ಮಡಿಕೇರಿ, ಜೂ. 25: ಕೊರೊನಾ ಸೋಂಕಿತ ವ್ಯಕ್ತಿಗಳು ತಂಗಿದ್ದ ಜಿಲ್ಲೆಯ 15 ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ಅಲ್ಲಿನ ನಿವಾಸಿಗಳು ಮುಂದಿನ 28 ದಿನಗಳ ಕಾಲ ಮನೆಯಿಂದ ಹೊರ ಬರುವಂತಿಲ್ಲ. ಕೊನೆಯ 28ನೇ ದಿನ ಆ ಯಾವುದೇ ಪ್ರದೇಶಗಳಲ್ಲಿ ಸೋಂಕು ಕಾಣಿಸಿಕೊಂಡರೂ ಮತ್ತೆ 28 ದಿನಗಳ ಅವಧಿಯ ಕ್ವಾರಂಟೈನ್ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದಾರೆ.ಕೊಡಗಿನಲ್ಲಿ ಸ್ಪೋಟಗೊಳ್ಳುತ್ತಿರುವ ಕೊರೊನಾ ಕುರಿತು ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಣ್ಣೇಕರ್ ಉಪಸ್ಥಿತಿಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಒಟ್ಟು 15 ಕಡೆಗಳನ್ನು ಸೀಲ್‍ಡೌನ್ ಮಾಡಲಾಗಿದ್ದು, ನಿವಾಸಿಗಳಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಡಿಕೇರಿ ನಗರದ ಎಮ್.ಎಮ್ ವೃತ್ತದಿಂದ ಓಂಕಾರೇಶ್ವರ ರಸ್ತೆ, ಡೈರಿ ಫಾರಂ, ಕೋಟೆ ಮಾರಿಯಮ್ಮ ದೇವಾಲಯ ರಸ್ತೆ, ಪುಟಾಣಿನಗರ, ತಾಳತ್‍ಮನೆ ಹಾಗೂ ಕಗ್ಗೋಡ್ಲು, ವೀರಾಜಪೇಟೆಯ ಬಿಟ್ಟಂಗಾಲ, ಸೋಮವಾರಪೇಟೆ ತಾಲೂಕಿನ ಶಿರಂಗಾಲ, ದೊಡ್ಡಳ್ಳಿ, ಮುಳ್ಳೂರು, ಬಳುಗುಂದ ಹಾಗೂ ಕುಶಾಲನಗರದ ಹಲವು ಪ್ರದೇಶಗಳನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ. ಸಂಜೆ ವೇಳೆ ಪಾಲಿಬೆಟ್ಟದ 2 ನಿವಾಸಿಗಳಲ್ಲಿ ಸೋಂಕು ದೃಢವಾಗಿದ್ದು, ನಿವಾಸದ ಸುತ್ತ ಕಂಟೈನ್‍ಮೆಂಟ್ ವಲಯ ಎಂದು ಘೋಷಿಸಲಾಯಿತು.

ಸೋಮವಾರಪೇಟೆ, ಕರ್ಕಳ್ಳಿ ಬಾಣೆ ಹಾಗೂ ಮಡಿಕೇರಿ ತಾಲೂಕಿನ ಕೊಳಗದಾಳು ಗ್ರಾಮಗಳಿಂದ ತಲಾ 1 ಕೊರೊನಾ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಇಲ್ಲಿಯೂ ಕಂಟೈನ್‍ಮೆಂಟ್ ವಲಯಗಳನ್ನು ನಿರ್ಮಿಸಲಾಗಿದೆ. ವಾಹನ ಹಾಗೂ ಜನ ಸಂಚಾರವನ್ನು ನಿಷೇಧಿಸಲಾಗಿದ್ದು ಅಲ್ಲಿನ ನಿವಾಸಿಗಳಿಗೆ ಪ್ರತಿನಿತ್ಯ ಹಾಲು ಸರಬರಾಜು, 2 ದಿನಕ್ಕೊಮ್ಮೆ ತರಕಾರಿ ಹಾಗೂ ಅಗತ್ಯವಿದ್ದಲ್ಲಿ ವೈದ್ಯಕೀಯ ನೆರವನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಣೆ ನೀಡಿದರು. ತುರ್ತು ಸಂದರ್ಭಗಳಲ್ಲಿ ದೂರವಾಣಿ ಸಂಖ್ಯೆ 1077 ಅನ್ನು ಸಂಪರ್ಕಿಸಬಹುದೆಂದು ಅವರು ತಿಳಿಸಿದರು.

