ವೀರಾಜಪೇಟೆ, ಜೂ. 23: ಕಳೆದ 1 ವರ್ಷದ ಹಿಂದೆ ಇಲ್ಲಿನ ಮಾಂಸ ಮಾರುಕಟ್ಟೆಯ ಬಳಿ ಆರಂಭಗೊಂಡ ಹೊಸ ಮತ್ಸ್ಯ ಭವನದ ಸಮುದ್ರದ ಹಸಿ ಮೀನು ಮಾರಾಟದ ಮಳಿಗೆಗಳನ್ನು ಮೊದಲ ಬಾರಿಗೆ ಇ.ಟೆಂಡರ್ ಹರಾಜು ಬಿಡ್‍ನ ಮೂಲಕ ವಿಲೇವಾರಿ ಮಾಡಲು ಪಟ್ಟಣ ಪಂಚಾಯಿತಿ ನಿರ್ಧರಿಸಿದ್ದು ಇ.ಟೆಂಡರ್‍ನಲ್ಲಿ ಅಂತರರಾಜ್ಯ ಮೀನು ವ್ಯಾಪಾರಿಗಳು ಭಾಗವಹಿ ಸಲಿರುವುದರಿಂದ ಸ್ಥಳೀಯ ಮೀನು ವ್ಯಾಪಾರಿಗಳಿಗೆ ಆತಂಕ ಉಂಟಾಗಿದೆ.ಜೂನ್ 16ರಂದು ಪಟ್ಟಣ ಪಂಚಾಯಿತಿಯು ಮತ್ಸ್ಯ ಭವನದ 17 ಹಸಿ ಮೀನು ಮಳಿಗೆಗಳನ್ನು ಬಹಿರಂಗ ಹರಾಜು ಮಾಡಲು ನಿರ್ಧರಿಸಿತು. 22 ಮಂದಿ ಮಳಿಗೆಗಳಿಗೆ ತಲಾ ರೂ. 1,00,000 ಇ.ಎಂ.ಡಿ. ಪಾವತಿಸಿದರೂ ಬಿಡ್‍ದಾರರು ಹರಾಜು ಪ್ರಕ್ರಿಯೆ ಸಮಯದಲ್ಲಿ ಸ್ಥಳದಲ್ಲಿದ್ದರೂ ಹಸಿ ಮೀನಿನ ಮಳಿಗೆಗಳನ್ನು ಯಾರೂ ಬಿಡ್ ಮಾಡದ ಹಿನ್ನಲೆಯಲ್ಲಿ ಹರಾಜನ್ನು ಮುಂದೂಡ ಲಾಗಿತ್ತು. ಈಗ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೈಗೊಂಡಿರುವ ಇ ಟೆಂಡರ್ ಹರಾಜು ಬಿಡ್‍ನಲ್ಲಿ ಅಂತರರಾಜ್ಯ ಹಸಿ ಮೀನು ವ್ಯಾಪಾರಿಗಳು ಮುಕ್ತವಾಗಿ ಭಾಗವಹಿಸಲು ಪಟ್ಟಣ ಪಂಚಾಯಿತಿ ಅವಕಾಶ ನೀಡಿದೆ.(ಮೊದಲ ಪುಟದಿಂದ) ಹಸಿ ಮೀನು ವ್ಯಾಪಾರಿಗಳು ಈಗಿನ ಮತ್ಸ್ಯಭವನದಲ್ಲಿ ಮೂಲ ಸೌಕರ್ಯಗಳಿಲ್ಲ, ಮಳೆ ಬಂದಾಗ ನೀರು ಮತ್ಸ್ಯಭವನದೊಳಗೆ ನುಗ್ಗುತ್ತಿದೆ ಎಂಬ ಆರೋಪವನ್ನು ಅಧಿಕಾರಿಗಳು ತಳ್ಳಿ ಹಾಕಿದ್ದು ಮತ್ಸ್ಯ ಭವನದಲ್ಲಿ ಶೀತಲೀಕರಣದ ಘಟಕ, ನಲ್ಲಿ ನೀರಿನ ಸೌಲಭ್ಯ ಸೇರಿದಂತೆ ಇತರ ಎಲ್ಲ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಸರಕಾರಕ್ಕೆ ನಿಗದಿಪಡಿಸಿದ ನಿರೀಕ್ಷಿತ ಆದಾಯ ಬಾರದಿದ್ದರೆ ಹರಾಜು ಪ್ರಕ್ರಿಯೆಯನ್ನು ಮುಂದೂಡಲು ಸಾಧ್ಯವಾಗಿದೆ. ಈಗಿನ ಇ.