ಶನಿವಾರಸಂತೆ, ಜೂ. 24: ವರ್ಷವಿಡೀ ತುಂಬಿ ಹರಿಯುತ್ತಿದ್ದ ಕಾಜೂರು ಹೊಳೆ ಬರಿದಾಗಿದ್ದು, ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ರೈತರಲ್ಲಿ ಆತಂಕ ಮೂಡಿಸಿದೆ. ಕಳೆದ ಏಳೆಂಟು ವರ್ಷಗಳಿಂದ ವಾರ್ಷಿಕ ಮಳೆ ಪ್ರಮಾಣ ಕುಸಿಯುತ್ತಿದ್ದು, ಫೆಬ್ರವರಿ-ಮಾರ್ಚ್ ತಿಂಗಳಲ್ಲೇ ಹೊಳೆಯ ನೀರು ಸಂಪೂರ್ಣ ಬತ್ತಿ ಹೋಗುತ್ತಿದ್ದು, ಆತಂಕ ಎದುರಾಗಿದೆ.

ಹಲವಾರು ವರ್ಷಗಳಿಂದ ದುಂಡಳ್ಳಿ ಪಂಚಾಯಿತಿ ವ್ಯಾಪ್ತಿಯ ಕಾಜೂರು, ಕೊಜಗೇರಿ, ದೊಡ್ಡಕೊಳತ್ತೂರು, ಎಡೆಹಳ್ಳಿ, ಕ್ಯಾತೆ ಗ್ರಾಮಗಳು, ನೆರೆಯ ಹಾಸನ ಜಿಲ್ಲೆಯ ಯಸಳೂರು ಸೇರಿದಂತೆ ಇತರ ಗ್ರಾಮಗಳ ಗ್ರಾಮಸ್ಥರು ಹಾಗೂ ರೈತರ ಪಾಲಿಗೆ ಕಾಜೂರು ಹೊಳೆ ಜೀವನದಿಯಾಗಿದೆ. ಆದರೆ, ಕಳೆದೆರೆಡು ವರ್ಷಗಳಿಂದ ಹಾಗೂ ಪ್ರಸಕ್ತ ಸಾಲಿನಲ್ಲಿ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿಯೇ ಹೊಳೆ ಬರಿದಾಗಿದೆ.

ಹೊಳೆ ನೀರನ್ನೇ ಅವಲಂಭಿಸಿ ವ್ಯವಸಾಯ ಮಾಡುತ್ತಿದ್ದ ರೈತರ ಬೆಳೆ ನೆಲಕಚ್ಚಿದೆ. ಕೊಳವೆ ಬಾವಿ ನೀರನ್ನು ಹಾಯಿಸಿ ಬೆಳೆದಿದ್ದ ಕೆಲವು ರೈತರ ಬೆಳೆಯನ್ನು ಕೊವಿಡ್-19 ಲಾಕ್‍ಡೌನ್‍ನಿಂದಾಗಿ ಮಾರುಕಟ್ಟೆ, ಸಾಗಾಟ ವ್ಯವಸ್ಥೆಯಿಲ್ಲದೆ ಹೊಲಗದ್ದೆಯಲ್ಲೇ ನಾಶಪಡಿಸಲಾಯಿತು. ಇದೀಗ ಲಾಕ್‍ಡೌನ್ ತೆರವಾಗಿದ್ದರೂ ಮಳೆಗಾಗಿ ರೈತರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಈ ಹೊಳೆ ನೀರನ್ನು ನಂಬಿ ಸುಮಾರು 200 ಹೆಕ್ಟೇರ್ ಜಮೀನಿನಲ್ಲಿ ರೈತರು ಹಸಿಮೆಣಸಿನಕಾಯಿ, ಶುಂಠಿ, ತರಕಾರಿ, ಭತ್ತ ಬೆಳೆಯುತ್ತಾರೆ. 250 ಎಕರೆಯಷ್ಟು ಕಾಫಿ ತೋಟಗಳಿದ್ದು, ಬೇಸಿಗೆಯಲ್ಲಿ ಹೊಳೆ ನೀರನ್ನೇ ಹಾಯಿಸುತ್ತಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ 5 ಇಂಚು ಮಳೆಯಾಗಿದೆ. ಭತ್ತದ ಅಗೆ ಹಾಕಲು ಗದ್ದೆಯಲ್ಲಿ ಸಿದ್ಧತೆ ಮಾಡಿಕೊಂಡಿರುವ ರೈತರು ಹೊಳೆಯಲ್ಲೂ ಸಾಕಷ್ಟು ನೀರಿಲ್ಲದ ಕಾರಣ ನೀರು ಅಗೆ ಹಾಕಲು ಸಾಧ್ಯವಾಗದೆ ಹುಡಿ ಅಗೆ ಹಾಕಲು ನಿರ್ಧರಿಸಿದ್ದಾರೆ.