ಮಡಿಕೇರಿ, ಜೂ. 25: ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯ ತೀರ್ಮಾನದಂತೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪರೀಕ್ಷೆ ಆರಂಭಗೊಂಡಿದೆ. ಮೊದಲ ದಿನವಾದ ಇಂದು ಆಂಗ್ಲ ಪಠ್ಯ ಕ್ರಮ ಪರೀಕ್ಷೆಯಲ್ಲಿ 6,749 ಜಿಲ್ಲೆಯ ಒಟ್ಟು ವಿದ್ಯಾರ್ಥಿಗಳ ಪೈಕಿ 6,385 ಮಕ್ಕಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. 381 ವಿದ್ಯಾರ್ಥಿಗಳು ವಿವಿಧ ಕಾರಣದಿಂದ ಪರೀಕ್ಷೆಗೆ ಗೈರಾಗಿದ್ದಾರೆ. ಈ ಪೈಕಿ ಮಡಿಕೇರಿ ತಾಲೂಕು 138, ವೀರಾಜಪೇಟೆ ತಾಲೂಕು 184, ಸೋಮವಾರಪೇಟೆ ತಾಲೂಕಿನ 61 ಮಕ್ಕಳು ಪರೀಕ್ಷೆಗೆ ಗೈರಾಗಿದ್ದರು.ಕೊಡಗಿನಲ್ಲಿ ಮಡಿಕೇರಿ ತಾಲೂಕಿನಲ್ಲಿ 8, ವೀರಾಜಪೇಟೆ ತಾಲೂಕಿನಲ್ಲಿ 9, ಸೋಮವಾರಪೇಟೆ ತಾಲೂಕಿನ 11 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆಯೊಂದಿಗೆ ಯಾವುದೇ ಗೊಂದಲ; ಕೊರೊನಾ ಸೋಂಕಿನ ಆತಂಕಕ್ಕೆ ಅವಕಾಶವಾಗದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದಿಂದ ವಿಶೇಷ ಕಾಳಜಿಯೊಂದಿಗೆ ಮಕ್ಕಳಿಗೆ ವ್ಯವಸ್ಥೆ ಕಲ್ಪಿಸಿತ್ತು.ಮಕ್ಕಳ ಸ್ಪಂದನ: ಈ ಬೆಳಿಗ್ಗೆ 7.45ರ ವೇಳೆಗೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ-ಆರೋಗ್ಯ-ಪೊಲೀಸ್ ತಂಡದೊಂದಿಗೆ ಸ್ಕೌಟ್-ಗೈಡ್ ಬಳಗ ಆಗಮಿಸಿ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದರೆ, ಆ ವೇಳೆಯಿಂದಲೇ ಮಕ್ಕಳು ಪೋಷಕರ ನೆರವಿನೊಂದಿಗೆ ಆಗಮಿಸಿ ಪರೀಕ್ಷೆ ಬರೆಯಲು ಉತ್ಸಾಹದಿಂದಲೇ ಸ್ಪಂದಿಸಿದಾಗಿ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಗದಿತ ಸಮಯ 10.30 ಗಂಟೆಯಿಂದ ಮಧ್ಯಾಹ್ನ 1.30ರ ಅವಧಿಯೊಳಗೆ ಹಾಜರಾಗಿದ್ದ

ಎಲ್ಲ ಮಕ್ಕಳು ಪರೀಕ್ಷೆ ಬರೆದು

ಸುರಕ್ಷಿತ ರೀತಿಯಲ್ಲಿ ಮರಳಿ ಮನೆಗಳಿಗೆ ತಲುಪಿರುವುದಾಗಿಯೂ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ‘ಶಕ್ತಿ’ಯೊಂದಿಗೆ ಖಚಿತ ಪಡಿಸಿದ್ದಾರೆ.

(ಮೊದಲ ಪುಟದಿಂದ)

ಮುನ್ನೆಚ್ಚರಿಕೆ ಕ್ರಮ: ಕೊಡಗಿನ ಎಲ್ಲ 27 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಥರ್ಮಲ್ ಸ್ಕ್ರೀನಿಂಗ್, ಬಿಸಿನೀರು, ಸ್ಯಾನಿಟೈಸರ್, ಮಾಸ್ಕ್ ಸಹಿತ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಸಾಮಾಜಿಕ ಅಂತರ ಕಾಪಾಡುವಲ್ಲಿ ನಿಗಾವಹಿಸಲಾಗಿತ್ತು.

