ಸೋಮವಾರಪೇಟೆ, ಜೂ. 21: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಪಟ್ಟಣದ ವಿವಿಧ ತಂಬಾಕು ಮಾರಾಟದ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ, ಕೋಟ್ಪಾ ಕಾಯ್ದೆ ಉಲ್ಲಂಘನೆಗಾಗಿ ದಂಡ ವಿಧಿಸಲಾಯಿತು.

ಪಟ್ಟಣದ ಬಾರ್, ಹೊಟೇಲ್, ಅಂಗಡಿ, ಪಾನ್ ಅಂಗಡಿಗಳಲ್ಲಿ ಕೋವಿಡ್ ವೈರಸ್ ಹರಡಲು ಪ್ರಮುಖ ಕಾರಣವಾದ ಜಗಿಯುವ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಯಿತು.

ಸಾರ್ವಜನಿಕವಾಗಿ ಧೂಮಪಾನ ಮಾಡುವದನ್ನು ನಿಷೇಧಿಸಲಾಗಿದ್ದು, ಅಂಗಡಿಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಗುಟ್ಕಾ ಪ್ಯಾಕೆಟ್‍ಗಳನ್ನು ಬಹಿರಂಗವಾಗಿ ಪ್ರದರ್ಶಿಸಿ ಮಾರಾಟ ಮಾಡುತ್ತಿರುವದು ಕಂಡುಬಂದಿದ್ದರಿಂದ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿ ನೋಟೀಸ್ ಜಾರಿ ಮಾಡಲಾಯಿತು.

18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡುವದು ಅಪರಾಧ ಎಂಬ ಬಗ್ಗೆ ನಾಮಫಲಕ ಅಳವಡಿಸಬೇಕು. ಶಾಲಾ ಕಾಲೇಜು ಆವರಣದಿಂದ 100 ಗಜಗಳ ಅಂತರದ ಒಳಗೆ ಇಂತಹ ಉತ್ಪನ್ನಗಳನ್ನು ಮಾರಾಟ ಮಾಡಬಾರದು. ಜಗಿಯುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು. ಅಂಗಡಿಯಲ್ಲಿ ಧೂಮಪಾನಕ್ಕಾಗಿ ಬೆಂಕಿಪೊಟ್ಟಣ, ಲೈಟರ್‍ಗಳನ್ನು ಇಡಬಾರದು ಎಂದು ತಿಳುವಳಿಕೆ ನೀಡಲಾಯಿತು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಹಾಗೂ ತಂಬಾಕು ನಿಯಂತ್ರಣಾಧಿಕಾರಿ ಡಾ. ಎಂ. ಶಿವಕುಮಾರ್, ಎಂಟಮಾಲಜಿಸ್ಟ್ ಮಂಜುನಾಥ್, ಜಿಲ್ಲಾ ಸಲಹೆಗಾರರಾದ ಪುನೀತ ರಾಣಿ, ಸಮಾಜ ಕಾರ್ಯಕರ್ತ ಆರ್. ಮಂಜುನಾಥ್, ಹಿರಿಯ ಪುರುಷ ಆರೋಗ್ಯ ಸಹಾಯಕ ಮಹೇಶ್, ಪೊಲೀಸ್ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.