ವೀರಾಜಪೇಟೆ, ಜೂ. 22: ಜೊತೆಗಿದ್ದ ಸ್ನೇಹಿತರೇ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ಮನನೊಂದು ಕೆರೆಗೆ ಹಾರಿ ಪ್ರಾಣ ತ್ಯಾಗ ಮಾಡಿರುವ ಘಟನೆ ವೀರಾಜಪೇಟೆ ಚೆಂಬೆಬೆಳ್ಳೂರು ಗ್ರಾಮದಲ್ಲಿ ನಡೆದಿದೆ.
ಚೆಂಬೆಬೆಳ್ಳೂರು ಗ್ರಾಮದ ನಿವಾಸಿ ದಿ. ಎಂ.ಮಾಚಯ್ಯ ಅವರ ಪುತ್ರ ಎಂ.ಎಂ. ಅಶೋಕ್ ದೇವಯ್ಯ (46) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಮೃತ ಅಶೋಕ್ ಪ್ರಕರಣ ಒಂದರಲ್ಲಿ ಆರೋಪಿಯಾಗಿ ಕೇರಳ ರಾಜ್ಯದ ಕಣ್ಣನೂರು ಬಂದಿಖಾನೆಯಲ್ಲಿ ಜೈಲುವಾಸ ಅನುಭವಿಸಿ ಸ್ನೇಹಿತರೊಬ್ಬರು ನೀಡಿದ ಜಾಮೀನು ಮೇಲೆ ದಿನಾಂಕ ತಾ. 19 ರಂದು ಮನೆಗೆ ಬಂದಿದ್ದರು. ನಂತರದಲ್ಲಿ ತಾ. 20 ರಂದು ಮನೆಯಿಂದ ತನ್ನ ತಾಯಿಯ ಬಳಿ ಗದ್ದೆಗೆ ಹೊಗಿ ಬರುತ್ತೇನೆ ಎಂದು ಹೇಳಿ ತೆರಳಿದ್ದರು. ಅಂದು ರಾತ್ರಿ ವೇಳೆಯಾದರೂ ಬಾರದೆ ಇದ್ದ ಅಶೋಕನ ತಾಯಿ ಆತಂಕದಿಂದ ಹುಡುಕಾಟ ಆರಂಭಿಸಿದ್ದಾರೆ. ಸಂಬಂಧಿಕರ ಮನೆಗೆ ದೂರವಾಣಿ ಕರೆ ಮಾಡಿದರು ಬಂದಿರುವುದಿಲ್ಲ ಎಂಬ ಮಾಹಿತಿ ಬಂದಿದೆ.
ತಾ. 21 ರಂದು ಸಂಶಯದಿಂದ ತಾಯಿ ಎಂ.ಎಂ. ಮುದ್ದವ್ವ ಅವರು ಗದ್ದೆಗೆ ಹೊಂದಿಕೊಂಡಿರುವ ಕೆರೆಯ ಭಾಗಕ್ಕೆ ತೆರಳಿದ್ದಾರೆ. ಕೆರೆಯ ದಡದಲ್ಲಿ ಕಳಚಿಟ್ಟಿದ್ದ ವಸ್ತ್ರಗಳು ಪಾದರಕ್ಷೆ (ಬೂಟು) ಸ್ವೆಟರ್ ಮತ್ತು ಕೊಡೆ ಹಾಗೂ ಕೈ ಬರಹದಿಂದ ಬರೆದ ಚೀಟಿ ಗೋಚರಿಸಿದೆ. ತಾಯಿ ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಕೆರೆಯ ನೀರಿನಲ್ಲಿ ತೇಲುತಿದ್ದ ಮೃತನ ಶರೀರವನ್ನು ದಡಕ್ಕಿರಿಸಿ ಸ್ಥಳ ಮಹಜರು ನಡೆಸಿದ್ದು ಮೃತನ ತಾಯಿ ಮುದ್ದವ್ವ ಅವರು ನೀಡಿರುವ ದೂರಿನ ಅನ್ವಯ ಮತ್ತು ಚೀಟಿಯಲ್ಲಿ ಉಲ್ಲೇಖವಾದ ಮೃತನ ಸ್ನೇಹಿತರಾದ ರಾಜೇಶ್ ಅಯ್ಯಪ್ಪ ಮತ್ತು ಅನೂಪ್ ಅವರ ಮೇಲೆ ಗ್ರಾಮಾಂತರ ಠಾಣೆಯಲ್ಲಿ 306 ಐ.ಪಿ.ಸಿ ರಂತೆ ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
-ಕೆ.ಕೆ.ಎಸ್