ಮಡಿಕೇರಿ, ಜೂ. 21: ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಿಂದ ಕೊರೊನಾ ಲಾಕ್‍ಡೌನ್ ನಿರ್ಬಂಧ ಸಡಿಲಿಕೆ ನಡುವೆ ಅನಿವಾರ್ಯವಾಗಿ ಪ್ರಯಾಣಿಕರ ಬೇಡಿಕೆಯಂತೆ ಬಸ್‍ಗಳನ್ನು ಓಡಿಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ 43 ಬಸ್‍ಗಳು ಸಂಚರಿಸುತ್ತಿದ್ದು, ದಿನವೊಂದಕ್ಕೆ ಸರಾಸರಿ ರೂ. 8 ಲಕ್ಷದಷ್ಟು ನಷ್ಟ ಎದುರಿಸುವಂತಾಗಿದೆ ಎಂದು ಮಡಿಕೇರಿ ಘಟಕದ ವ್ಯವಸ್ಥಾಪಕಿ ಹೆಚ್. ಗೀತಾ ಅವರು ಅಭಿಪ್ರಾಯ ನೀಡಿದ್ದಾರೆ.ಕೊಡಗಿನಲ್ಲಿ ಖಾಸಗಿ ಬಸ್‍ಗಳ ಓಡಾಟ ಸ್ಥಗಿತಗೊಂಡಿರುವ ವೇಳೆ, ರಾಜ್ಯ ಸಾರಿಗೆ ಬಸ್‍ಗಳಿಗೆ ಬೇಡಿಕೆ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ರಾಜಧಾನಿ ಬೆಂಗಳೂರಿಗೆ 3 ರಾಜಹಂಸ ಬಸ್‍ಗಳ ಸಹಿತ 11 ವಾಹನಗಳು ಸಂಚರಿಸುತ್ತಿದ್ದು, ಪ್ರಯಾಣಿಕರ ಇಳಿಮುಖದಿಂದ ಸಂಸ್ಥೆಗೆ ನಿರೀಕ್ಷಿತ ಆದಾಯ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಮಡಿಕೇರಿಯಿಂದ ಮೈಸೂರಿಗೆ 3 ಬಸ್‍ಗಳು, ಮಂಗಳೂರು 1, ಶಿವಮೊಗ್ಗ 2, ಹಾಸನ 1 ಬಸ್ ಹೊರತುಪಡಿಸಿದರೆ, ಕೊಡಗು ಜಿಲ್ಲೆಯಲ್ಲಿ 25 ಬಸ್‍ಗಳು ಸಂಚರಿಸುತ್ತಿದ್ದು, ಆದಾಯ ಇಲ್ಲದಾಗಿದೆ ಎಂದು ವಿವರಿಸಿದರು.

ಪ್ರಯಾಣಿಕರ ಕೊರತೆ: ಜಿಲ್ಲೆಯಲ್ಲಿ ಸೀಮಿತ ಪ್ರಯಾಣಿಕರಿದ್ದು, ಕಿ.ಮೀ.ವೊಂದಕ್ಕೆ ರೂ. 36 ರಷ್ಟು ಸಂಸ್ಥೆಗೆ ಖರ್ಚು ಬರುತ್ತಿದ್ದು, ಈಗಿನ ಸನ್ನಿವೇಶದಲ್ಲಿ ಕೇವಲ ರೂ. 6 ರಷ್ಟು ಪ್ರಯಾಣ ವೆಚ್ಚ ಲಭಿಸುತ್ತಿದೆ ಎಂದು ಬೊಟ್ಟು ಮಾಡಿದ ಅವರು, ದಿನವೊಂದಕ್ಕೆ ರೂ. 7 ರಿಂದ 8 ಲಕ್ಷ ನಷ್ಟ ಎದುರಿಸುವಂತಾಗಿದೆ ಎಂದು ಮಾಹಿತಿ ನೀಡಿದರು.

ರೂ. 13 ಲಕ್ಷ 3 ಲಕ್ಷಕ್ಕೆ ಇಳಿಕೆ

ಕೊರೊನಾ ಮುನ್ನ ದಿನವೊಂದಕ್ಕೆ ಸರಾಸರಿ ರೂ. 12 ರಿಂದ 13 ಲಕ್ಷ ಆದಾಯವಿದ್ದು, ಪ್ರಸ್ತುತ ರೂ. 3 ರಿಂದ 3.50 ಲಕ್ಷ ಪ್ರಯಾಣ ವೆಚ್ಚ ಸಂಗ್ರಹವಾಗುತ್ತಿದೆ ಎಂದು ಗೀತಾ ಅವರು ಅಂಕಿ ಅಂಶ ನೀಡಿದರು.

ಹೀಗಿದ್ದರೂ ನಿರ್ಧಿಷ್ಟ ಮಾರ್ಗಗಳಲ್ಲಿ ಕೆಲವೇ ಮಂದಿ ನಿತ್ಯ ಪ್ರಯಾಣಿಕರ ಬೇಡಿಕೆಯಂತೆ ಜಿಲ್ಲೆಯೊಳಗೆ 25 ಬಸ್‍ಗಳು ಸಂಚರಿಸುತ್ತಿವೆ ಎಂದು ಅಧಿಕಾರಿ ವಿವರಣೆಯಿತ್ತರು.

ಸಿಬ್ಬಂದಿಗೆ ರಜೆ: ಪ್ರಯಾಣಿಕರಿಲ್ಲದೆ ಬಸ್‍ಗಳ ಓಡಾಟ ಅಷ್ಟಾಗಿ ಇಲ್ಲದಿರುವ ಕಾರಣ, ಮಡಿಕೇರಿ ಘಟಕದ ಒಟ್ಟು 380 ನೌಕರರ ಪೈಕಿ ಬಹುಮಂದಿ ರಜೆಯಲ್ಲಿದ್ದು, ಉತ್ತರ ಕರ್ನಾಟಕದ 25 ನೌಕರರು ಕೊರೊನಾ ಲಾಕ್‍ಡೌನ್ ನಡುವೆ ಹೋದವರು ಈತನಕ ಬಂದಿಲ್ಲ ವೆಂದು ‘ಶಕ್ತಿ’ ಪ್ರಶ್ನೆಗೆ ಉತ್ತರಿಸಿದರು.

ವಸತಿ ನಿರ್ಮಾಣ: ಈ ನಡುವೆ ಮಡಿಕೇರಿ ಡಿಪೋ ಬಳಿಯಿದ್ದಂತಹ ಸಾರಿಗೆ ಸಂಸ್ಥೆಯ 12 ವಸತಿಗಳನ್ನು ಶಿಥಿಲಗೊಂಡಿರುವ ಹಿನ್ನೆಲೆ ನೆಲಸಮಗೊಳಿಸಿ ನೂತನವಾಗಿ 12 ಹೊಸ ವಸತಿಯನ್ನು ರೂ. 1.20 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಸಿಬ್ಬಂದಿಗೆ ಒದಗಿಸಿರುವುದಾಗಿ ಗೀತಾ ಅವರು ತಿಳಿಸಿದರು.

ಒಟ್ಟಿನಲ್ಲಿ ಈಗಿನ ಪರಿಸ್ಥಿತಿಯಲ್ಲಿ ಸಾರಿಗೆ ಸಂಸ್ಥೆ ಕೊರೊನಾ ನಡುವೆ ನಷ್ಟದೊಂದಿಗೆ ಸಾಗುವಂತಾಗಿದೆ ಎಂದು ಅವರು ಸುಧಾರಣೆಗೆ ಸಾಕಷ್ಟು ಕಾಲಾವಕಾಶ ಬೇಕಾಗುವುದು ಎಂದು ಅಭಿಪ್ರಾಯಪಟ್ಟರು.