ಸುಂಟಿಕೊಪ್ಪ, ಜೂ. 21: ರಾಷ್ಟ್ರೀಯ ಹೆದ್ದಾರಿ ಶಾಂತಗಿರಿ ಬಳಿಯಲ್ಲಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಚಾಲಕನೋರ್ವನಿಗೆ ಗಂಭೀರ ಗಾಯಗಳಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಶಾಲನಗರದಿಂದ ಸುಂಟಿಕೊಪ್ಪ ಕಡೆಗೆ ನ್ಯಾನೋ (ಕೆಎ.21 ಎಂ8938) ಕಾರಿನಲ್ಲಿ ಆಗಮಿಸುತ್ತಿದ್ದ ಸಂದರ್ಭ ಸುಂಟಿಕೊಪ್ಪ ಕಡೆಯಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಫಿಗೋ ಕಾರಿಗೆ ಡಿಕ್ಕಿಹೊಡೆದಿದ್ದು ನಿಯಂತ್ರಣ ತಪ್ಪಿದ ನ್ಯಾನೋ ಕಾರು ಎದುರಿನಿಂದ ಬರುತ್ತಿದ್ದ ಇನ್ನೋವಾ (ಕೆಎ03 ಎಂಎಚ್ 4334) ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ನ್ಯಾನೋ ಕಾರನ್ನು ಚಲಾಯಿಸುತ್ತಿದ್ದ ಚಾಲಕ ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ನಿವಾಸಿ ಎ.ಎಂ.ರಘು ಎಂಬವರಿಗೆ ತೀವ್ರ ಗಾಯಗಳಾಗಿದ್ದು ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಕ್ರಮ ಕೈಗೊಂಡಿದ್ದಾರೆ.