ಕೂಡಿಗೆ, ಜೂ. 23: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಾತೇ ಹಳ್ಳ ಎಂಬ ಕೆರೆಯ ನೀರು ಆ ಭಾಗದ ರೈತರ ಜಮೀನಿಗೆ ಬೇಸಾಯ ಮಾಡಲು ಅನುಕೂಲವಾಗುವಂತೆ ಸ್ವಾತೇ ಹಳ್ಳದಿಂದ ಉಪ ಕಾಲುವೆಗಳ ಮೂಲಕ ನೀರು ಹರಿಸುವ ರೂ. 90 ಲಕ್ಷ ವೆಚ್ಚದ ಯೋಜನೆಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ. ಪಿ. ಅಪ್ಪಚ್ಚು ರಂಜನ್ ಭೂಮಿ ಪೂಜೆ ನೆರವೇರಿಸಿದರು
ನಂತರ ಮಾತಾನಾಡಿದ ಶಾಸಕರು ಉಪ ಕಾಲುವೆಗಳ ಮೂಲಕ ನೀರು ಸರಾಗವಾಗಿ ರೈತರ ಜಮೀನಿಗೆ ಹರಿದರೆ ಬೇಸಾಯ ಮಾಡಲು ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಈ ಭಾಗದ ಕೆರೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಮತ್ತು ಉಪ ರಸ್ತೆಗಳ ಡಾಂಬರಿಕರಣಕ್ಕೆ ಹಣ ನೀಡುವುದಾಗಿ ಭರವಸೆ ನೀಡಿದರು.
ಬಹುದಿನಗಳಿಂದ ಸ್ವಾತೇ ಹಳ್ಳದ ಕಾಲುವೆಗಳು ಹೂಳು ತುಂಬಿಕೊಂಡು ನೀರು ಸರಾಗವಾಗಿ ರೈತರ ಜಮೀನಿಗೆ ಬರದೆ ಸಮೀಪದ ಹಳ್ಳಕ್ಕೆ ಹೋಗುತ್ತಿತ್ತು. ಇದರಿಂದಾಗಿ ಈ ವ್ಯಾಪ್ತಿಯ ನೂರಾರು ಎಕರೆ ಭೂಮಿಯಲ್ಲಿ ಭತ್ತದ ಬೆಳೆಯನ್ನು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಇಲ್ಲಿನ ರೈತರಿಗೆ ನೀರು ಇದ್ದರೂ ಮಳೆಯನ್ನೇ ಅವಲಂಬಿಸಬೇಕಾಗಿತ್ತು. ಈ ಕಾಮಗಾರಿಯು ಜಿಲ್ಲಾಧಿಕಾರಿಗಳ ವಿಶೇಷ ಅನುದಾನ ಹಣವಾಗಿದ್ದು ನೀರಾವರಿ ಇಲಾಖೆಯ ಉಸ್ತುವಾರಿ ಯಲ್ಲಿ ಕಾಮಗಾರಿ ನಡೆಯಲಿದೆ.
ಈ ಸಂದರ್ಭದಲ್ಲಿ ಹೆಬ್ಬಾಲೆ ಜಿಲ್ಲಾ ಪಂಚಾಯತಿ ಸದಸ್ಯ ಹೆಚ್. ಎಸ್. ಶ್ರೀನಿವಾಸ, ತಾ.ಪಂ. ಸದಸ್ಯ ಜಯಣ್ಣ, ಕಾವೇರಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್. ಇಂಜಿನಿಯರ್ ನಾಗರಾಜ್, ಹೆಬ್ಬಾಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜಶೇಖರ, ಶಿರಂಗಾಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹರೀಶ್ ಸೇರಿದಂತೆ ಶಿರಂಗಾಲ ಗ್ರಾಮದ ರೈತರು ಹಾಜರಿದ್ದರು.