ಪೆರಾಜೆ, ಜೂ. 25: ಕಲಶ, ಕಂಬ, ಛಾವಣಿ, ಗರ್ಭಗುಡಿ ಹೀಗೆ ಎಲ್ಲಾ ಸೇರಿದರೆ ಮಾತ್ರ ಒಂದು ದೇವಸ್ಥಾನ ವಾಗುತ್ತದೆ. ಹಾಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಎಲ್ಲಾ ಸದಸ್ಯರು, ಸಿಬ್ಬಂದಿಗಳು ಎಲ್ಲರೂ ಒಟ್ಟಾಗಿ ಸೇರಿ ಒಂದೇ ಸೂರಿನಡಿಯಲ್ಲಿ ಕೆಲಸ ಮಾಡಿದಾಗ ಮಾತ್ರ ಗ್ರಾಮ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ ಅಭಿಪ್ರಾಯ ಪಟ್ಟರು.

ಅವರು ಗ್ರಾಮ ಪಂಚಾಯಿತಿ ಪೆರಾಜೆ ಇದರ ಕೊನೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಒಂದು ಗ್ರಾಮದಲ್ಲಿ ದೇವಸ್ಥಾನ, ಮಸೀದಿ, ಚರ್ಚ್‍ಗಳಿಗೆ ಇದ್ದಷ್ಟೆ ಪ್ರಾಮುಖ್ಯತೆ ಪಂಚಾಯಿತಿ ಕಾರ್ಯಾಲಯಕ್ಕಿದೆ. ಹಾಗಾಗಿ ಪ್ರತಿಯೊಬ್ಬರೂ ಪಂಚಾಯತ್ ವ್ಯವಸ್ಥೆಯನ್ನು ಗೌರವಿಸಿದಲ್ಲಿ ಉತ್ತಮ ಆಡಳಿತ ಸಾಧ್ಯ. ವಿಶ್ವ, ದೇಶಾದ್ಯಂತ ವ್ಯಾಪಿಸಿದ್ದ ಕೊರೊನಾ ಸೋಂಕು ಇದೀಗ ರಾಜ್ಯ ಹಾಗೂ ಜಿಲ್ಲೆಗೆ ಬಂದು ತಲುಪಿದೆ. ಇದುವರೆಗೆ ನಾವು ಕೊರೊನಾದ ವಿರುದ್ಧ ಒಗ್ಗಟ್ಟಿನಿಂದ ಹೋರಾಡಿದ್ದೇವೆ ಹಾಗಾಗಿ ಮುಂದಿನ ದಿನಗಳಲ್ಲಿ ಕಠಿಣ ಸವಾಲು ನಮ್ಮ ಮುಂದೆ ಇದ್ದು ಅದನ್ನು ಮೆಟ್ಟಿ ನಿಲ್ಲುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ಮಾತನಾಡಿ, ಸ್ವಚ್ಛ ಹಾಗೂ ಪಾರದರ್ಶಕ ಆಡಳಿತದ ಫಲವಾಗಿ ಗ್ರಾಮದಲ್ಲಿ ನಿರಂತರ ಆಡಳಿತವನ್ನು ನೀಡುತ್ತ ಬಂದಿದ್ದೇವೆ ಇದಕ್ಕೆ ಗ್ರಾಮದಲ್ಲಿ ಆಗಿರುವ ಅಭಿವೃದ್ಧಿಯೇ ಸಾಕ್ಷಿ. ಮುಂದಿನ ದಿನಗಳಲ್ಲಿ ಕೆಲವೊಂದಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದು, ಅದು ಮುಂದಿನ ದಿನಗಳಲ್ಲಿ ಸುಸೂತ್ರವಾಗಿ ನಡೆಯಲಿದೆ ಎಂದು ಭರವಸೆ ನೀಡಿದರು. ಪೆರಾಜೆಗೆ ಒಂದು ಸುಸಜ್ಜಿತ ಗ್ರಾಮ ಪಂಚಾಯಿತಿ ಕಟ್ಟಡ ಒದಗಿಸಿಕೊಡುವಲ್ಲಿ ನಾಗೇಶ್ ಕುಂದಲ್ಪಾಡಿ ಅವರ ಶ್ರಮ ಮರೆಯಲಾಗದು ಎಂದು ಅಭಿಪ್ರಾಯ ಪಟ್ಟರು.

ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿ ಮಾತನಾಡಿದ ಗ್ರಾಮ ಪಂಚಯತ್ ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ, ಹಿಂದಿನ ಐದು ವರ್ಷದ ಆಡಳಿತ ತೃಪ್ತಿನೀಡಿದೆ, ಒಂದೇ ಶಾಲೆಯ ಮಕ್ಕಳಂತೆ ಒಂದೇ ಸೂರಿನಡಿಯಲ್ಲಿ ಒಗ್ಗಟ್ಟಿನಿಂದ ಪಕ್ಷಬೇಧ ಮರೆತು ಕೆಲಸವನ್ನು ನಿರ್ವಹಿಸಿದ್ದೇವೆ. ಇದಕ್ಕಾಗಿ ಸಹಕರಿಸಿದ ಎಲ್ಲಾ ಸದಸ್ಯರುಗಳಿಗೆ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು.

ಪಂಚಾಯಿತಿ ಸದಸ್ಯರುಗಳಾದ ಪ್ರಕಾಶ್ ದೊಡ್ಡಡ್ಕ, ಉದಯಚಂದ್ರ ಕುಂಬಳಚೇರಿ, ಚಿನಪ್ಪ ಅಡ್ಕ, ಶೀಲಾ ಚಿದಾನಂದ ನಿಡ್ಯಮಲೆ ಇವರುಗಳು ಐದು ವರ್ಷದ ಆಡಳಿತದ ಅನುಭವವನ್ನು ಹಂಚಿಕೊಂಡರು.

ಇದೇ ಸಂದರ್ಭ ಲಡಾಖ್‍ನ ಗ್ಯಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪೆರಾಜೆ ಪಂಚಾಯತ್ ನ ಸಿಬ್ಬಂದಿಯಾಗಿ ಅಲ್ಲದೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾಗಿ ಸುದೀರ್ಘ ಕಾಲದವರೆಗೆ ಸೇವೆ ಸಲ್ಲಿಸಿದ ಬಾಲಕೃಷ್ಣ ಬಾಳೆಕಜೆ ಅವರನ್ನು ಸನ್ಮಾನಿಸಲಾಯಿತು.

ಗ್ರಾ.ಪಂ. ಸದಸ್ಯರುಗಳು, ಪಂಚಾಯಿತಿ ಸಿಬ್ಬಂದಿಗಳು ಹಾಜರಿ ದ್ದರು. ಕಾರ್ಯಕ್ರಮವನ್ನು ಪಂಚಾಯಿತಿ ಕಾರ್ಯದರ್ಶಿ ಕುಮಾರ್ ಸ್ವಾಗತಿಸಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವ ಪ್ರಭು ವಂದಿಸಿದರು.-ಕಿರಣ್ ಕುಂಬಳಚೇರಿ