ಶನಿವಾರಸಂತೆ, ಜೂ. 23: ಗುಂಡು ಹೊಡೆದುಕೊಂಡು ನಿವೃತ್ತ ಪೊಲೀಸ್ ಸಹಾಯಕ ಠಾಣಾಧಿಕಾರಿಯೋರ್ವರು ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ನಡೆದಿದೆ. ನಿಡ್ತ ಗ್ರಾ.ಪಂ. ವ್ಯಾಪ್ತಿಯ ಮಾದೇಗೋಡು ಗ್ರಾಮ ನಿವಾಸಿ, ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಸಹಾಯಕ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಎಂ.ಎಸ್. ಈರಪ್ಪ (60) ಎಂಬವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ.ಶನಿವಾರಸಂತೆ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕರ್ತವ್ಯದಲ್ಲಿದ್ದ ಈರಪ್ಪ ಅವರು ಕಳೆದ 9 ತಿಂಗಳ ಹಿಂದೆಯಷ್ಟೇ ಸಹಾಯಕ ಠಾಣಾಧಿಕಾರಿಯಾಗಿ ಮುಂಬಡ್ತಿ ಹೊಂದಿ ಇದೇ ಠಾಣೆಯಲ್ಲಿ ಕರ್ತವ್ಯ ಮುಂದುವರಿಸಿದ್ದರು. ಇದಕ್ಕೂ ಮೊದಲು ಕುಶಾಲನಗರ, ಶ್ರೀಮಂಗಲ

(ಮೊದಲ ಪುಟದಿಂದ) ಸೇರಿದಂತೆ ವಿವಿಧೆಡೆ ಪೊಲೀಸ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದರು. ಕಳೆದ ಮೇ 30 ರಂದು ಸೇವೆಯಿಂದ ನಿವೃತ್ತಿ ಹೊಂದಿ ಮಾದೇಗೋಡು ಗ್ರಾಮದ ತಮ್ಮ ಮನೆಯಲ್ಲಿ ಪತ್ನಿ, ಮಕ್ಕಳೊಂದಿಗೆ ನೆಲೆಸಿದ್ದರು.

ಇಂದು ಬೆಳಿಗ್ಗೆ ಪತ್ನಿ ಹಾಗೂ ಮಗ ಮನೆಯ ಹೊರಗಡೆ ಇದ್ದ ಸಂದರ್ಭ ಮನೆಯ ಒಳಗಡೆ ಒಂಟಿ ನಳಿಕೆ ಕೋವಿಯಿಂದ ಎದೆ ಭಾಗಕ್ಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಡಿವೈಎಸ್‍ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ದೇವರಾಜ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. -ನರೇಶ್, ದಿನೇಶ್ ಮಾಲಂಬಿ