ಮಡಿಕೇರಿ, ಜೂ. 23: ವಿಶ್ವದಲ್ಲಿ ವಿವಿಧ ನಿಗದಿತ ದಿನಾಂಕಗಳಲ್ಲಿ ಒಂದೊಂದು ಐತಿಹ್ಯದ ದಿನ ಆಚರಿ ಸಲ್ಪಡುತ್ತದೆ. ಅದರಂತೆ ಜೂನ್ 23 ರ ದಿನಾಂಕವನ್ನು ವಿಶ್ವ ಒಲಿಂಪಿಕ್ಸ್ ದಿನವನ್ನಾಗಿ ಆಯೋಜಿಸಲಾಗುತ್ತದೆ. ಜಿಲ್ಲೆಯಲ್ಲಿಯೂ ಈ ದಿನವನ್ನು ಕೆಲವು ವರ್ಷಗಳಿಂದ ಆಯೋಜಿಸಲಾಗುತ್ತಿತ್ತು. ವಿಶೇಷವಾಗಿ ಹಾಕಿಗೆ ಕೊಡಗು ಜಿಲ್ಲೆ ಹೆಸರಾಗಿದ್ದು, ಜಿಲ್ಲೆಯ ಅಧಿಕೃತ ಹಾಕಿ ಸಂಸ್ಥೆ (ಹಾಕಿ ಕೂರ್ಗ್‍ನ) ಪೊನ್ನಂಪೇಟೆಯಲ್ಲಿ ಈ ದಿನವನ್ನು ಕ್ರೀಡಾ ಪ್ರೇಮಿಗಳು, ಕ್ರೀಡಾ ವಿದ್ಯಾರ್ಥಿಗಳೊಂದಿಗೆ ಆಯೋಜನೆ ಮಾಡುತ್ತಿತ್ತು.ಆದರೆ ಪ್ರಸ್ತುತ ವರ್ಷ ಕೊರೊನಾ ಕಾರಣದಿಂದಾಗಿ ವಿಶ್ವ ಒಲಿಂಪಿಕ್ಸ್ ಡೇ ಸಾರ್ವಜನಿಕವಾಗಿ ಜರುಗಿಲ್ಲ. ಬದಲಿಗೆ ಹಾಕಿ ಇಂಡಿಯಾದ ನಿರ್ದೇಶನದಂತೆ ಹಾಕಿ ಕೂರ್ಗ್ ಸಂಸ್ಥೆ ಆನ್‍ಲೈನ್ ಮೂಲಕ ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ಆಚರಿಸಿದೆ. ಕ್ವಿಜ್, ಬರಹ, ಫಿಟ್‍ನೆಸ್, ಆಟದ ಕಲೆ ಮತ್ತು ಕೌಶಲ್ಯದಂತಹ ವಿಷಯಕ್ಕೆ ಸಂಬಂಧಿಸಿದಂತೆ ಸ್ಪರ್ಧೆ ಆಯೋಜನೆಯ ಮೂಲಕ 2020 ರ ವಿಶ್ವ ಒಲಿಂಪಿಕ್ಸ್ ಡೇಯನ್ನು ಜಿಲ್ಲೆಯ ಮಟ್ಟಿಗೆ ಆನ್‍ಲೈನ್ ಮೂಲಕ ಆಯೋಜನೆ ಮಾಡಲಾಗಿತ್ತು ಎಂದು ಹಾಕಿ ಕೂರ್ಗ್ ಸಂಸ್ಥೆಯ ಕಾರ್ಯದರ್ಶಿ ಮಾಜಿ ಅಂತರರಾಷ್ಟ್ರೀಯ ಹಾಕಿ ಆಟಗಾರ ಬುಟ್ಟಿಯಂಡ ಚಂಗಪ್ಪ ತಿಳಿಸಿದರು. ಕೊಡಗಿನ ಪಾಲಿಗೆ ಹೆಮ್ಮೆ
1894 ರಲ್ಲಿ ಗ್ರೀಸ್‍ನಲ್ಲಿ ಪ್ರಾರಂಭಗೊಂಡ ಜಾಗತಿಕ ಮಟ್ಟದ ಪ್ರತಿಷ್ಠಿತವಾದ ಒಲಿಂಪಿಕ್ಸ್ ಪುಟ್ಟ ಜಿಲ್ಲೆಯಾದ ಕೊಡಗಿಗೊಂದು ಹಿರಿಮೆಯಾಗಿದೆ. 1948 ರಲ್ಲಿ ಜೂನ್ 23 ರಂದು ವಿಶ್ವ ಒಲಿಂಪಿಕ್ಸ್ ಡೇಯನ್ನು ಪ್ರಾರಂಭಿಸಲಾಗಿದೆ. ಪುಟ್ಟ ಜಿಲ್ಲೆಯಾದರೂ ಕ್ರೀಡಾ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿರುವ ಕೊಡಗು ಈತನಕ ಭಾರತ ದೇಶಕ್ಕೆ 17 ಮಂದಿ ಒಲಿಂಪಿಯನ್‍ಗಳನ್ನು ಕೊಡುಗೆಯಾಗಿ ನೀಡಿದೆ. ಹಾಕಿ ಕ್ರೀಡೆಗೆ ಕೊಡಗು ರಾಷ್ಟ್ರದಲ್ಲಿ ವಿಶೇಷ ಹೆಸರು ಮಾಡಿದ್ದು ಈತನಕ ಹಾಕಿಯಲ್ಲೇ ಕೊಡಗಿನವರಾದ 11 ಆಟಗಾರರು ಒಲಿಂಪಿಕ್ಸ್‍ನಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಇದರೊಂದಿಗೆ ಇತರ ಕ್ರೀಡೆಗಳಲ್ಲೂ 6 ಆಟಗಾರರು ದೇಶವನ್ನು ಪ್ರತಿನಿಧಿಸಿದ್ದು ಒಟ್ಟು 17 ಮಂದಿ ಒಲಿಂಪಿಯನ್‍ಗಳು ಕೊಡಗಿನವರಾಗಿ ದೇಶದ ಪರ ಆಡಿದ್ದಾರೆ.
