ಹೇಗಿದೆ ಜಗತ್ತಿನ ಸ್ಥಿತಿ ? : ಜಗತ್ತಿನಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಗಮನಿಸಿದರೆ ಈವರೆಗೂ ಜಗತ್ತಿನಾದ್ಯಂತ ಸರಿಸುಮಾರು 96 ಲಕ್ಷ ಸೋಂಕಿತ ರಿದ್ದಾರೆ. ಕೊರೊನಾದಿಂದಾಗಿ ಜಗತ್ತಿನಲ್ಲಿ ಈವರೆಗೆ 4.87 ಲಕ್ಷಮಂದಿ ಕೊನೆಯುಸಿರೆಳೆದಿದ್ದಾರೆ. 53 ಲಕ್ಷ ಮಂದಿ ಗುಣಮುಖರಾಗಿದ್ದಾರೆ.
ಭಾರತದ ಸ್ಥಿತಿ ಏನು ?: ಭಾರತದಲ್ಲಿ ಮಾರಕವಾಗಿ ಬಂದೆರಗಿದ ಕೊರೊನಾ ಮಹಾಮಾರಿಯಿಂದಾಗಿ ಈವರೆಗೂ ದೇಶದಲ್ಲಿ 4.75 ಲಕ್ಷ ಮಂದಿ ಸೋಂಕಿತರಾಗಿದ್ದಾರೆ. 15 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. 2.72 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಕೇವಲ 5 ದಿನಗಳಲ್ಲಿಯೇ ದೇಶದಲ್ಲಿ ಸೋಂಕಿನ 60 ಸಾವಿರ ಪ್ರಕರಣ ವರದಿಯಾಗಿದೆ. ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಭಾರತ ಜಗತ್ತಿನಲ್ಲಿ 14 ನೇ ಸ್ಥಾನದಲ್ಲಿದೆ. ದೇಶದಲ್ಲಿ ಕರ್ನಾಟಕ 11ನೇ ಸ್ಥಾನದಲ್ಲಿದೆ.
ಕರ್ನಾಟಕದ ಆತಂಕ ಏನು ? : ಕೊರೊನಾ ಕರ್ನಾಟಕದಲ್ಲಿ ಸಮುದಾಯಕ್ಕೆ ವ್ಯಾಪಿಸಿರುವ ಆತಂಕ ಸೃಷ್ಟಿಯಾಗಿದೆ. ಹಿರಿಯ ನಾಗರಿಕರಿಗೆ ರಾಜ್ಯದಲ್ಲಿ ನಿರೀಕ್ಷೆಯಂತೆ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸಿಲ್ಲ. ಆದರೆ ನಿರೀಕ್ಷೆಗೂ ಮೀರಿ ರಾಜ್ಯದ ಯುವಜನರಿಗೆ ಸೋಂಕು ಹಬ್ಬುತ್ತಿರುವುದು ಅನಿರೀಕ್ಷಿತ ಬೆಳವಣಿಗೆ. ರಾಜ್ಯದಲ್ಲಿ ಈಗಿರುವ 10 ಸಾವಿರ ಸೋಂಕಿತರ ಪೈಕಿ 6,356 ಮಂದಿ 20 ರಿಂದ 50 ವರ್ಷದವರು.
