ಕೂಡಿಗೆ, ಜೂ. 21: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂಡಿಗೆ ಗ್ರಾಮದಲ್ಲಿರುವ ಕಾವೇರಿ ನದಿ ಮತ್ತು ಹಾರಂಗಿ ನದಿ ಸೇರುವ ಪ್ರಮುಖ ಸ್ಧಳವಾದ ಸಂಗಮದ ರಸ್ತೆ ಅಭಿವೃದ್ಧಿಗೆ ವಿಧಾನ ಪರಿಷತ್ ಸದಸ್ಯರ ಅನುದಾನವನ್ನು ನೀಡುವುದಾಗಿ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಭರವಸೆ ನೀಡಿದ್ದಾರೆ.

ಕಾವೇರಿ ಮತ್ತು ಹಾರಂಗಿ ನದಿಯ ಸಂಗಮ ಸ್ಥಳ ಪುಣ್ಯಕ್ಷೇತ್ರವಾಗಿರುತ್ತದೆ; ಈ ಸಂಗಮಕ್ಕೆ ಹೋಗುವ ದಾರಿಕ್ಕೆ ಡಾಂಬರೀಕರಣಕ್ಕೆ ಬೇಕಾಗುವ ವಿಧಾನ ಪರಿಷತ್ ಸದಸ್ಯರ ಅನುದಾನವನ್ನು ನೀಡುವುದಾಗಿ ಹುಲುಸೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಅಲ್ಲದೆ ಕೊರೊನಾ ರೋಗ ನಿಂತ ನಂತರ ಹೆಬ್ಬಾಲೆ ಮತ್ತು ಕೂಡಿಗೆ ಗ್ರಾಮ ಪಂಚಾಯತಿಗೆ ಮೊದಲು ನೀಡಿದ ಭರವಸೆಯಂತೆ ಉಪ ರಸ್ತೆಗಳಿಗೆ ಹಂತ ಹಂತವಾಗಿ ಅನುದಾನವನ್ನು ನೀಡುವುದಾಗಿ ಸುನಿಲ್ ಸುಬ್ರಮಣಿ ತಿಳಿಸಿದರು.

ಹೆಬ್ಬಾಲೆ ಗ್ರಾಮ ಪಂಚಾಯತಿ ಕಾರ್ಯಕ್ರಮದ ನಂತರ ಕೂಡಿಗೆ ಸಂಗಮದ ದಾರಿಯನ್ನು ವೀಕ್ಷಣೆ ಮಾಡಿ ಅದರ ಅಂದಾಜು ಕ್ರಿಯಾ ಯೋಜನೆ ಪಟ್ಟಿಯನ್ನು ನೀಡುವಂತೆ ಸಂಬಂಧಿಸಿದ ಇಂಜಿನಿಯರ್‍ಗೆ ತಿಳಿಸಿದರು.