ಟೆಂಡರ್‍ನ ಮುಕ್ತ ಹರಾಜಿನಿಂದ ಎಲ್ಲ ಬಿಡ್‍ದಾರರು ಭಾಗವಹಿಸಬಹುದಾಗಿದೆ. ವೀರಾಜಪೇಟೆ ಮತ್ಸ್ಯಹಾರಿಗಳಿಗೆ ಅಪ್ಪಟ ಗುಣಮಟ್ಟದ ಮೀನು ನ್ಯಾಯ ಸಮ್ಮತವಾದ ಬೆಲೆಯಲ್ಲಿ ದೊರಕಬೇಕೆನ್ನುವುದೇ ಪಟ್ಟಣ ಪಂಚಾಯಿತಿ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೊನಾ ಲಾಕ್‍ಡೌನ್ ನಿರ್ಬಂಧದ ಹಿನ್ನೆಲೆಯಲ್ಲಿ ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಚೆಕ್‍ಪೋಸ್ಟ್ ಪೂರ್ಣವಾಗಿ ಬಂದ್ ಆಗಿತ್ತು. ಇದೀಗ ಲಾಕ್‍ಡೌನ್ ಸಡಿಲಿಕೆಗೊಂಡಿದರಿಂದ ಕೇರಳದ ತಲಚೇರಿ ಕಣ್ಣಾನೂರು ಸಮುದ್ರದ ಕರಾವಳಿಯಿಂದ ಬರುವ ಮೀನು ಈಗ ಸುಮಾರು 240 ಕಿ.ಮೀ ಬಳಸು ದಾರಿಯಲ್ಲಿ ಬರುತ್ತಿದ್ದು ಈಗಿನ ಹಸಿ ಮೀನಿನ ದರವೂ ದುಬಾರಿಯಾಗಿದೆ. ವೀರಾಜಪೇಟೆ ಪಟ್ಟಣ ಪಂಚಾಯಿತಿಯು ಇ ಟೆಂಡರ್ ಮೂಲಕ ಹಸಿ ಮೀನು ಮಳಿಗೆಗಳ ಬಿಡ್‍ಗೆ ಮುಕ್ತ ಅವಕಾಶ ನೀಡಿರುವುದರಿಂದ ವೀರಾಜಪೇಟೆ ಯಿಂದ ಸುಮಾರು 80 ಕಿ.ಮೀ ಅಂತರದಲ್ಲಿರುವ ಸಮುದ್ರದ ಕರಾವಳಿಯ ಮೀನು ವ್ಯಾಪಾರಿಗಳು ಇ.ಟೆಂಡರ್ ನಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿರುವುದು ಕಂಡು ಬಂದಿದೆ. ಕೇರಳದ ಕೆಲವು ಹಸಿ ಮೀನು ವ್ಯಾಪಾರಿಗಳು ಇ.ಟೆಂಡರ್ ಬಿಡ್‍ನ ಷರತ್ತುಗಳು ಇತರ ಮಾಹಿತಿಗಳನ್ನು ಪಟ್ಟಣ ಪಂಚಾಯಿತಿ ಕಾರ್ಯಾಲಯದಿಂದ ಪಡೆದುಕೊಂಡಿರುವುದಾಗಿ ಗೊತ್ತಾಗಿದೆ. ತಲಚೇರಿ, ಕಣ್ಣಾನೂರಿನ ಸಮುದ್ರದ ಕರಾವಳಿಯ ವ್ಯಾಪಾರಿಗಳು ವೀರಾಜಪೇಟೆ ಹಾಗೂ ಇತರ ಊರುಗಳಿಗೆ ಸಗಟು ದರದಲ್ಲಿ ಹಸಿ ಮೀನನ್ನು ಪೊರೈಸುತ್ತಿದ್ದು ವೀರಾಜಪೇಟೆ ಮತ್ಸ್ಯಭವನದ ಇ.ಟೆಂಡರ್ ಬಿಡ್‍ಗೂ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ.