ವಿಶೇಷ ಕ್ರಮ: ಕೇರಳದಿಂದ ಮರಳುವದರೊಂದಿಗೆ ಎಸ್ಸೆಸ್ಸೆಲ್ಸ್ಸಿ ಪರೀಕ್ಷೆಗೆ ಹಾಜರಾಗಿದ್ದ ಮೂವರು, ಹೊರ ಜಿಲ್ಲೆಗಳಿಂದ ವಾಪಾಸ್ಸಾಗಿದ್ದ 130 ವಿದ್ಯಾರ್ಥಿಗಳು, ಗ್ರಾಮೀಣ ಭಾಗದಿಂದ ವಸತಿ ನಿಲಯಗಳಲ್ಲಿ ತಂಗಿದ್ದ 347 ಮಕ್ಕಳಿಗೆ ನಿಯಮಗಳಂತೆ ವಿಶೇಷ ವ್ಯವಸ್ಥೆ ರೂಪಿಸಿದ್ದಾಗಿಯೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೀರಾಜಪೇಟೆ: ವೀರಾಜಪೇಟೆ ತಾಲೂಕಿನಾದ್ಯಂತ 9 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯ ತಪಾಸಣೆಯೊಂದಿಗೆ ಪೊಲೀಸ್ ಬಿಗಿ ಬಂದೋಬಸ್ತ್ತ್‍ನೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿತ್ತು.

ವೀರಾಜಪೇಟೆ ಪಟ್ಟಣದಲ್ಲಿ ಸಂತ ಅನ್ನಮ್ಮ ಪ್ರೌಢ ಶಾಲೆ ಹಾಗೂ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ಪರೀಕ್ಷಾ ಕೇಂದ್ರವನ್ನು ಏರ್ಪಡಿಸಲಾಗಿತ್ತು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಇಂದು ಬೆಳಗಿನ 7-30 ಗಂಟೆಯಿಂದಲೇ ಪರೀಕ್ಷಾ ಕೇಂದ್ರಕ್ಕೆ ಬರಲು ಆರಂಭಿಸಿದ್ದು, ಬೆಳಗಿನ 9-30 ಗಂಟೆಯ ತನಕವೂ ವಿದ್ಯಾರ್ಥಿಗಳಿಗೆ ಪ್ರವೇಶ ಮುಂದುವರೆಸಲಾಗಿತ್ತು.

ವೀರಾಜಪೇಟೆಯ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸರದಿ ಪ್ರಕಾರ ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಸಿ ಕೈ ಶುಚಿಗೊಳಿಸುವುದು, ನಂತರ ಥರ್ಮಲ್ ಸ್ಕ್ರೀನ್ ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಡಲಾಗುತ್ತಿತ್ತು.

ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶೈಲ ಬಿಳಗಿ ಅವರು ತಾಲೂಕಿನಲ್ಲಿ ವಿವಿಧೆಡೆಗಳಲ್ಲಿರುವ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು 16 ಮಾರ್ಗಗಳಿಗೆ 28 ಖಾಸಗಿ ಬಸ್ಸುಗಳನ್ನು ಗೊತ್ತುಪಡಿಸಲಾಗಿತ್ತು. ಬಸ್‍ನಲ್ಲಿ ಪ್ರಯಾಣಿಸುವಾಗಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು. ಕುಟ್ಟದ ಗಡಿ ಭಾಗದಲ್ಲಿರುವ ವಿದ್ಯಾರ್ಥಿಗಳನ್ನು ನಿನ್ನೆ ದಿನ ಸಂಜೆಯೇ ಪರೀಕ್ಷಾ ಕೇಂದ್ರದ ಬಳಿಗೆ ಕರೆದೊಯ್ಯಲಾಗಿತ್ತು. ತಾಲೂಕಿನ ಎಂಟು ಪರೀಕ್ಷಾ ಕೇಂದ್ರಗಳ ವ್ಯವಸ್ಥೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಿಬ್ಬಂದಿಗಳು ನೋಡಿಕೊಂಡಿದ್ದಾಗಿ ವಿವರಿಸಿದರು.

ವೀರಾಜಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಕ್ಯಾತೆಗೌಡ ನೇತೃತ್ವದಲ್ಲಿ ಪರೀಕ್ಷಾ ಕೇಂದ್ರಗಳಿಗೆ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪರೀಕ್ಷಾ ಕೇಂದ್ರದ ನೂರು ಮೀಟರ್ ಅಂತರದಲ್ಲಿ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ವೀರಾಜಪೇಟೆಯ ಜೂನಿಯರ್ ಕಾಲೇಜಿನಲ್ಲಿ 448 ಮಂದಿ ಹಾಗೂ ಸಂತ ಅನ್ನಮ್ಮ ಶಾಲೆಯಲ್ಲಿ 431 ಮಂದಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಜೂನಿಯರ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ನೀತಾ ಕುಮಾರಿ ಹಾಗೂ ಇಲ್ಲಿನ ಸಂತ ಅನ್ನಮ್ಮ ಪ್ರೌಢಶಾಲೆಯಲ್ಲಿ ಬೆನ್ನಿ ಜೋಸೆಫ್ ಪರೀಕ್ಷಾ ಕೇಂದ್ರದ ಉಸ್ತುವಾರಿಯಲ್ಲಿದ್ದರು.

ವೀರಾಜಪೇಟೆ ತಾಲೂಕು ತಹಶೀಲ್ದಾರ್ ಎಲ್.ಎಂ. ನಂದೀಶ್, ಸಿಬ್ಬಂದಿಗಳು ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ, ನೋಡಲ್ ಅಧಿಕಾರಿ ಪಿ. ಅಯ್ಯಪ್ಪ ವೀರಾಜಪೇಟೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದರು.

ತಾಲೂಕಿನ 2173 ವಿದ್ಯಾರ್ಥಿಗಳ ಪೈಕಿ 184 ಮಂದಿ ಗೈರು ಹಾಜರಾಗಿದ್ದು ಒಟ್ಟು1920 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಹೊರ ಜಿಲ್ಲೆಯಿಂದ ವಲಸೆ ಬಂದ 15ಮಂದಿ ವೀರಾಜಪೇಟೆಯಲ್ಲಿ ಪರೀಕ್ಷೆ ಬರೆದರೆ ಕೊಡಗಿನ 60 ಮಂದಿ ಹೊರ ಜಿಲ್ಲೆಯಲ್ಲಿ ವಲಸೆ ಹೋಗಿ ಪರೀಕ್ಷೆ ಬರೆದಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.

ನಾಪೆÇೀಕ್ಲು, ನಾಪೆÇೀಕ್ಲು ಪರೀಕ್ಷಾ ಕೇಂದ್ರದಲ್ಲಿ ಸರಕಾರದ ಆದೇಶದಂತೆ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್, ಮಾಸ್ಕ್ ಸೇರಿದಂತೆ ಸಕಲ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭಗೊಂಡಿತು.

ಕೇಂದ್ರದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ, ಶ್ರೀ ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ, ಸೇಕ್ರೆಡ್ ಹಾಟ್ರ್ಸ್ ಆಂಗ್ಲ ಮಾಧ್ಯಮ ಶಾಲೆ, ಹೊದವಾಡ ಮತ್ತು ಎಮ್ಮೆಮಾಡು ಸರಕಾರಿ ಪ್ರೌಢಶಾಲೆ, ಬಲ್ಲಮಾವಟಿ, ಕಕ್ಕಬ್ಬೆ, ನರಿಯಂದಡ ಅನುದಾನಿತ ಪ್ರೌಢಶಾಲೆಯ ಒಟ್ಟು 401 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕೊರೊನಾ ಭೀತಿಯಿಂದ ಹಾಗೂ ಸರಿಯಾದ ಬಸ್ ವ್ಯವಸ್ಥೆಯಿಲ್ಲದ ಕಾರಣ ಪೆÇೀಷಕರೇ ಖುದ್ದಾಗಿ ತಮ್ಮ ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಬಿಡುವದು, ವಾಪಾಸು ಕರೆದೊಯ್ಯುವುದು ಕಂಡು ಬಂತು.