8 ಹೊಸ ಸೇರ್ಪಡೆ

ನಿನ್ನೆ ದಿನ 14 ಮಂದಿ ಕೊರೊನಾ ಪಾಸಿಟಿವ್ ಸೋಂಕಿತರ ಸೇರ್ಪಡೆಯೊಂದಿಗೆ ಒಟ್ಟು 22 ಇದ್ದ ಸಂಖ್ಯೆ ಇಂದು 8 ಸೇರ್ಪಡೆಯಿಂದ 30ಕ್ಕೆ ಏರಿಕೆಯಾಗಿದೆ. ಅವರಲ್ಲಿ 3 ಜನ ಗುಣಮುಖರಾಗಿದ್ದಾರೆ. ವೀರಾಜಪೇಟೆ ಶಾಂತಿನಗರದ ನಿವಾಸಿ ತಾಯಿ ಹಾಗೂ ಪುತ್ರ ಸೌದಿ ಅರೆಬಿಯಾದಿಂದ ಕಣ್ಣೂರು ವಿಮಾನ ನಿಲ್ದಾಣದ ಮೂಲಕ ಕೊಡಗಿಗೆ ಆಗಮಿಸಿದ್ದು ಇಬ್ಬರಿಗೂ ಕೊರೊನಾ ಪತ್ತೆಯಾಗಿದೆ. ಜಿಲ್ಲೆಗೆ ಆಗಮನದ ನಂತರ ವೀರಾಜಪೇಟೆಗೆ ತೆರಳದೆ ನೇರವಾಗಿ ಆಸ್ಪತ್ರೆಗೆ ಬಂದಿದ್ದರಿಂದ ಅವರ ಪ್ರಾಥಮಿಕ ಸಂಪರ್ಕ ಬೇರೆ ಯಾರೊಂದಿಗೂ ಆಗಿರುವುದಿಲ್ಲ.

ಬಿಟ್ಟಂಗಾಲದಲ್ಲಿ ಹೋಂಸ್ಟೇ ನಡೆಸುತ್ತಿದ್ದ ಮನೆಗೆ ಕೊರೊನಾ ಸೋಂಕಿತ ವ್ಯಕ್ತಿ ಆಗಮಿಸಿದ್ದು ಅವರ ಮೂಲಕ 70 ವರ್ಷದ ವೃದ್ಧೆಗೆ ಸೋಂಕು ತಗುಲಿದೆ. ಈ ವೃದ್ಧೆಯ ಪ್ರವಾಸದ ಇತಿಹಾಸವಿಲ್ಲದಿದ್ದರೂ ಅಲ್ಲಿಗೆ ಬಂದಿದ್ದ ಅತಿಥಿಯಿಂದಲೇ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಮತ್ತೊಬ್ಬರು ಭೂಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಅಸ್ಸಾಂನಿಂದ ಸೋಮವಾರಪೇಟೆ ತಾಲೂಕಿನ ಮುಳ್ಳೂರಿಗೆ ಆಗಮಿಸಿದ್ದರು.

ತಮಿಳುನಾಡಿನಿಂದ ಇತ್ತೀಚೆಗೆ ಹಿಂತಿರುಗಿದ ಪಾಲಿಬೆಟ್ಟದ ದಂಪತಿಗಳಿಗೂ ಸೋಂಕು ದೃಢವಾಗಿದೆ.

ರಾತ್ರಿ 8 ಗಂಟೆ ವೇಳೆಗೆ ಇನ್ನಿಬ್ಬರು ಪಾಸಿಟಿವ್ ಸೋಂಕಿಗೆ ಒಳಗಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊಡ್ಲಿಪೇಟೆ, ಶಿರಂಗಾಲದ ಸೋಂಕಿತ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಪಡೆದಿರುವ ಸೋಮವಾರಪೇಟೆ ಕರ್ಕಳ್ಳಿ ಬಾಣೆಯ 14 ವರ್ಷ ಪ್ರಾಯದ ಯುವತಿಯನ್ನು ಮಡಿಕೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ವ್ಯಕ್ತಿ ಮಡಿಕೇರಿ ತಾಲೂಕು ಕೊಳಗದಾಳು ಗ್ರಾಮದ 26 ಪ್ರಾಯದ ಯುವಕನಾಗಿದ್ದು, ಕತಾರ್‍ನಿಂದ ಹಿಂತಿರುಗಿದ್ದು, ಸೋಂಕು ದೃಢಪಟ್ಟ ಹಿನ್ನೆಲೆ ಮಡಿಕೇರಿಗೆ ಸ್ಥಳಾಂತರಿಸಲಾಗಿದೆ.

