ಕೊಡ್ಲಿಪೇಟೆ, ಜೂ. 22: ಗಡಿಭಾಗ ಕೊಡ್ಲಿಪೇಟೆ ಜನರು ಕೊರೊನಾದ ಆತಂಕದಲ್ಲಿ ಜೀವನ ಸಾಗಿಸಬೇಕಾಗಿದೆ ಎಂದು ಕೊಡ್ಲಿಪೇಟೆ ವರ್ತಕರ ಸಂಘದ ಅಧ್ಯಕ್ಷ ಯತೀಶ್ ಆಗ್ರಹಿಸಿದ್ದಾರೆ. ಇಲ್ಲಿಗೆ ಅಕ್ಕಪಕ್ಕದ ಜಿಲ್ಲೆಯವರು ವ್ಯಾಪಾರ ನಡೆಸಲು ಬರುವುದರಿಂದ ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಾಗಿದೆ. ಮುಖ್ಯವಾಗಿ ಪಕ್ಕದ ಶನಿವಾರಸಂತೆಯಲ್ಲಿ ರೋಗ ಹರಡಿರುವ ವದಂತಿ ತಿಳಿದು ಇಲ್ಲಿಗೆ ಹೊರಗಿನಿಂದ ಬರುವವರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯತೆ ಸ್ಥಳೀಯ ಪೊಲೀಸ್ ಇಲಾಖೆಗೆ ಇರುತ್ತದೆ.
ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಆರೋಗ್ಯ ಇಲಾಖೆಯವರು ಹೆಚ್ಚಿನ ನಿಗಾವಹಿಸಬೇಕಾಗಿದೆ. ಇಲ್ಲಿನ ಹೊಟೇಲ್‍ಗಳು, ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರು ಅಂತರ ಕಾಪಾಡಿಕೊಳ್ಳದೆ ಇರುವುದು ಕಂಡುಬರುತ್ತಿದೆ. ಮದ್ಯಪಾನಿಗಳು, ಧೂಮಪಾನಿಗಳು ಎಲ್ಲೆಂದರಲ್ಲಿ ಅಡ್ಡಾಡುವುದು ಹೆಚ್ಚಾಗಿ ಕಂಡು ಬರುತ್ತಿದೆ. ಅಂತವರ ಬಗ್ಗೆ ಪೊಲೀಸ್ ಇಲಾಖೆಯವರು ಕಠಿಣ ಕ್ರಮ ಕೈಗೊಳ್ಳ ಬೇಕಾಗಿದೆ ಹಾಗೂ ಸಾರ್ವಜನಿಕರು, ಹೊಟೇಲ್‍ಗಳು, ವರ್ತಕರು, ಬ್ಯಾಂಕ್‍ಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಹೆಚ್ಚಿನ ನಿಗಾವಹಿಸುವಂತೆ ಸ್ಥಳೀಯ ವರ್ತಕರ ಸಂಘದ ಅಧ್ಯಕ್ಷರು ಆಗ್ರಹಿಸಿದ್ದಾರೆ.