ಯಾಕೆ ಕೊರೊನಾ ಹೆಚ್ಚಾಗುತ್ತಿದೆ ? ಮಾರ್ಚ್ 24 ರಿಂದ 75 ದಿನಗಳ ಲಾಕ್ಡೌನ್ನ್ನು ಭಾರತ ಕೈಗೊಂಡಾಗ ಕೊರೊನಾ ಸೋಂಕಿನ ಸಂಖ್ಯೆ ಭಾರತದಲ್ಲಿ ಗಣನೀಯವಾಗಿ ಇಳಿಕೆಯಾದೀತು ಎಂಬ ನಂಬಿಕೆ ದೇಶವಾಸಿಗಳಲ್ಲಿತ್ತು. ಜನರೂ ಲಾಕ್ಡೌನ್ಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದರು. ಹೀಗಾಗಿ ಲಾಕ್ಡೌನ್ ದಿನಗಳಲ್ಲಿ ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಇಳಿಮುಖವಾಗಿತ್ತು. ಸಕಾಲದಲ್ಲಿ ಭಾರತ ಲಾಕ್ಡೌನ್ ಜಾರಿಗೊಳಿಸಿ ದ್ದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಅನೇಕ ದೇಶಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದವು. ಆದರೆ ಲಾಕ್ಡೌನ್ ಸಡಿಲಿಕೆಯಾದ ನಂತರ ಜನರು ವರ್ತಿಸಿದ ರೀತಿಯಿಂದಾಗಿ ಕೊರೊನಾ ಮತ್ತೆ ದೇಶದಲ್ಲಿ ತನ್ನ ಅಟ್ಟಹಾಸ ಮೆರೆಯಲು ಸಾಧ್ಯವಾಯಿತು. ಲಾಕ್ಡೌನ್ಗೆ ರಿಯಾಯಿತಿ ನೀಡಿದ್ದನ್ನೇ ಕೊರೊನಾ ದೇಶದಿಂದ ಮರೆಯಾಯಿತು ಎಂದು ಭ್ರಮಿಸಿದ ಅನೇಕ ಭಾರತೀಯರು ಸಾಮಾಜಿಕ ಅಂತರ ಪಾಲಿಸುವುದನ್ನೇ ಮರೆತರು, ಮಾಸ್ಕ್ ಧರಿಸುವಿಕೆಯಿಂದ ದೂರಸರಿದರು. ಸ್ಯಾನಿಟೈಸರ್ ದೂರದ ಮಾತಾಯಿತು. ಸರ್ಕಾರ ನೀಡಿದ ಎಲ್ಲಾ ಮುನ್ನೆಚ್ಚರಿಕೆಗಳನ್ನು ದೇಶದ ಹಲವೆಡೆ ಗಾಳಿಗೆ ತೂರಲಾಯಿತು. ಲಾಕ್ಡೌನ್ ದಿನಗಳು ದೇಶದ ಆರ್ಥಿಕತೆಗೆ ಭಾರೀ ಹೊಡೆತವನ್ನೇ ನೀಡಿದ್ದವು. ಇದರಿಂದಾಗಿ ಸಡಿಲಗೊಳಿಸಲಾಯಿತು.
ಕೊರೊನಾ ಎಷ್ಟು ದಿನ ಇದ್ದೀತು ? : ಕೊರೊನಾ ಒಂದು ವೈರಸ್. ಸಾಮಾನ್ಯವಾಗಿ ವೈರಸ್ ಹೆಚ್ಚಿನ ಸಮಯ ಇರುವುದಿಲ್ಲ. ಕನಿಷ್ಟ ಎಂದರೂ 6 ತಿಂಗಳು ತನ್ನ ತಾಂಡವ ರೂಪ ತೋರುತ್ತದೆ. ಹೀಗೆ ಯೋಚಿಸಿದರೂ ಸೆಪ್ಟೆಂಬರ್ವರೆಗೆ ಭಾರತದಲ್ಲಿ ಕೊರೊನಾ ಅಬ್ಬರಿಸೀತು. ನಂತರ ವೈರಸ್ನ ವ್ಯಾಪಿಸುವಿಕೆ ಕಡಮೆಯಾಗುವ ಎಲ್ಲಾ ಸಾಧ್ಯತೆಗಳಿದೆ. ಅಲ್ಲಿಯವರೆಗೆ ತಪ್ಪಿಸಿಕೊಳ್ಳಲು ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರಗಳೇ ಪ್ರಬಲ ಅಸ್ತ್ರಗಳು.
ಮುಂದೇನಾದೀತು ? : ಆಗಲು ಹೆಚ್ಚಿನದ್ದೇನು ಉಳಿದಿಲ್ಲ. ಈಗಾಗಲೇ ವಿಶ್ವದ ಜನ ಕೊರೊನಾ ಧಾಳಿಯಿಂದ ನಲುಗಿದ್ದಾಗಿದೆ. ಹೊಸ ಜೀವನ ವ್ಯವಸ್ಥೆಗೆ ಒಗ್ಗಿಕೊಳ್ಳತೊಡಗಿದ್ದಾರೆ. ಲಕ್ಷಾಂತರ ಮಂದಿಯ ಉದ್ಯೋಗ ಕಳೆದುಹೋಗಿದೆ. ವೈಭವದ ದಿನಗಳು ದಿಢೀರನೆ ಇತಿಹಾಸದ ಪುಟ ಸೇರಿದೆ. ಕೊರೊನಾ ಮುಂದುವರೆದರೆ ಅದನ್ನು ತಪ್ಪಿಸಿಕೊಂಡೇ ಜೀವನ ಸಾಗಿಸುವ ಅನಿವಾರ್ಯತೆ ಪ್ರತಿಯೋರ್ವನಿಗೂ ಇದೆ.