ಕೂಡಿಗೆ: ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜುವಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಂಜಾಗ್ರತಾ ಕ್ರಮಗಳ ನಡುವೆ ವ್ಯವಸ್ಥಿತ ವಾಗಿ ನೆಡೆಯಿತು. ಈ ಪರೀಕ್ಷಾ ಕೇಂದ್ರದಲ್ಲಿ ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆಯ ವತಿಯಿಂದ ತಪಾಸಣೆ ಮತ್ತು ಆಶಾ ಕಾರ್ಯಕರ್ತೆಯರು ಸ್ಯಾನಿಟೈಸರ್ ಹಾಕಿ ಸಾಮಾಜಿಕ ಅಂತರದಲ್ಲಿ ಮಾಸ್ಕ್ ಧರಿಸಿ ಪರೀಕ್ಷೆಯ ಸಭಾಂಗಣಕ್ಕೆ ಕಳುಹಿಸಲಾಯಿತು ಈ ಕೇಂದ್ರದಲ್ಲಿ ನೊಂದಾಯಿತ 163 ವಿದ್ಯಾರ್ಥಿಗಳು ಇದ್ದರು. ಅವರುಗಳಲ್ಲಿ ಮೂವರು ವಿದ್ಯಾರ್ಥಿಗಳು ಗೈರಾಗಿದ್ದರು. ಪರೀಕ್ಷಾ ಕೇಂದ್ರದ ಮುಖ್ಯಸ್ಥರಾಗಿ ಬಿ.ಆರ್. ಕುಮಾರ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಶಿಕ್ಷಕರು ಕಾರ್ಯನಿರ್ವಹಿಸಿದರು. ಅಲ್ಲದೆ ಪರೀಕ್ಷಾ ಕೇಂದ್ರಕ್ಕೆ ಜಿಲ್ಲೆಯ ಜಾಗೃತ ದಳದವರು ಪರಿಶೀಲನೆ ನಡೆಸಿದರು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು.

ಸಿದ್ದಾಪುರ: ನೆಲ್ಯಹುದಿಕೇರಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮೂರು ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲಾಯಿತು. ಪರೀಕ್ಷೆಯ ಮುಂಚಿತವಾಗಿ ಸ್ಯಾನಿಟೈಸರ್ ಸಿಂಪಡಿಸಲಾಗಿತ್ತು. ಪರೀಕ್ಷೆ ಕೇಂದ್ರದ ಬಳಿ ಆರೋಗ್ಯ ಇಲಾಖೆ ವತಿಯಿಂದ ಪರೀಕ್ಷೆಗೆ ತೆರಳುವ ಮುಂಚಿತ ಎಲ್ಲಾ ಮಕ್ಕಳ ಕೈಗೆ ಸ್ಯಾನಿಟೈಸರ್ ನೀಡಿ ಆರೋಗ್ಯ ತಪಾಸಣೆ ಮಾಡಲಾಯಿತು. ಪರೀಕ್ಷೆಗೆ ಒಟ್ಟು 186 ಮಕ್ಕಳು ಹಾಜರಾಗಿ ಪರೀಕ್ಷೆಯನ್ನು ಬರೆದರು. ಪರೀಕ್ಷೆ ನಡೆಯುವ ಕೊಠಡಿಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಯಿತು. ಅಲ್ಲದೇ ಜ್ವರ ಹಾಗೂ ಶೀತ ಇರುವ ಮಕ್ಕಳಿಗೆ ಪ್ರತ್ಯೇಕ ಕೊಠಡಿಗಳನ್ನು ಸಿದ್ಧಪಡಿಸಲಾಗಿತ್ತು. ಪರೀಕ್ಷೆಯ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಹಾಜರಾಗಿದ್ದ ಶಿಕ್ಷಕರುಗಳು ಕೂಡ ಮಾಸ್ಕ್ ಧರಿಸಿದ್ದರು. ಸಿದ್ದಾಪುರದ ಠಾಣಾಧಿಕಾರಿ ಮೋಹನ್‍ರಾಜ್ ನೇತೃತ್ವದಲ್ಲಿ ಪರೀಕ್ಷಾ ಕೇಂದ್ರದ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ನಂಜರಾಯಪಟ್ಟಣ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರತಾಪ್ ಸಾಗರ್ ಹಾಗೂ ಚೆಟ್ಟಳ್ಳಿ ವೈದ್ಯಾಧಿಕಾರಿ ಡಾ.ಯಶೋಧ ನೇತೃತ್ವದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ಮಕ್ಕಳ ಆರೋಗ್ಯವನ್ನು ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸರ್ಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ಅನಿಲ್, ಶಿಕ್ಷಕ ಎ.ಎಂ ಭರತ್ ಕುಮಾರ್ ಹಾಗೂ ಸ್ಥಳೀಯ ಪ್ರಾಥಮಿಕ ಶಾಲೆಯ ಶಿಕ್ಷಕರು ಪರೀಕ್ಷೆಯ ಉಸ್ತುವಾರಿಯನ್ನು ನೋಡಿಕೊಂಡಿದ್ದರು.

