ಆಲೂರುಸಿದ್ದಾಪುರ, ಜೂ. 25: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಹಂಡ್ಲಿ ಗ್ರಾ.ಪಂ.ವ್ಯಾಪ್ತಿಯ ಶಿರಂಗಾಲ ಗ್ರಾಮದ ಕೊರೊನಾ ಸೋಂಕಿತ ವ್ಯಕ್ತಿ ಪ್ರಸ್ತುತ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸೋಂಕಿತ ವ್ಯಕ್ತಿ ಶನಿವಾರಸಂತೆ ಪಟ್ಟಣದಲ್ಲಿ ನಿರಂತರ ಸಂಪರ್ಕದಲ್ಲಿದ್ದು ಶನಿವಾರ ಪಟ್ಟಣದ ವಾರದ ಸಂತೆಯಲ್ಲಿ ಹಣ್ಣಿನ ವ್ಯಾಪಾರ ಮಾಡಿದ್ದ. ಈ ಹಿನ್ನೆಲೆಯಲ್ಲಿ ಶನಿವಾರಸಂತೆ ಪಟ್ಟಣದಲ್ಲಿ ಸೋಂಕಿತ ವ್ಯಕ್ತಿಯಿಂದ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವ ನಿಟ್ಟಿನಲ್ಲಿ ಪಟ್ಟಣದಲ್ಲಿ ನಡೆಯುವ ವಾರದ ಸಂತೆಯನ್ನು ಸೋಂಕು ನಿವಾರಣೆ ಯಾಗುವವರೆಗೂ ರದ್ದುಗೊಳಿಸು ವುದು, ಪಟ್ಟಣವನ್ನು ಸ್ವಯಂ ಪ್ರೇರಿತ ಲಾಕ್‍ಡೌನ್ ಮಾಡುವುದು ಹಾಗೂ ಜಿಲ್ಲಾಡಳಿತ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷಾ ಕೇಂದ್ರವನ್ನು ತೆರೆಯುವಂತೆ ನಾಗರಿಕರ ಪರವಾಗಿ ಪಟ್ಟಣದ ವಕೀಲ ಎಸ್.ವಿ.ಜಗದೀಶ್ ಒತ್ತಾಯಿಸಿದ್ದಾರೆ. ಪತ್ರಿಕಾ ಭವನದಲ್ಲಿ ನಡೆದ ಗೋಷ್ಠಿಯಲ್ಲಿ ಸರಕಾರಕ್ಕೆ ಮನವಿ ಮಾಡಿದರು. ಹಣ್ಣಿನ ವ್ಯಾಪಾರಿ ಸೋಂಕಿತನಿಂದ ಪಟ್ಟಣದಲ್ಲಿ ಹಲವು ಶಂಕಿತ ಸೋಂಕಿತರು ಇರುವ ಸಾಧ್ಯತೆಯಿಂದ ಮುಂಜಾಗೃತವಾಗಿ ನಾಗರಿಕರು ಸ್ವಯಂ ಪ್ರೇರಿತ ಲಾಕ್‍ಡೌನ್‍ಗೆ ಸಹಕಾರ ನೀಡುವಂತೆ ಒತ್ತಾಯಿಸಿದರು.
ಗ್ರಾ.ಪಂ.ಅಧ್ಯಕ್ಷ ಮಹಮದ್‍ಗೌಸ್ ಮಾತನಾಡಿ ಶನಿವಾರಸಂತೆ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿನ ಭೀತಿ ಹೆಚ್ಚಾಗುತ್ತಿದ್ದರೂ ಜಿಲ್ಲಾಡಳಿತ, ಆರೋಗ್ಯ ಅಧಿಕಾರಿಗಳು, ತಾಲೂಕು ಆಡಳಿತ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ ಎಂದರು. ಜನರು ಕೋವಿಡ್ ಪರೀಕ್ಷೆಗೆ ಮಡಿಕೇರಿ, ಸೋಮವಾರಪೇಟೆ ಸರಕಾರಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ; ಕೆಲವರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದರೂ ಅಲ್ಲಿಂದ ವರದಿ ಬರುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷಾ ಕೇಂದ್ರವನ್ನು ತೆರೆಯಬೇಕು ಪಟ್ಟಣದಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗೃತವಾಗಿ ಪಟ್ಟಣದ ವಾರದ ಸಂತೆಯನ್ನು ಈ ವಾರದಿಂದಲೆ ರದ್ದುಗೊಳಿಸಲಾಗುತ್ತದೆ; ಪಟ್ಟಣವನ್ನು ಸ್ವಯಂ ಪ್ರೇರಿತ ಲಾಕ್‍ಡೌನ್ ಗೊಳಿಸಲು ಗ್ರಾ.ಪಂ. ಬೆಂಬಲ ಇದೆ ಎಂದರು. ಕೃಷಿ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಸಿ.ಶರತ್‍ಶೇಖರ್ ಮಾತನಾಡಿ ಕೊಡಗು-ಹಾಸನ ಗಡಿಭಾಗದಲ್ಲಿ ಪಟ್ಟಣ ಇರುವುದರಿಂದ ಇಲ್ಲಿ ಮತ್ತಷ್ಟು ಸೋಂಕು ಹರಡುವ ಸಾಧ್ಯತೆ ಇದೆ, ಜಿಲ್ಲಾಡಳಿತ ಸೀಲ್ ಮಾಡಿರುವ ವಲಯದಲ್ಲಿ ಅಲ್ಲಿನ ನಿವಾಸಿಗಳಿಗೆ ಅಗತ್ಯವಸ್ತುಗಳನ್ನು ಸಮರ್ಪಕವಾಗಿ ಪೂರೈಸಬೇಕು. ಜನರು ಆದಷ್ಟು ಮನೆಯಲ್ಲಿದ್ದು ಸಾಮಾಜಿಕ ಅಂತರ ಮತ್ತು ಹೊರಗಡೆ ಬಂದಾಗ ಮಾಸ್ಕ್ ಧರಿಸುವಂತೆ ಮನವಿ ಮಾಡಿದರು. ಗೋಷ್ಠಿಯಲ್ಲಿ ದುಂಡಳ್ಳಿ ಗ್ರಾ.ಪಂ.ಅಧ್ಯಕ್ಷ ಸಿ.ಜೆ.ಗಿರೀಶ್, ಶನಿವಾರಸಂತೆ ಗ್ರಾ.ಪಂ.ಸದಸ್ಯ ಎಚ್.ಆರ್.ಹರೀಶ್ ಹಾಜರಿದ್ದರು.