ಕೊರೊನಾ ಹೊಡೆತದಿಂದ ದೇಶದ ಶೈಕ್ಷಣಿಕ ರಂಗ ತತ್ತರಿಸಿದೆ. ಅನೇಕ ಶಿಕ್ಷಣ ಸಂಸ್ಥೆಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಭಾರತದ ಭವಿಷ್ಯದ ಪ್ರಜೆಗಳನ್ನು ರೂಪಿಸಬೇಕಾದ ಶಿಕ್ಷಣ ರಂಗಕ್ಕೇ ಇಂಥ ಹೊಡೆತ ಲಭಿಸಿದ್ದರಿಂದಾಗಿ ಭವಿಷ್ಯದಲ್ಲಿ ಅನೇಕ ಪ್ರತಿಕೂಲ ಪರಿಣಾಮ ಎದುರಿಸಬೇಕಾದೀತು. ಭಾರತದಲ್ಲಿ ಅನಗತ್ಯ ವೆಚ್ಚ ಮಾಡಿ ವಿವಾಹ ಸಮಾರಂಭಗಳನ್ನು ಆಯೋಜಿಸುತ್ತಿದ್ದರು. ಕೊರೊನಾ ಪಿಡುಗು ಇಂಥ ವೈಭವದ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲು ಸೂಕ್ತ ಕಾರಣ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಸರಳ ವಿವಾಹ, ಕಾರ್ಯಕ್ರಮವೇ ಸರ್ಕಾರದ ನಿಯಮವಾಗಿ ಜಾರಿಯಾದೀತು. ಹೀಗಾಗಿ, ದಸರಾ, ಕಾವೇರಿ ಸಂಕ್ರಮಣದಂಥ ಲಕ್ಷಾಂತರ ಜನ ಸೇರುವ ಉತ್ಸವಗಳೂ ಕಡಿಮೆ ಜನರಿಂದ ಆಚರಣೆಯಾದೀತು.
ಮುಂದಿನ ಅಪಾಯಗಳೇನು ? : ಲಾಕ್ಡೌನ್ ದಿನಗಳ ಸಂಕಷ್ಟ ಖಂಡಿತಾ ಅಪಾಯಕಾರಿಯಾಗಿರಲಿಲ್ಲ. ಅದು ಕೊರೊನಾದಿಂದ ಜನರನ್ನು ಬಚಾವ್ ಮಾಡುವ ಪ್ರಬಲ ಅಸ್ತ್ರವಾಗಿತ್ತು. ಆದರೆ, ದೇಶದಲ್ಲಿ ಆರ್ಥಿಕತೆಯ ತಲ್ಲಣಕ್ಕೆ ಕಾರಣವಾಗಿದೆ. ಬಹುತೇಕ ಉದ್ಯಮ ಕಂಡು ಕೇಳರಿಯದ ರೀತಿಯಲ್ಲಿ ನಷ್ಟÀ್ಟಕ್ಕೊಳಗಾಗಿದೆ. ಜುಲೈ, ಆಗಸ್ಟ್ನಲ್ಲಿ ಮತ್ತೆ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಯಿದೆ. ಇಂಥವರಿಗೆ ಪರ್ಯಾಯ ಉದ್ಯೋಗ ಕಂಡುಹುಡುಕಬೇಕಾದ ಸವಾಲಿದೆ. ಕೈಗಾರಿಕೆ ಮತ್ತು ಕೃಷಿ ಕ್ಷೇತ್ರದ ನಡುವಿನ ಆಯ್ಕೆಗೆ ಹಲವರು ಮುಂದಾಗಬೇಕಾಗಿದೆ. ಪ್ರತೀ ರೂಪಾಯಿ ವೆಚ್ಚ ಮಾಡುವಾಗಲೂ ಮತ್ತೆ ಅದೇ ಹಣವನ್ನುಗಳಿಸುವುದು ಹೇಗೆ ಎಂಬ ಯೋಚನೆ ಮಾಡಲೇಬೇಕಾಗಿದೆ.