ವೀರಾಜಪೇಟೆ ಪಟ್ಟಣ ಪಂಚಾಯಿತಿಯು ಮತ್ಸ್ಯ ಭವನದ 17ಮಳಿಗೆಗಳಿಗೆ ಇ.ಟೆಂಡರ್ ಬಿಡ್‍ಗೆ ತಾ22ರಿಂದ 29ರವರೆಗೆ ಅವಧಿಯನ್ನು ನಿಗದಿಪಡಿಸಿದೆ. ಬಿಡ್‍ದಾರರಿಗೆ ಜುಲೈ 1 ರಿಂದ ಸಮುದ್ರದ ಹಸಿ ಮೀನು ಮಾರಾಟ ಮಳಿಗೆಯನ್ನು ಆರಂಭಿಸಲು ಅವಕಾಶ ನೀಡಲಿದೆ. ವೀರಾಜಪೇಟೆ ಹಸಿ ಮೀನು ವ್ಯಾಪಾರಿಗಳ ಹಿಂದಿನ ಟೆಂಡರ್ ಬಿಡ್ ತಿರಸ್ಕಾರಗೊಂಡು ಮುಂದೂಡಿರುವುದರಿಂದ ಈ ಹಿಂದಿನ ಒಪ್ಪಂದ ಬಾಡಿಗೆ ನಿಗದಿಯಂತೆ ಸಮುದ್ರದ ಮೀನು ಮಾರಾಟಕ್ಕೆ ಎರಡು ಮಳಿಗೆಗಳನ್ನು ತಾತ್ಕಾಲಿಕವಾಗಿ ಮೀನು ಮಾರಾಟಕ್ಕೆ ಪಟ್ಟಣ ಪಂಚಾಯಿತಿ ಅನುವು ಮಾಡಿಕೊಟ್ಟಿದೆ. ಮತ್ಸ್ಯ ಭವನದಲ್ಲಿ ಹೊಳೆ ಮೀನು ಮಾರಾಟದ ಎರಡು ಮಳಿಗೆಗಳು ಎಂದಿನಂತೆ ಮಾರಾಟ ಮುಂದುವರೆಸಿವೆ.

ಕೊಡಗು ಕೇರಳದ ಗಡಿ ಭಾಗದ ಮಾಕುಟ್ಟ ಹಾಗೂ ಕುಟ್ಟ ಚೆಕ್‍ಪೋಸ್ಟ್ ಸಧ್ಯದಲ್ಲಿ ಓಪನ್ ಆದರೆ ಮತ್ಸ್ಯಭವನದ ಮಳಿಗೆಗಳನ್ನು ಪಡೆಯುವ ಕೇರಳದ ಆಸಕ್ತ ವ್ಯಾಪಾರಿಗಳಿಗೆ ಹಸಿ ಮೀನು ವ್ಯಾಪಾರಕ್ಕೆ ಇನ್ನು ಅನುಕೂಲವಾಗಲಿದೆ. ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಅನೇಕ ವರ್ಷಗಳಿಂದಲೂ ಹಸಿ ಮೀನು ಮಳಿಗೆಗಳ ಹರಾಜಿನಿಂದ ವರ್ಷಕ್ಕೆ ರೂ ಹತ್ತು ಲಕ್ಷದಿಂದ ಹನ್ನೆರಡು ಲಕ್ಷಕ್ಕೂ ಆದಾಯ ಬರುತ್ತಿತ್ತು. - ಡಿ.ಎಂ.ಆರ್.