ಕುಶಾಲನಗರ, ಜೂ. 22: ಬೈಲುಕೊಪ್ಪೆ ಟಿಬೆಟಿಯನ್ ನಿರಾಶ್ರಿತರ ಶಿಬಿರದಲ್ಲಿ ಕೊರೊನಾ ಸೋಂಕು ಪಾಸಿಟಿವ್ ಬಂದ ಪ್ರಕರಣದ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿ ವಾಸವಿದ್ದ ಪ್ರದೇಶವನ್ನು ಸೀಲ್‍ಡೌನ್ ಮಾಡಲಾಗಿದೆ. ಪ್ರಾಥಮಿಕ ಸಂಪರ್ಕ ಹೊಂದಿದ್ದ 17 ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ಪಾಸಿಟಿವ್ ವರದಿಯಾದ ಟಿಬೆಟಿಯನ್ ಯುವಕನ ಕುಟುಂಬ ಸದಸ್ಯರನ್ನು ಕೂಡ ಕ್ವಾರಂಟೈನ್‍ಗೆ ಒಳಪಡಿಸಲಾಗಿದ್ದು, ಈ ಸಂದರ್ಭ ಟಿಬೆಟಿಯನ್ ಮನೆಯ ಅಡುಗೆ ಕೆಲಸ ನಿರ್ವಹಿಸುತ್ತಿದ್ದ ದೊಡ್ಡಹರವೆ ಗ್ರಾಮದ ಇಬ್ಬರು ಮಹಿಳೆಯರನ್ನು ಪತ್ತೆಹಚ್ಚುವ ಕಾರ್ಯ ನಡೆದಿದೆ.
ಆರೋಗ್ಯ ಇಲಾಖೆ, ಪೊಲೀಸ್ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಗಳು ಈ ಮಹಿಳೆಯರ ಪತ್ತೆ ಕಾರ್ಯ ಕ್ಕಾಗಿ ಕಳೆದ ಎರಡು ದಿನಗಳಿಂದ ಶೋಧ ನಡೆಸುತ್ತಿದ್ದಾರೆ. ಇದರೊಂದಿಗೆ ಸೋಂಕಿತ ಟಿಬೆಟಿಯನ್ ಕೆಲವು ಹೊಟೇಲ್‍ಗಳಿಗೆ ಹೋಗಿರುವ ಮಾಹಿತಿಯನ್ನು ಕೂಡ ಕಲೆಹಾಕಲಾಗುತ್ತಿದೆ.