ಕೊರೊನಾ ಸಾಯಿಸಿಬಿಡುತ್ತೆ ಎನ್ನುವುದು ಖಂಡಿತಾ ತಪ್ಪು ಕಲ್ಪನೆ. ಕೊರೊನಾ ಬಂದವರೆಲ್ಲಾ ಸತ್ತು ಬಿಡುತ್ತಾರೆ ಎನ್ನುವುದೇ ಭ್ರಮೆ. ಕೊರೊನಾಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆಯನ್ನು ಭಾರತದಲ್ಲಿ ನೀಡಲಾಗುತ್ತಿದೆ. ಹೀಗಾಗಿ ಸೋಂಕು ತಗುಲಿದವರೆಲ್ಲಾ ಮರಣವನ್ನಪ್ಪುತ್ತಾರೆ ಎಂಬ ಆತಂಕ ಬೇಡವೇಬೇಡ. ಆದರೆ ರೋಗನಿರೋಧಕ ಶಕ್ತಿ ಕಮ್ಮಿ ಇದ್ದರೆ ಕೊರೊನಾ ಪ್ರಾಣ ಕೂಡ ತೆಗೆಯಬಹುದು ಎಂಬುದನ್ನೂ ಮರೆಯುವಂತಿಲ್ಲ.
ವಲಸಿಗರ ವಿಚಾರದಲ್ಲಿ ತಪ್ಪು ನಿರ್ಧಾರ : ಕೊರೊನಾ ತಡೆಯುವುದು ಸುಲಭ ಸಾಧ್ಯವಾದ ಪ್ರಕ್ರಿಯೆಯಲ್ಲ. ಆರಂಭದಲ್ಲಿ ವಿದೇಶಗಳಿಂದ ಭಾರತೀಯರನ್ನು ವಿಮಾನಗಳ ಮೂಲಕ ಸ್ವದೇಶಕ್ಕೆ ಕರೆತಂದದ್ದೇ ತಪ್ಪು ಎನ್ನುವ ವಾದವಿದೆ. ಆದರೆ, ನಮ್ಮದೇ ದೇಶದವರು ಬೇರೆ ದೇಶಗಳಲ್ಲಿ ಸಹಾಯ ಕೋರಿದಾಗ ಅಂಥವರನ್ನು ಮರಳಿ ದೇಶಕ್ಕೆ ಕರೆತರದಿದ್ದರೆ ಅದಕ್ಕೂ ಆರೋಪ ಎದುರಿಸಬೇಕಾಗಿತ್ತು. ಹೀಗೆ ವಿದೇಶಗಳಿಂದ ಬಂದವರನ್ನು ಕನಿಷ್ಟ 1ತಿಂಗಳಾದರೂ ಸಂಪರ್ಕ ತಡೆಯಲ್ಲಿ ಇರಿಸಿದ್ದರೆ ಈಗ ಎದುರಿಸುತ್ತಿರುವ ದುಸ್ಥಿತಿ ಬರುತ್ತಿರಲಿಲ್ಲವೇನೋ, ಅಂತೆಯೇ, ವಲಸೆ ಕಾರ್ಮಿಕರನ್ನು ಮರಳಿ ಅವರ ಗ್ರಾಮಕ್ಕೆ ತೆರಳಲು ಅನುಸರಿಸಿದ ತಪ್ಪು ಕ್ರಮಗಳಿಗೆ ಈಗ ದೊಡ್ಡ ಬೆಲೆ ತೆರುವಂತಾಗಿದೆ.
