ವೀರಾಜಪೇಟೆ, ಜೂ. 22: ವೀರಾಜಪೇಟೆ ತಾಲೂಕಿನ ಕಂಡಂಗಾಲ, ವಿ.ಬಾಡಗ, ರುದ್ರುಗುಪ್ಪೆ ಭಾಗಗಳಲ್ಲಿ ವನ್ಯ ಜೀವಿಗಳ ಹಾವಳಿ ಮಿತಿ ಮೀರಿದ್ದು, ಅನೇಕ ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿ.ಬಾಡಗ ಸೇರಿದಂತೆ ನೊಂದ ಗ್ರಾಮಸ್ಥರುಗಳÀ ಪರವಾಗಿ ಕಂಜಿತಂಡ ಗಿಣಿ ಮೊಣ್ಣಪ್ಪ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಗಿಣಿ ಮೊಣ್ಣಪ್ಪ ಅವರು ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ವಿ ಬಾಡಗ, 2ನೇ ರುದ್ರುಗುಪ್ಪೆ, ತೊತೇರಿ, ನಾಂಗಾಲ ಗ್ರಾಮಗಳಲ್ಲಿ ಕಾಡಾನೆಗಳು, ಕಾಡುಕೋಣ, ಕಡವೆ, ಕಾಡು ಹಂದಿಗಳ ಹಾವಳಿ ಹೆಚ್ಚಾಗುತ್ತಿದೆ. ಅಪರಾಹ್ನ 4 ಗಂಟೆಯ ನಂತರ ಈ ಗ್ರಾಮಗಳ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗುತ್ತಿದೆ. ಗ್ರಾಮಸ್ತರಿಗೆ ಯಾರಿಗಾದರೂ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದರೂ ಕೂಡ ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ. ಹಗಲು ಸಮಯದಲ್ಲಿ ಕಾಡಾನೆಗಳು ಮುಖ್ಯ ರಸ್ತೆಯಲ್ಲಿ ರಾಜಾರೋಷವಾಗಿ ಸಂಚರಿಸುತ್ತಿದೆ. ಅರಣ್ಯ ಇಲಾಖೆಗೆ ದೂರು ನೀಡಿದರೆ ಅಧಿಕಾರಿಗಳು ಮೌನ ತಾಳುತ್ತಿದ್ದಾರೆ. ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅಧಿಕಾರಿಗಳು ಗ್ರಾಮಸ್ತರ ದೂರುಗಳನ್ನು ಗಂಭೀರವಾಗಿ ಪರಿಗಣಿಸದೆ ನಿರಂತರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಮುಖರಾದ ಮಳವಂಡ ಪೂಣಚ್ಚ ಮಾತನಾಡಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಿಗೆ ಪ್ರತಿ ವರ್ಷ 200ಕ್ಕು ಅಧಿಕ ಇಂಚು ಮಳೆ ಬೀಳುತ್ತದೆ. ಹೆಚ್ಚಿನ ಮಳೆಯಿಂದಾಗಿ ಕಾಫಿ, ಕಾಳು ಮೆಣಸು, ಸೇರಿದಂತೆ ಉಳಿದ ಬೆಳೆಗಳು ಕೊಳೆ ರೋಗಕ್ಕೆ ತುತ್ತಾಗುತ್ತಿದೆ. ಅಳಿದು ಉಳಿದ ಬೆಳೆಗಳನ್ನು ಕಾಡು ಪ್ರಾಣಿಗಳು ನಾಶ ಮಾಡುತ್ತಿವೆ. ಕಾಡು ಕೋಣಗಳು ಮನೆಯ ಅಂಗಳಕ್ಕೆ ಬಂದು ಹೂ ಗಿಡಗಳನ್ನು ತಿನ್ನುತ್ತಿದೆ. ಪ್ರತಿನಿತ್ಯ ಇದೇ ತರಹದ ಹಾವಳಿಯನ್ನು ಅನುಭವಿಸ ಬೇಕಾಗಿದೆ ಎಂದು ದೂರಿದರು.
ಗೋಷ್ಠಿಯಲ್ಲಿ ಗ್ರಾಮದ ಪ್ರಮುಖರಾದ ಕೋಲತಂಡ ರಘು ಮಾಚಯ್ಯ ಉಪಸ್ಥಿತರಿದ್ದರು.ನಿರಂತರ ಕಾಡುಪ್ರಾಣಿ ಉಪಟಳ
ಕ್ರಮಕ್ಕೆ ಆಗ್ರಹ