ನಿನ್ನೆ ಕೊರೊನಾ ಸೋಂಕಿಗೆ ತುತ್ತಾದ 14 ಮಂದಿಯಲ್ಲಿ ಮಡಿಕೇರಿಯ 4 ಮಂದಿ ವೈದ್ಯರು, ವೈದ್ಯರ ಸಹಾಯಕಿ, ಸರಕಾರಿ ಆಸ್ಪತ್ರೆಯ (ಅಶ್ವಿನಿ) ಇಬ್ಬರು ಸಹಾಯಕ ಸಿಬ್ಬಂದಿ ಸೇರಿದ್ದು, ಉಳಿದಂತೆ ಕುಶಾಲನಗರ ಔಷಧಿ ಅಂಗಡಿ ಮಾಲೀಕ, ಪಿರಿಯಾಪಟ್ಟಣದಿಂದ ಮಡಿಕೇರಿಗೆ ಆಗಮಿಸಿದ್ದ ರೋಗಿ, ಶಿರಂಗಾಲದ ಇಬ್ಬರು ಮೆಕಾನಿಕ್‍ಗಳು ಸೇರಿದ್ದಾರೆ. ಇವರೊಂದಿಗೆ ಈ ಹಿಂದೆ ಮುಂಬೈನಿಂದ ಆಗಮಿಸಿ ಕೊರೊನಾ ರೋಗಿಯಾಗಿ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯ ಪತಿ ಹಾಗೂ ಇಬ್ಬರು ಸಂಬಂಧಿಕರು ಸೇರಿದ್ದಾರೆಂದು ಅನೀಸ್ ಮಾಹಿತಿ ನೀಡಿದರು.

ಕೋವಿಡ್ ಆಸ್ಪತ್ರೆಯಾಗಿ ಮಾರ್ಪಾಡುಗೊಂಡಿರುವ ಮಡಿಕೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮಕ್ಕಳ ಹಾಗೂ ಸ್ತ್ರೀ ರೋಗ ತಾಪಾಸಣಾ ವಿಭಾಗಕ್ಕೆ ಯಾವುದೇ ತೊಂದರೆ ಇಲ್ಲದಿದ್ದು, ಇದೀಗ ಸರಕಾರಿ ಆಸ್ಪತ್ರೆಯಾಗಿ ಮಾರ್ಪಾಡಾಗಿರುವ ಅಶ್ವಿನಿ ಆಸ್ಪತ್ರೆಯಲ್ಲಿ ನಿನ್ನೆ

(ಮೊದಲ ಪುಟದಿಂದ) ಪ್ರಕರಣಗಳು ಕಂಡು ಬಂದದ್ದರಿಂದ ಮುಂದಿನ ಆದೇಶದವರೆಗೆ ಕೇವಲ ತುರ್ತು ಮತ್ತು ಆಕಸ್ಮಿಕ ಪ್ರಕರಣಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಅವರು ತಿಳಿಸಿದರು.

ಅಶ್ವಿನಿ ಆಸ್ಪತ್ರೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ ಎಂದು ಅವರು ಮಾಹಿತಿ ಇತ್ತರು. ಈ ಆಸ್ಪತ್ರೆಯಲ್ಲಿರುವ 14 ಒಳರೋಗಿಗಳು ಅಲ್ಲಿಯೇ ಚಿಕಿತ್ಸೆ ಪಡೆಯಲಿದ್ದಾರೆಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ವೈದ್ಯರ ಕೊರತೆಯಿಲ್ಲ

ನಿನ್ನೆ 4 ವೈದ್ಯರುಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದರೂ ಇದೀಗ ಮತ್ತೆ ವೈದ್ಯರ ತಂಡವನ್ನು ಸಿದ್ದಪಡಿಸಲಾಗಿದೆ. ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ 250 ಹಾಸಿಗೆಗಳ ಸಾಮರ್ಥವಿದ್ದು ಜಿಲ್ಲೆಯ ವಿವಿಧೆಡೆ ಕೋವಿಡ್ ಕೇರ್ ಕೇಂದ್ರಗಳ ಸ್ಥಾಪನೆ ಮಾಡಿರುವುದರಿಂದ ಯಾವುದೇ ಸಂದರ್ಭವನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ವಿವರಿಸಿದ ಜಿಲ್ಲಾಧಿಕಾರಿ ಈ ಬಗ್ಗೆ ತುರ್ತು ಸಭೆ ನಡೆಸಿ ಅದರ ಜವಾಬ್ದಾರಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ಅವರಿಗೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಜನತೆ ಇದುವರೆಗೆ ನೀಡಿರುವ ಸಹಕಾರವನ್ನು ಸ್ಮರಿಸಿಕೊಂಡ ಜಿಲ್ಲಾಧಿಕಾರಿ, ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜನ ಇನ್ನೂ ಹೆಚ್ಚಿನ ಜಾಗರೂಕತೆ ವಹಿಸಿ ಕೊರೊನಾ ನಿಯಂತ್ರಣಕ್ಕೆ ಸಹಕರಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮೋಹನ್ ಉಪಸ್ಥಿತರಿದ್ದರು.