ವೀರಾಜಪೇಟೆ, ಜೂ. 24: ಮಡಿಕೇರಿಯ ಕೋಟೆಯ ಅರಮನೆಯ ಸಂರಕ್ಷಣೆಗೆ ಸಂಬಂಧಿಸಿದಂತೆ ಅದರ ಸಂಪೂರ್ಣ ದುರಸ್ತಿ ಹಾಗೂ ಜೀರ್ಣೋದ್ಧಾರದ ಉಚ್ಚ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷ್ಯಿಸಿದ ಪ್ರಾಚ್ಯ ವಸ್ತು ಇಲಾಖೆಯ ನಡವಳಿಕೆಯ ಬಗ್ಗೆ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದ ಮುಖ್ಯ ನ್ಯಾಯಾಧೀಶ ಅಭಯ ಶ್ರೀನಿವಾಸ್ ಗೋಕಾಕ್ ಹಾಗೂ ನ್ಯಾಯಮೂರ್ತಿ ನಟರಾಜ್ ರಂಗಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ ಜುಲೈ 8 ರಂದು ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಅವರು ಖುದ್ದು ಸ್ಥಳ ಪರಿಶೀಲನೆ ನಡೆಸಿ ವಿಭಾಗೀಯ ಪೀಠದ ಮುಂದೆ ವರದಿ ಸಲ್ಲಿಸುವಂತೆ ಆದೇಶಿಸಿದೆ.ಕೋಟೆ ಅರಮನೆಯ ದುರಸ್ತಿ ಪಡಿಸಲು ಪ್ರಾಥಮಿಕ ಹಂತದಲ್ಲಿ ರೂ. 59 ಲಕ್ಷ ಬಿಡುಗಡೆ ಮಾಡಿ ಏಪ್ರಿಲ್ 18 ರೊಳಗೆ ಅರಮನೆಯನ್ನು ಎಲ್ಲ ರೀತಿಯಿಂದಲೂ ದುರಸ್ತಿ ಪಡಿಸಿ ಉಚ್ಚ ನ್ಯಾಯಾಲಯಕ್ಕೆ ವರದಿ ನೀಡುವಂತೆ ಇಲಾಖೆಗೆ ನಿರ್ದೇಶನ ನೀಡಿದರೂ ಇಲಾಖೆ ಯಾವುದೇ ರೀತಿಯಲ್ಲಿ ಕ್ರಮಕೈಗೊಂಡಿಲ್ಲವೆಂದು ಅರ್ಜಿದಾರರಾದ ನಿವೃತ್ತ ಐಎಎಸ್ ಅಧಿಕಾರಿ ಜೆ.ಎಸ್. ವಿರೂಪಾಕ್ಷಯ್ಯ ಅವರು ಇಂದು ವಿಭಾಗೀಯ ಪೀಠದ ಮುಂದೆ ದೂರು ಅರ್ಜಿ ಸಲ್ಲಿಸಿದರು.
ಇಂದು ಬೆಂಗಳೂರಿನ ಉಚ್ಚ ನ್ಯಾಯಾಲಯದಲ್ಲಿ ನಡೆದ ವೀಡಿಯೋ ಕಾನ್ಪರೆನ್ಸ್ನಲ್ಲಿ ಅರ್ಜಿದಾರರ ಪರ ವಾದಿಸಿದ ಎನ್. ರವೀಂದ್ರನಾಥ್ ಕಾಮತ್ ಅವರು ಕೊಡಗಿನ ಮಡಿಕೇರಿಯಲ್ಲಿರುವ ಕೋಟೆಯ ಅರಮನೆ ಈಗಲೂ ಶಿಥಿಲಾವಸ್ಥೆಯಲ್ಲಿ ಮುಂದುವರೆದಿದ್ದು, ಪ್ರಸಕ್ತ ಮಳೆಗಾಲದಲ್ಲಿ ಬೀಳುವ ಹಂತದಲ್ಲಿದೆ. ಸರಕಾರದ ಪ್ರಾಚ್ಯ ವಸ್ತು ಇಲಾಖೆ ಯಾವುದೇ ಕ್ರಮ ಕೈಗೊಂಡಿರದಿರುವ ಕುರಿತು ವಿಭಾಗೀಯ ಪೀಠದ ನ್ಯಾಂiÀi ಮೂರ್ತಿಗಳ ಗಮನಕ್ಕೆ ತಂದರು.
ಪ್ರಾಚ್ಯ ವಸ್ತು ಸಂರಕ್ಷಣಾ ಇಲಾಖೆ ಐತಿಹಾಸಿಕ ಪ್ರಸಿದ್ಧವಾದ ಈ ಸ್ಮಾರಕದ ಅರಮನೆಯ ಕುರಿತು ಪೂರ್ಣ ನಿರ್ಲಕ್ಷ್ಯತೆ ತಾಳಿದೆ. ಶಿಥಿಲ ಗೊಂಡಿರುವ ಅರಮನೆಯ ಎಲ್ಲ ಛಾಯಾ ಚಿತ್ರಗಳನ್ನು ರವೀಂದ್ರನಾಥ್ ಕಾಮತ್ ನ್ಯಾಯ ಮೂರ್ತಿಗಳ ಮುಂದೆ ಖುದ್ದು ಹಾಜರು ಪಡಿಸಿದರು.
(ಮೊದಲ ಪುಟದಿಂದ) ದೂರುದಾರರ ಅಹವಾಲುಗಳನ್ನು ಆಲಿಸಿ ಪರಿಶೀಲಿಸಿದ ವಿಭಾಗೀಯ ಪೀಠ ಕೊಡಗಿನ ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಟಿ.ಡಿ. ಮನಮೋಹನ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಮಡಿಕೇರಿ ಹಳೆಯ ಸ್ಮಾರಕ ಅರಮನೆಯನ್ನು ಖುದ್ದು ಪರಿಶೀಲಿಸಿ ಸಾಧಕ ಬಾಧಕಗಳಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಆದೇಶಿಸಿದೆ.