ಶನಿವಾರಸಂತೆ, ಜೂ. 21: ಸಮೀಪದ ಕೊಡ್ಲಿಪೇಟೆ ಅರಣ್ಯ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅರಕನಹಳ್ಳಿ ಗ್ರಾಮದ ಕಾನ್ವೆಂಟ್ ಬಳಿ ಹಾಗೂ ಶಾಂತಪುರ ಗ್ರಾಮದ ರಸ್ತೆ ಬದಿ ಉಪವಲಯ ಅರಣ್ಯಾಧಿಕಾರಿ ಸತೀಶ್ ವಿವಿಧ ಜಾತಿಯ ಗಿಡಗಳನ್ನು ನೆಟ್ಟು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅರಣ್ಯಾಧಿಕಾರಿ ಸತೀಶ್ ಮಾತನಾಡಿ, ವಿಶ್ವ ಪರಿಸರ ದಿನದ ಪ್ರಯುಕ್ತ ಇಲಾಖೆ ವತಿಯಿಂದ ಹೋಬಳಿಯಾದ್ಯಂತ ರಸ್ತೆ ಬದಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗಂಧ, ತೇಗ, ಹೆಬ್ಬೇವು, ಕಹಿಬೇವು, ಹಿಪ್ಪೆ, ಕೂಳಿ ಇತ್ಯಾದಿ ಔಷಧಿ ಗುಣವಿರುವ 2.000 ಗಿಡಗಳನ್ನು ನೆಡುವ ಉದ್ದೇಶವಿದ್ದು, ಈಗಾಗಲೇ 250-300 ಗಿಡಗಳನ್ನು ನೆಡಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು, ಪ್ರಮುಖರು, ಉತ್ಸಾಹಿ ಯುವಕರು, ಸಾರ್ವಜನಿಕರು ಸಹಕಾರ ನೀಡುತ್ತಿದ್ದಾರೆ ಎಂದರು. ಗ್ರಾಮ ಪಂಚಾಯಿತಿ ಸದಸ್ಯ ದಿವಾಕರ್, ಪ್ರಮುಖರಾದ ಭಗವಾನ್ ಗೌಡ, ಮಣಿ, ದಿಲೀಪ್, ಮೂರ್ತಿ, ಇಂದ್ರೋಜಿ ರಾವ್, ಅರಣ್ಯ ಇಲಾಖೆ ಸಿಬ್ಬಂದಿ ಪ್ರಕಾಶ್, ರಾಮಕೃಷ್ಣ ಶೆಟ್ಟಿ, ಶಿವರಾಜ್ ಸೊರಟೂರ್ ಇತರರು ಹಾಜರಿದ್ದರು.