ಕುಶಾಲನಗರ, ಜೂ. 25: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ಆಶ್ರಯದಲ್ಲಿ ಸ್ಥಳೀಯ ವರ್ತಕರು, ನಾಗರಿಕರ ಸಭೆ ನಡೆಯಿತು.
ಸ್ಥಾನೀಯ ಸಮಿತಿ ಅಧ್ಯಕ್ಷ ಬಿ.ಅಮೃತ್ ರಾಜ್ ಅಧ್ಯಕ್ಷತೆಯಲ್ಲಿ ಕನ್ನಿಕಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪ್ರಸಕ್ತ ರಥಬೀದಿ ಉದ್ದಕ್ಕೂ ಮಾಡಿರುವ ಸೀಲ್‍ಡೌನ್ ಅವೈಜ್ಞಾನಿಕವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಪರಿಶೀಲಿಸಿ ನಿಯಮಾನುಸಾರ ಕ್ರಮಕೈಗೊಳ್ಳಬೇಕು. ಸೋಂಕು ತಪ್ಪಿಸುವ ನಿಟ್ಟಿನಲ್ಲಿ ಪಟ್ಟಣವನ್ನು ಕನಿಷ್ಟ 7 ದಿನ ಲಾಕ್‍ಡೌನ್ ಮಾಡುವ ಬಗ್ಗೆ ಸಲಹೆಗಳು ಕೇಳಿಬಂದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಸಭೆ ನಿರ್ಣಯ ಕೈಗೊಂಡಿದೆ.
ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಕೊರೊನಾ ತಪಾಸಣಾ ಕೇಂದ್ರಕ್ಕೆ ಹೆಚ್ಚಿನ ಸಿಬ್ಬಂದಿಗಳು ಮತ್ತು ಸೌಲಭ್ಯ ಒದಗಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ಮನವಿ ಮಾಡುವ ನಿಟ್ಟಿನಲ್ಲಿ ನಿಯೋಗ ತೆರಳಿ ಮುಂದೆ ಉಂಟಾಗಲಿರುವ ಸಮಸ್ಯೆಗಳಿಗೆ ಪರಿಹಾರದ ಬಗ್ಗೆ ಚರ್ಚೆಗಳು ನಡೆದವು. ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು,ವಿವಿಧ ಸಂಘಸಂಸ್ಥೆಗಳ ಪ್ರಮುಖರು ಇದ್ದರು.