸಣೆಯಿಂದ ಪಾಸಿಟಿವ್ ಪತ್ತೆಯಾದ ನಂತರ ಇವರನ್ನು ಇಂದು ಮಡಿಕೇರಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ದುಬೈನಿಂದ ಸಂಗಡಿಗ ಸೇರಿ ಇಬ್ಬರು ಬಂದಿದ್ದು ಒಬ್ಬರ ಆರೋಗ್ಯ ತಪಾಸಣೆಯಲ್ಲಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಇವರ ಕುರಿತು ತಲೆ ಕೆಡಿಸಿಕೊಂಡಿಲ್ಲವೆನ್ನಲಾಗಿದೆ.
ವಿದ್ಯಾರ್ಥಿಗಳ ಸ್ಥಳಾಂತರ
ಈಗ ತಾಲೂಕು ಆಡಳಿತ ಮೀನುಪೇಟೆಯ ಈ ಕುಟುಂಬಗಳಲ್ಲಿ 7 ಮಂದಿ ಎಸ್.ಎಸ್.ಎಲ್.ಸಿ. ಬರೆಯುವ ವಿದ್ಯಾರ್ಥಿಗಳಾಗಿದ್ದು, ಇವರುಗಳನ್ನು ಇಲ್ಲಿಂದ ಸ್ಥಳಾಂತರ ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮೀನುಪೇಟೆಯ ಈ ಸೀಲ್‍ಡೌನ್ ಪ್ರದೇಶದಲ್ಲಿರುವ ಸುಳಿವು ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಕ್ಷೇತ್ರದ ಡಿ.ಡಿ.ಪಿ.ಐ., ಬಿ.ಇ.ಓ, ಹಾಗೂ ಸಿಬ್ಬಂದಿಗಳು ಸೀಲ್‍ಡೌನ್ ಪ್ರದೇಶಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ. ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ರೆವಿನ್ಯೂ ಇನ್ಸ್‍ಪೆಕ್ಟರ್ ಸೋಮೇಶ್, ಸಿಬ್ಬಂದಿ ಹಾಗೂ ತಾಲೂಕು ವೈದ್ಯಾಧಿಕಾರಿ, ಸಿಬ್ಬಂದಿಗಳ ತಂಡ, ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಶುಶ್ರೂಷಕಿಯರು, ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿದ್ದರು.
ಕೊರೊನಾ ನಿರ್ಬಂಧದ ಪ್ರದೇಶಕ್ಕೆ ತಾಲೂಕು ಆಡಳಿತದಿಂದ ಪಡಿತರ ಸಾಮಗ್ರಿಗಳನ್ನು ಪೊರೈಸಲು ತಾಲೂಕು ಆಡಳಿತದ ಸಿಬ್ಬಂದಿಗಳು ಮಾಹಿತಿಯನ್ನು ಪಡೆದರು.
ಈ ಸೀಲ್‍ಡೌನ್ ಪ್ರದೇಶ ಇಲ್ಲಿನ ಮೀನುಪೇಟೆಯ ಸಮುಚ್ಚಯ ಪೊಲೀಸ್ ಠಾಣೆಯ ಮುಂಭಾಗ ದಲ್ಲಿದ್ದರೂ ಪೊಲೀಸ್ ಕಾವಲಿರಿಸಲಾಗಿದೆ.
ಸ್ಪಿರುಲಿನಾ ಚಿಕ್ಕಿ ವಿತರಣೆ
ಮಡಿಕೇರಿ: ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸ್ಪಿರುಲಿನಾ ಚಿಕ್ಕಿಯನ್ನು ತುಮಕೂರುವಿನ ಸ್ಪಿರುಲಿನಾ ಫೌಂಡೇಷನ್ ವತಿಯಿಂದ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು.
ಸಂಸ್ಥೆಯ ಪ್ರಮುಖ ಅಮ್ಮೆಕಂಡ ಕಿರಣ್ ಕುಟ್ಟಪ್ಪ 260 ಸ್ಪಿರುಲಿನಾ ಚಿಕ್ಕಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮೋಹನ್ ಮೂಲಕ ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿ ಶಿವಕುಮಾರ್ ಅವರಿಗೆ ಹಸ್ತಾಂತರಿಸಿದರು.
ಸ್ಪಿರುಲಿನಾ ಸೂಕ್ಷ್ಮಣು ಜೀವಿಯಾಗಿದ್ದು, ಅತೀ ಹೆಚ್ಚು ಪೋಷಕಾಂಶಗಳನ್ನು ಹೊಂದಿರುವುದರಿಂದ ಬೇರೆಲ್ಲಾ ಆಹಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಇದರಿಂದ ವೈರಾಣು ಸೋಂಕು ತಡೆಯುವಲ್ಲಿ ಯಶಸ್ವಿಯಾಗುತ್ತದೆ. ಈ ಬಗ್ಗೆ ಸಂಶೋಧನೆ ಕೂಡ ನಡೆದು ದೃಢವಾಗಿದೆ. ಕೊರೊನಾ ವಾರಿಯರ್ಸ್, ಕೊರೊನಾ ಸೋಂಕಿತರು, ಶಂಕಿತರಿಗೆ ಚಿಕ್ಕಿಯನ್ನು ವಿತರಿಸಲಾಗಿದೆ ಎಂದು ಸಂಸ್ಥೆಯ ಕಿರಣ್ ಕುಟ್ಟಪ್ಪ ಮಾಹಿತಿ ನೀಡಿದರು.