ಯಾರ್ಯಾರು...?
ಹಾಕಿಯಲ್ಲಿ ಮೊಳ್ಳೆರ ಪಿ. ಗಣೇಶ್, ಮನೆಯಪಂಡ ಎಂ. ಸೋಮಯ್ಯ, ಬಾಳೆಯಡ ಕೆ. ಸುಬ್ರಮಣಿ, ಚೆಪ್ಪುಡೀರ ಎಸ್. ಪೂಣಚ್ಚ,
(ಮೊದಲ ಪುಟದಿಂದ) ಅಂಜಪರವಂಡ ಬಿ. ಸುಬ್ಬಯ್ಯ, ಸಣ್ಣುವಂಡ ಕೆ. ಉತ್ತಪ್ಪ, ಚೇಂದಂಡ ನಿಕಿನ್ ತಿಮ್ಮಯ್ಯ, ಬಿ.ಪಿ. ಗೋವಿಂದ, ಅರ್ಜುನ್ ಹಾಲಪ್ಪ, ವಿ.ಆರ್. ರಘುನಾಥ್ ಹಾಗೂ ಎಸ್.ವಿ. ಸುನಿಲ್ ದೇಶವನ್ನು ಪ್ರತಿನಿಧಿಸಿದ್ದಾರೆ. ಇದಲ್ಲದೆ ಇತರ ಕ್ರೀಡೆಗಳಾದ ಅಥ್ಲೆಟಿಕ್ಸ್‍ನಲ್ಲಿ ಅಶ್ವಿನಿ ನಾಚಪ್ಪ, ಎಂ.ಆರ್. ಪೂವಮ್ಮ, ಜಿ.ಜಿ. ಪ್ರಮೀಳಾ, ಬ್ಯಾಡ್‍ಮಿಂಟನ್‍ನಲ್ಲಿ ಅಶ್ವಿನಿ ಪೊನ್ನಪ್ಪ, ಸ್ಕ್ವಾಷ್‍ನಲ್ಲಿ ಜೋತ್ಸ್ನಾ ಚಿಣ್ಣಪ್ಪ, ಟೆನ್ನಿಸ್‍ನಲ್ಲಿ ರೋಹನ್ ಬೋಪಣ್ಣ ಒಲಿಂಪಿಕ್ಸ್ ತಾರೆಗಳು.
ಒಲಿಂಪಿಕ್ಸ್‍ನಲ್ಲಿ ಭಾರತ...
ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಈತನಕ ಒಟ್ಟು 8 ಚಿನ್ನ, 1 ಬೆಳ್ಳಿ ಹಾಗೂ 2 ಕಂಚಿನ ಪದಕವನ್ನು ಪಡೆದಿದೆ. 1980 ರ ಮಾಸ್ಕೋ ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕಗಳಿಸಿದ್ದ ಭಾರತ ಹಾಕಿ ತಂಡದ ಓರ್ವ ಆಟಗಾರರಾಗಿ ಎಂ.ಎಂ. ಸೋಮಯ್ಯ ತಂಡದಲ್ಲಿದ್ದರೆ, 1972 ರಲ್ಲಿ ಕಂಚಿನ ಪದಕಗಳಿಸಿದ ಭಾರತದ ಆಟಗಾರರಾಗಿ ಕೊಡಗಿನವರಾದ ಬಿ.ಪಿ. ಗೋವಿಂದ ಹಾಗೂ ಎಂ.ಪಿ. ಗಣೇಶ್ ತಂಡದಲ್ಲಿದ್ದರು. ಇವರ ಪೈಕಿ ಎಂ.ಪಿ. ಗಣೇಶ್ ಅವರಿಗೆ ಇತ್ತೀಚೆಗೆ ದೇಶದ ಪ್ರತಿಷ್ಠಿತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ‘ಪದ್ಮಶ್ರೀ’ ಬಿರುದು ಲಭಿಸಿರುವುದೂ ಜಿಲ್ಲೆಗೊಂದು ಹಿರಿಮೆ. ಹಾಕಿಯಲ್ಲಿ ಕರ್ನಾಟಕ ರಾಜ್ಯದಿಂದ 27 ಮಂದಿ ಒಲಿಂಪಿಕ್ಸ್ ಆಡಿದ್ದರೆ ಇವರಲ್ಲಿ 11 ಆಟಗಾರರು ಕೊಡಗಿನವರು ಎಂಬದು ಮತ್ತೊಂದು ವಿಶೇಷವಾಗಿದೆ. 2020 ರ ಜುಲೈಯಲ್ಲಿ ಟೋಕಿಯೋದಲ್ಲಿ ಈ ಬಾರಿಯ ಕ್ರೀಡಾಕೂಟ ನಡೆಯಬೇಕಿತ್ತು.
ವರದಿ: ಶಶಿ ಸೋಮಯ್ಯ, ಸಹಕಾರ: ಚೆಪ್ಪುಡೀರ ಕಾರ್ಯಪ್ಪ.