ಸಿದ್ದಾಪುರ, ಜೂ. 23: ಮರವೊಂದು ಮನೆಯ ಮೇಲೆ ಬಿದ್ದು ಮನೆಯೊಂದಿಗೆ ಮನೆಯೊಡತಿಯನ್ನು ಕಳೆದುಕೊಂಡ ಕುಟುಂಬವೊಂದಕ್ಕೆ ಹೊಸ ಮನೆಯನ್ನು ನಿರ್ಮಾಣ ಮಾಡಿಕೊಟ್ಟು ಸಂಘಟನೆಗಳು ಮಾನವೀಯತೆ ಮೆರೆದಿವೆ.
ತಿತಿಮತಿ ಸಮೀಪದ ತಾರಿಕಟ್ಟೆ ಎಂಬಲ್ಲಿ ಬಡ ಕುಟುಂಬ ನೌಶಾದ್ ಹಾಗೂ ರೈಹಾನತ್ ದಂಪತಿಗಳು ತಮ್ಮ ಪುಟ್ಟ ಮಗುವಿನೊಂದಿಗೆ ವಾಸ ಮಾಡಿಕೊಂಡಿದ್ದರು. ಕಳೆದ ವರ್ಷ ಗಾಳಿ, ಮಳೆಗೆ ಬೃಹತ್ ಗಾತ್ರದ ಮರವೊಂದು ನೌಶಾದ್ ಅವರ ಮನೆಯ ಮೇಲೆ ಬಿದ್ದ ಪರಿಣಾಮ ಅವರ ಪತ್ನಿ ರೈಹಾನತ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಪುಟ್ಟ ಮಗು ಹಾಗೂ ನೌಶಾದ್ ಪ್ರಾಣಾಪಾಯದಿಂದ ಪಾರಾಗಿದ್ದರು. ಮನೆ ಹಾಗೂ ತನ್ನ ಪತ್ನಿಯನ್ನು ಕಳೆದುಕೊಂಡಿದ್ದ ನೌಶಾದ್ ಸಂಕಷ್ಟದಲ್ಲಿ ಸಿಲುಕಿ ಕೊಂಡಿದ್ದರು.
ಇದನ್ನು ಅರಿತ ಮುಸ್ಲಿಂ ವೆಲ್ಪೇರ್ ಸೊಸೈಟಿ ಕತಾರ್ ಕುಟ್ಯಾಡಿ ಹಾಗೂ ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿ ಸಿದ್ದಾಪುರ ಸಂಘಟನೆಗಳು ಸೇರಿ ಇದೀಗ ಹೊಸ ಮನೆಯೊಂದನ್ನು ನಿರ್ಮಾಣ ಮಾಡಿಕೊಟ್ಟು ಮಾನವೀಯತೆ ಮೆರೆದಿವೆ. ಸಂಘಟನೆಯ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ಹಸ್ತಾಂತರ: ಸಂಘಟನೆಗಳ ಮುಖಾಂತರ ನಿರ್ಮಾಣ ಮಾಡಿರುವ ಮನೆಯನ್ನು ತಾ. 24 ರಂದು (ಇಂದು) ನೌಶಾದ್ ಕುಟುಂಬಕ್ಕೆ ಹಸ್ತಾಂತರಿಸ ಲಿದ್ದಾರೆ. ಕಾರ್ಯಕ್ರಮದಲ್ಲಿ ಜಮಾಯತ್ ಹಿಂದ್ ಇಸ್ಲಾಂ ಸಂಘಟನೆಯ ಹಾಗೂ ಅದರ ಅಂಗ ಸಂಘಟನೆಗಳ ಮುಖ್ಯಸ್ಥರಾದ ಅಬ್ದುಲ್ ಸಲಾಂ ತಿತಿಮತಿ ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು ಹಾಗೂ ಪಿ.ಡಿ.ಓ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವರದಿ: ವಾಸು ಎ.ಎನ್