ಸೋಮವಾರಪೇಟೆ: ಕೋವಿಡ್-19 ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ತಾಲೂಕಿನ 2501 ವಿದ್ಯಾರ್ಥಿಗಳು ಹಾಜರಾಗಿ, ಪರೀಕ್ಷೆ ಎದುರಿಸಿದರು. 61 ವಿದ್ಯಾರ್ಥಿಗಳು ಪ್ರಥಮ ಪರೀಕ್ಷೆಗೆ ಗೈರು ಹಾಜರಾಗಿದ್ದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಅಗತ್ಯವಾದ ಪೂರ್ವ ತಯಾರಿಯನ್ನು ಮಾಡಿಕೊಂಡಿತ್ತು. ತಾಲೂಕಿನ 11 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಯಾವದೇ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ತಿಳಿಸಿದರು.

ಒಂದು ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಪ್ರತಿ ಪರೀಕ್ಷಾ ಕೇಂದ್ರದಲ್ಲಿ 2 ಹೆಚ್ಚುವರಿ ಕೊಠಡಿ ಮೀಸಲಾಗಿದೆ. ಜ್ವರ ಲಕ್ಷಣಗಳು ಕಂಡು ಬಂದರೆ ಅವರಿಗೆ ಪ್ರತ್ಯೇಕವಾಗಿ ಬೇರೆ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಪ್ರತಿ ವಿದ್ಯಾರ್ಥಿಗಳಿಗೆ ಹ್ಯಾಂಡ್ ಸ್ಯಾನಿಟೈಸರ್ ಮತ್ತು ಮುಖದ ಗವಸುಗಳನ್ನು ಇಲಾಖೆಯಿಂದ ನೀಡಲಾಗಿದೆ.

ತಾಲೂಕಿನ 11 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2562 ವಿದ್ಯಾರ್ಥಿಗಳ ಪೈಕಿ, 2501 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. 61 ವಿದ್ಯಾರ್ಥಿಗಳು ಗೈರಾಗಿದ್ದಾರೆ. 28 ವಿದ್ಯಾರ್ಥಿಗಳು ಕಂಟೈನ್‍ಮೆಂಟ್ ವಲಯದಿಂದ ಬಂದು ಪರೀಕ್ಷೆ ಬರೆದರು.

ಅನಾರೋಗ್ಯ ಕಾರಣದಿಂದ 7 ವಿದ್ಯಾರ್ಥಿಗಳು ವಿಶೇಷ ಕೊಠಡಿಯಲ್ಲಿ ಹಾಗು 64 ಮಂದಿ ವಲಸೆ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಸೋಮವಾರಪೇಟೆ ಪಟ್ಟಣದಲ್ಲಿ 3 ಕಂಟೈನ್‍ಮೆಂಟ್ ವಲಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

