ಮಡಿಕೇರಿ, ಜೂ. 24: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಕಾವೇರಿ ಕ್ಷೇತ್ರದ ಅಭಿವೃದ್ಧಿಗಾಗಿ ಒಂದು ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಹಣವನ್ನು ಸಮರ್ಪಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗುವುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹೇಳಿದರು.

ಮುಜರಾಯಿ ಹಾಗೂ ಮೀನುಗಾರಿಕಾ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಲಕಾವೇರಿ ಭಾಗಮಂಡಲಕ್ಕೆ ಈ ಹಿಂದೆ ಬಂದಿದ್ದ ಬಿಬಿಎಂಪಿ ಮುಖಂಡರು ಕ್ಷೇತ್ರದ ಅಭಿವೃದ್ಧಿಗಾಗಿ ಒಂದು ಕೋಟಿ ಅನುದಾನ ನೀಡುವುದಾಗಿ ಭರವಸೆಯಿತ್ತಿದ್ದರು. ಈ ಹಿನ್ನೆಲೆಯಲ್ಲಿ ದೇವಾಲಯದ ವತಿಯಿಂದ ಮನವಿಯನ್ನು ಕಳುಹಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಸಚಿವರ ಗಮನ ಸೆಳೆದಾಗ ಜಿಲ್ಲಾಧಿಕಾರಿ ಹಣ ಬಿಡುಗಡೆ ಯಾಗಿರುವ ಮಾಹಿತಿ ನೀಡಿದರು.

ಹಾರಂಗಿ ಮೀನುಮರಿ ಪಾಲನ ಕೇಂದ್ರದಲ್ಲಿ ಉತ್ತಮ ತಳಿಯ ಮತ್ತು ಬಲಿತ ಮೀನು ಮರಿಗಳನ್ನು ರೈತರಿಗೆ ನೀಡುವ ಕಾರ್ಯವಾಗಬೇಕು. ಮೀನುಗಾರಿಕಾ ಇಲಾಖೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಮತ್ತಷ್ಟು ಉತ್ಸುಕತೆಯಿಂದ ಕಾರ್ಯ ನಿರ್ವಹಿಸಬೇಕು. ಮೀನುಗಾರಿಕೆ ಇಲಾಖೆಯಲ್ಲೂ ಸಹ ಮೀನು ಮರಿಗಳ ತಳಿ ಸಂವರ್ಧನೆ ಹಾಗೂ ಮುಂತಾದ ಅಭಿವೃದ್ಧಿ ಪರ ವಿಚಾರಗಳ ಹೊಸ ಪ್ರಯತ್ನಗಳನ್ನು ಕಾರ್ಯರೂಪಕ್ಕೆ ತರುವಂತೆ ಮೀನು ಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ ದರ್ಶನ್ ಅವರು ಮಾಹಿತಿ ನೀಡಿ, ಹಾರಂಗಿ ಜಲಾಶಯದಲ್ಲಿ ಒಟ್ಟು 1,886 ಹೆಕ್ಟೇರ್ ಜಲ ವಿಸ್ತೀರ್ಣವನ್ನು ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘಕ್ಕೆ ವಿಲೇವಾರಿ ಮಾಡಲಾಗಿದೆ. ಚಿಕ್ಲಿ ಹೊಳೆ ಜಲಾಶಯದ 105 ಹೆಕ್ಟೇರ್ ಜಲ ವಿಸ್ತೀರ್ಣವನ್ನು ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.

ಕೆರೆಗಳಿಗೆ ಸಂಬಂಧಿಸಿದಂತೆ ಇಲಾಖೆ ವ್ಯಾಪ್ತಿಯಲ್ಲಿ 6, ಗ್ರಾಮ ಪಂಚಾಯತ್‍ನ 506 ಕೆರೆಗಳು, 3000 ಖಾಸಗಿ ಕೆರೆಗಳಿವೆ. ಇದರೊಂದಿಗೆ 211 ಕಿ.ಮೀ ಜಲ ವಿಸ್ತೀರ್ಣ ಹೊಂದಿರುವ ನದಿಭಾಗಗಳ 9 ಕೊಳಗಳಿದ್ದು, ಸೋಮವಾರಪೇಟೆ ತಾಲೂಕಿನ 35 ಕಿ.ಮೀ ಉದ್ದದ 2 ನದಿ ಭಾಗಗಳನ್ನು ಕೊಡಗು ವನ್ಯ ಜೀವಿ ಸಂರಕ್ಷಣಾ ಸಂಘಕ್ಕೆ ಗುತ್ತಿಗೆ ನೀಡಲಾಗಿದೆ. ಅಲ್ಲದೆ 5 ಕಿ.ಮೀ. ನದಿ ಭಾಗವನ್ನು ಮತ್ಸ್ಯಧಾಮವೆಂದು ಘೋಷಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 84 ಸದಸ್ಯರ ನ್ನೊಳಗೊಂಡ ನೋಂದಾಯಿತ ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘವಿದೆ. ಜಿಲ್ಲೆಯಾದ್ಯಂತ 200 ಮೀನುಗಾರರು, 95 ಮೀನು ಮಾರಾಟಗಾರರು ಮತ್ತು 3000 ಮೀನು ಕೃಷಿಕರಿದ್ದಾರೆ.