ಕೊಡಗಿನಲ್ಲಿ ಎಡವಿದ್ದು ಎಲ್ಲಿ : ಕೊಡಗು ಜಿಲ್ಲೆಯಲ್ಲಿ ಮೇ ಎರಡನೇ ವಾರದವರೆಗೂ ಎಲ್ಲವೂ ಸರಿಯಾಗಿತ್ತು. ಕೈಗೊಂಡ ಕ್ರಮಗಳು ಸಮರ್ಪಕವಾಗಿತ್ತು. ಆದರೆ ಯಾವಾಗ ರಾಜ್ಯ ಸರ್ಕಾರದ ನಿರ್ದೇಶನದಂತೆ ಚೆಕ್ಪೆÇೀಸ್ಟ್ಗಳಲ್ಲಿ ಆರೋಗ್ಯ ತಪಾಸಣೆಯನ್ನು ಕೈಬಿಡಲಾಯಿತೋ, ಚೆಕ್ಪೆÇೀಸ್ಟ್ಗಳಲ್ಲಿ ಬಿಗಿ ತಪಾಸಣೆ ಹಿಂಪಡೆಯಲಾಯಿತೋ ಕೊಡಗು ಕೂಡ ಎಲ್ಲರ ನಿಯಂತ್ರಣ ಕಳೆದುಕೊಂಡಿತು. ಕೊಡಗಿಗೆ ಪ್ರತ್ಯೇಕವಾದ ನಿಯಮ ಜಾರಿಗೊಳಿಸಲಾಗುವುದಿಲ್ಲ ಎಂಬ ಸರ್ಕಾರದ ನೀತಿಯೇ ಈಗ ಕೊಡಗಿಗೆ ಮಾರಣಾಂತಿಕವಾಗಿದೆ. ಸೋಂಕು ಪ್ರಕರಣಗಳಿಲ್ಲ ಎಂಬ ಭ್ರಮೆಯಿಂದ ಜನರೂ ಕೂಡ ಇತ್ತೀಚಿಗೆ ಬೇಕಾಬಿಟ್ಟಿಯಾಗಿ ವರ್ತಿಸಿದ್ದು ಕೂಡ ಕೊಡಗಿಗೆ ಶಾಪವಾಗಿ ಪರಿಣಮಿಸುತ್ತಿದೆ.
ಕೊನೇ ಹನಿ
ಕಂಟೈನ್ಮೆಂಟ್ ಎಂಬ ನರಕ : ಲಾಕ್ಡೌನ್ ದಿನಗಳಲ್ಲಿ ಪರಿಚಿತವಾದ ಹೊಸ ಪದದಲ್ಲಿ ಕಂಟೈನ್ಮೆಂಟ್, ಸೀಲ್ಡೌನ್ ಎಂಬುದೂ ಒಂದು. ಸೋಂಕು ಪೀಡಿತ ವ್ಯಕ್ತಿಯಿರುವ ಪ್ರದೇಶವನ್ನೇ ಕಂಟೈನ್ಮೆಂಟ್ ಜೋನ್ ಆಗಿ ಪರಿವರ್ತಿಸಿ ಇಡೀ ಪ್ರದೇಶವನ್ನೇ ಸೀಲ್ಡೌನ್ ಮಾಡಿ ಹೊರಗಿನವರು ವಲಯದೊಳಗೆ ಹೋಗದಂತೆ, ಒಳಗಿನವರು ಹೊರಗಡೆ ಬಾರದಂತೆ ಗಮನ ನೀಡುವ ಪ್ರಕ್ರಿಯೆಯೇ ಕಂಟೈನ್ಮೆಂಟ್.
28 ದಿನಗಳ ಕಾಲ ಮನೆಯಿಂದ ಹೊರಕ್ಕೇ ಬಾರದಂತೆ ಕಂಟೈನ್ಮೆಂಟ್ ಜೋನ್ ನಲ್ಲಿರಬೇಕಾದ ಸಾವಿರಾರು ಜನರ ಪಾಡು ಚಿಂತಿಸಿ.
ಎಂಥ ನರಕ ಇರಬಹುದು ಅದು ಓರ್ವ ಸೋಂಕಿತ ವ್ಯಕ್ತಿ ತಮ್ಮ ಪ್ರದೇಶದಲ್ಲಿ ಇದ್ದ ಮಾತ್ರಕ್ಕೇ ಆ ಪ್ರದೇಶದ ಜನರಿಗೆ ಮನೆಯೇ ಸೆರೆಮನೆಯಾದಂಥ ಶಿಕ್ಷೆ ಅನುಭವಿಸುವುದು ಖಂಡಿತಾ ಅವೈಜ್ಞಾನಿಕವೇ ಹೌದು.
ಇದೇ ರೀತಿ ಸ್ವಲ್ಪ ದಿನವಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಮಡಿಕೇರಿಯ ಕಂಟೈನ್ಮೆಂಟ್ ಜೋನ್ನಲ್ಲಿದ್ದ ಗೃಹಿಣಿಯ ಮಾನಸಿಕ ಯಾತನೆಗೆ ಅರ್ಥವಿದೆ. ಇಂಥ ನಿಯಮಗಳನ್ನು ಬದಲಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ಹರಿಸಲೇಬೇಕು ಎಂದು ಅನ್ನಿಸುವುದಿಲ್ಲವೇ ?