ಪೆÇನ್ನಂಪೇಟೆ: ಕೊರೊನಾ ಆತಂಕದ ನಡುವೆಯೂ ಇಂದಿನಿಂದ ಪ್ರಾರಂಭಗೊಂಡ ಎ.ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಪೆÇನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದರ ಜೊತೆಗೆ, ಥರ್ಮಲ್ ಸ್ಕ್ಯಾನಿಂಗ್ ಮಾಡಿ, ಕೈಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ಪರೀಕ್ಷಾ ಕೊಠಡಿಯ ಒಳಗೆ ಬಿಡಲಾಯಿತು. ಪರೀಕ್ಷಾ ಕೊಠಡಿಯಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ 3 ಅಡಿ ಅಂತರ ಬಿಟ್ಟು ಬೆಂಚ್‍ಗಳನ್ನು ಜೋಡಿಸಲಾಗಿತ್ತು. ವಿದ್ಯಾರ್ಥಿಗಳು ಯಾವುದೇ ಭಯಾತಂಕವಿಲ್ಲದೆ ಮೊದಲ ದಿನ ನಿಗದಿಯಾಗಿದ್ದ ಇಂಗ್ಲಿಷ್ ಭಾಷಾ ಪರೀಕ್ಷೆ ಬರೆದರು.

ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಆನ್ ರೀತ್ ಪೆÇಟ್ರಾಡೊ ಅವರ ಮಾರ್ಗದರ್ಶನದಲ್ಲಿ ಪರೀಕ್ಷೆ ನಡೆಯಿತು. ಪರೀಕ್ಷಾ ಕೇಂದ್ರದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ, ಸಾಯಿಶಂಕರ ಶಾಲೆ, ಅಪ್ಪಚ್ಚು ಕವಿ ಶಾಲೆ, ಸಂತ ಅಂತೋಣಿ ಶಾಲೆ ಹಾಗೂ ಬೆಕ್ಕೆಸೊಡ್ಲೂರುವಿನ ಶಾರದಾ ಪ್ರೌಢಶಾಲೆ ಸೇರಿದಂತೆ ಪರೀಕ್ಷೆ ತೆಗೆದುಕೊಂಡಿದ್ದ 296 ವಿದ್ಯಾರ್ಥಿಗಳಲ್ಲಿ 295 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಒಬ್ಬ ವಿದ್ಯಾರ್ಥಿ ಗೈರು ಹಾಜರಾಗಿದ್ದರು.

ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಕರೆತರಲು ಶಿಕ್ಷಣ ಇಲಾಖೆ, ಖಾಸಗಿ ಶಾಲೆಗಳ ಶಾಲಾ ವಾಹನವನ್ನು ಬಳಸಿಕೊಂಡಿದ್ದರು. ಶಿಕ್ಷಣ ಇಲಾಖೆ ಪರೀಕ್ಷಾ ಸಂದರ್ಭ ಕಟ್ಟು ನಿಟ್ಟಿನ ಮುಂಜಾಗೃತಾ ಕ್ರಮ ಕೈಗೊಂಡಿದ್ದರೂ ಕೂಡ ಬಹಳಷ್ಟು ಪೆÇೀಷಕರು ಪರೀಕ್ಷಾ ಕೇಂದ್ರದ ಆವರಣದ ಹೊರಗೆ ನಿಂತು ಪರೀಕ್ಷೆ ಬರೆದು ಬರುವ ತಮ್ಮ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಲು ಆತಂಕದಲ್ಲೇ ಕಾಯುತ್ತಿರುವಂತೆ ಕಾಣುತಿತ್ತು.

ಪರೀಕ್ಷೆ ಮುಗಿದ ನಂತರ ಪರೀಕ್ಷಾ ಕೊಠಡಿ ಹಾಗೂ ಶಾಲಾ ಆವರಣಕ್ಕೆ ಪೆÇನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ರೋಗ ತಡೆ ದ್ರಾವಣ ಸಿಂಪಡಿಸಲಾಯಿತು.

ಪಾಲಿಬೆಟ್ಟ: ಪಾಲಿಬೆಟ್ಟ ಸರಕಾರಿ ಪ್ರೌಢಶಾಲೆ, ನಮ್ಮ ಪ್ರೌಢಶಾಲೆ, ಲೂಡ್ರ್ಸ್ ಪ್ರೌಢಶಾಲೆ, ಮಾಲ್ದಾರೆ ಪ್ರೌಢಶಾಲೆ ಮತ್ತು ಚೆನ್ನಯ್ಯನಕೋಟೆ ಪ್ರೌಢಶಾಲೆಯ 83 ಬಾಲಕರು 75 ಬಾಲಕಿಯರು ಇಂದು ಬೆಳಿಗ್ಗೆ 10.30 ಗಂಟೆಯಿಂದ 1.30 ಗಂಟೆಯವರೆಗೆ ಪರೀಕ್ಷೆ ಬರೆದರು.

ದೂರದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಬರಲು 5 ಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಒಂದು ಬೆಂಚಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಕುಳಿತು ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರಲು ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದಲ್ಲಿ ನಿಯೋಜಿಸಿದ್ದ ಯಾವುದೇ ಅಧಿಕಾರಿಗಳು ಮೊಬೈಲ್ ಪೋನ್ ಬಳಸುವಂತೆ ಇರಲಿಲ್ಲ. ಪರೀಕ್ಷಾ ಕೇಂದ್ರದ ಮುಖ್ಯಾಧಿಕಾರಿ ಗಾಯತ್ರಿ ಅವಶ್ಯಕತೆ ಇದ್ದಲ್ಲಿ ಮಾತ್ರ ಮೊಬೈಲ್ ಫೋನ್ ಬಳಸಬಹುದಿತ್ತು. ಇವರೊಂದಿಗೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಜೈಸಿ ಜೋಸೆಫ್, ಸಮೂಹ ಸಂಪನ್ಮೂಲ ವ್ಯಕ್ತಿ ಕೆ.ಸಿ. ಕರುಂಬಯ್ಯ ಪರೀಕ್ಷಾ ಕೇಂದ್ರದ ಉಸ್ತುವಾರಿಯನ್ನು ನೋಡಿಕೊಂಡಿದ್ದರು.

ಶನಿವಾರಸಂತೆ: ಶನಿವಾರಸಂತೆಯ ಪದವಿ ಪೂರ್ವ ಕಾಲೇಜು, ಭಾರತೀ ವಿದ್ಯಾಸಂಸ್ಥೆ ಪರೀಕ್ಷಾ ಕೇಂದ್ರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯಿತು.

12 ಪರೀಕ್ಷಾ ಕೊಠಡಿಗಳು ಹಾಗೂ ಶಿರಂಗಾಲ ಗ್ರಾಮ ಸೀಲ್‍ಡೌನ್ ಆಗಿರುವ ಕಾರಣ ಆ ಗ್ರಾಮದ ಈರ್ವರು ವಿದ್ಯಾರ್ಥಿಗಳಿಗೆ 2 ವಿಶೇಷ ಕೊಠಡಿಗಳನ್ನು ಸಜ್ಜುಗೊಳಿಸಲಾಗಿತ್ತು. ಸಾಮಾಜಿಕ ಅಂತರ ಮೂಲಕ ಎಲ್ಲಾ ವಿದ್ಯಾರ್ಥಿಗಳಿಗೆ ಸ್ಯಾನಿಟೈಜರ್ ಮಾಡಿಸಲಾಯಿತು.

ಅಂತರ ಕಾಯ್ದುಕೊಂಡ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಬಳಸಿ ಥರ್ಮಲ್ ಸ್ಕ್ಯಾನ್ ಆದ ನಂತರ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಯಿತು. ಒಟ್ಟು 11 ಶಾಲೆಗಳ 201 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮುಖ್ಯ ಅಧೀಕ್ಷಕ ಪಿ. ನರಸಿಂಹ ಮೂರ್ತಿ ತಿಳಿಸಿದ್ದಾರೆ.

ಬಾಳೆಲೆ: ಬಾಳೆಲೆ ವಿಭಾಗದಿಂದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆಯಿಂದ ಪರೀಕ್ಷಾ ಕೇಂದ್ರವಾದ ತಿತಿಮತಿ ಕೇಂದ್ರಕ್ಕೆ ಕೆರೆದೊಯ್ಯಲು ವಾಹನ ವ್ಯವಸ್ಥೆ ಮಾಡಲಾಗಿತ್ತು. ಅಗತ್ಯ ಮುಂಜಾಗ್ರತೆಯೊಂದಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಯಿತು.

ತಿತಿಮತಿ: ತಿತಿಮತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡಿಸಿ ಬಿಡಲಾಯಿತು.