ಇದರೊಂದಿಗೆ ಜಿಲ್ಲೆಯಲ್ಲಿ ದಿನಂಪ್ರತಿ ಸರಾಸರಿ 4000 ಕೆ.ಜಿ ಯಿಂದ 5000 ಕೆ.ಜಿ.ವರೆಗೆ ಮೀನು ಮಾರಾಟವಾಗುತ್ತಿದ್ದು ರಾಜ್ಯದ ಮೊದಲ 10 ಜಿಲ್ಲೆಗಳಲ್ಲಿ ಸ್ಥಾನ ಪಡೆದಿದೆ. 2018-19 ನೇ ಸಾಲಿನ ಅಂಕಿ ಅಂಶಗಳನ್ವಯ ಜಿಲ್ಲೆಯ ಒಟ್ಟು ಉತ್ಪಾದನೆ ಸಾಮಥ್ರ್ಯ 3,582 ಟನ್ ಹಾಗೂ ರೂ. 3,175.20 ಲಕ್ಷ ಮೌಲ್ಯಗಳಾಗಿವೆ ಎಂದು ದರ್ಶನ್ ಮಾಹಿತಿಯಿತ್ತರು.

ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದ ಸಚಿನ್ ಮಾತನಾಡಿ, ಹಾರಂಗಿ ಪ್ರದೇಶದಲ್ಲಿ ಕೊಳಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.

ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ಇಲಾಖೆ ವ್ಯಾಪ್ತಿಯಡಿಯಲ್ಲಿ ಬರುವ ದೇವಾಲಯಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಶೀಘ್ರವೆ ಮುಗಿಸುವ ಕಾರ್ಯವಾಗಬೇಕು ಎಂದರು.

ಭಗಂಡೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ ‘ಎ’ ದರ್ಜೆಯ 3 ದೇವಸ್ಥಾನಗಳಿವೆ. ಭಾಗಮಂಡಲ-ತಲಕಾವೇರಿಯ ಭಗಂಡೇಶ್ವರ ಸಮೂಹ ದೇವಾಲಯಗಳು, ಮಡಿಕೇರಿಯ ಓಂಕಾರೇಶ್ವರ ದೇವಾಲಯ ಮತ್ತು ಪಾಡಿ ಇಗ್ಗು ತಪ್ಪ ದೇವಾಲಯಗಳಿವೆ.

ಜಿಲ್ಲೆಯಲ್ಲಿ ‘ಬಿ’ ದರ್ಜೆಯ ಯಾವುದೇ ದೇವಾಲಯಗಳಿಲ್ಲ. ‘ಸಿ’ ವರ್ಗದ 4 ದೇವಾಲಯಗಳಿವೆ. ಭಗಂಡೇಶ್ವರ ದೇವಾಲಯದಲ್ಲಿ ಭಕ್ತಾದಿಗಳು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ರೂ. 94.70 ಲಕ್ಷ ವೆಚ್ಚದಲ್ಲಿ ಯಾತ್ರಿ ನಿವಾಸ ಉದ್ದೇಶಿತ ಕಟ್ಟಡ ನಿರ್ಮಾಣ ನಡೆಯಬೇಕಿದೆ ಎಂದರು. ಇದರೊಂದಿಗೆ ದೇವಾಲಯದಲ್ಲಿ ನೆಲಹಾಸು ಮತ್ತು ಭಾಗಮಂಡಲದ ಸಂಗಮ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ದೇವಾಲಯಗಳ ಅಭಿವೃದ್ಧಿಗೆ ಮತ್ತಷ್ಟು ಅನುದಾನ ನೀಡಿ. ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಮುಗಿಸುವಂತಾಗಲಿ ಎಂದು ಸಚಿವರಲ್ಲಿ ಮನವಿ ಮಾಡಿದರು

ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಮುಜರಾಯಿ ಇಲಾಖೆಯಿಂದ ಈಗಾಗಲೇ 2 ಕೋಟಿಯಷ್ಟು ಅನುದಾನವನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಅನುದಾನವನ್ನು ನೀಡುವಂತೆ ಕೋರಿದರು.

ಜಿ.ಪಂ ಸಿಇಒ ಕೆ. ಲಕ್ಷ್ಮೀಪ್ರಿಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ, ಉಪವಿಭಾಗಾಧಿಕಾರಿ ಟಿ. ಜವರೇಗೌಡ, ಜಿ.ಪಂ ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್, ಪಂಚಾಯತ್ ರಾಜ್ ಇಂಜಿನಿಯ ರಿಂಗ್‍ನ ಇಇ ಪ್ರಭು, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಾಲಚಂದ್ರ, ಮೂರು ತಾಲೂಕುಗಳ ತಹಶೀಲ್ದಾರ್ ರಾದ ಮಹೇಶ್, ಗೋವಿಂದ ರಾಜು, ನಂದೀಶ್ ಇತರರು ಇದ್ದರು.