ಮಡಿಕೇರಿ, ಜೂ. 26: ಜಿಲ್ಲೆಯಲ್ಲಿ ಮತ್ತೆ 6 ಹೊಸ ಕೊರೊನಾ ಸೋಂಕು ಪ್ರಕರಣಗಳು ತಾ. 26 ರಂದು ವರದಿಯಾಗಿವೆ. ಬೆಂಗಳೂರಿನ ಪ್ರಯಾಣದ ಇತಿಹಾಸವಿರುವ ಗಂಡ, ಹೆಂಡತಿ ಮತ್ತು ಎರಡು ವರ್ಷ ವಯಸ್ಸಿನ ಮಗುವಿಗೆ ಕೋವಿಡ್-19 ಸೋಂಕು ದೃಢಪಟ್ಟಿರುತ್ತದೆ. ಇವರು ವೀರಾಜಪೇಟೆ ತಾಲೂಕಿನ ಹುಂಡಿ ಮತ್ತು ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ವಾಸ ಮಾಡಿದ್ದರು. ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯ 24 ವರ್ಷದ ನಿವಾಸಿ ಪುಣೆಯಿಂದ ಜಿಲ್ಲೆಗೆ ಹಿಂತಿರುಗಿದ್ದರು. ವೀರಾಜಪೇಟೆ ತಾಲೂಕು ಕೊಂಡಂಗೇರಿ ಗ್ರಾಮದ 23 ವರ್ಷದ ವ್ಯಕ್ತಿ ಶಾರ್ಜಾದಿಂದ ಹಿಂತಿರುಗಿದ್ದರು. ಸೋಮವಾರಪೇಟೆ ತಾಲೂಕು ಕುಶಾಲನಗರ ಹೋಬಳಿಯ ಹುಲಸೆ ಗ್ರಾಮದ 46 ವರ್ಷದ ವ್ಯಕ್ತಿಯೊಬ್ಬರು ಬೆಂಗಳೂರಿನಿಂದ ಜಿಲ್ಲೆಗೆ ಪ್ರಯಾಣಿಸಿದ್ದು ಈ ಮೂವರಿಗೂ ಸೋಂಕು ದೃಢವಾಗಿದ್ದು, ಒಟ್ಟು 6 ಹೊಸ ಪ್ರಕರಣಗಳು ವರದಿಯಾಗಿವೆ.
ಈ ಎಲ್ಲಾ ಸೋಂಕಿತ ವ್ಯಕ್ತಿಗಳನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾ.26 ರಂದು ವರದಿಯಾದ ಹೊಸ ಪ್ರಕರಣಗಳ ಸಂಬಂಧ ಜಿಲ್ಲೆಯಲ್ಲಿ ಹೊಸದಾಗಿ ಹುಂಡಿ, ನೆಲ್ಲಿಹುದಿಕೇರಿ ಮತ್ತು ಹುಲುಸೆ ಗ್ರಾಮದಲ್ಲಿ ನಿರ್ಬಂಧಿತ ಪ್ರದೇಶಗಳನ್ನು ಮಾಡಲಾಗಿದೆ.
ಹೊಸ 6 ಪ್ರಕರಣಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 36 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 3 ಮಂದಿ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 33ಕ್ಕೆ ಏರಿಕೆಯಾಗಿದೆ. ಈ 33 ಸೋಂಕಿತರು ಜಿಲ್ಲೆಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಹೊಸ 3 ನಿರ್ಬಂಧಿತ ವಲಯಗಳನ್ನೊಳಗೊಂಡು ಜಿಲ್ಲೆಯಾದ್ಯಂತ ಒಟ್ಟು 18 ನಿರ್ಬಂಧಿತ ವಲಯಗಳಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.