ಪೋಲಿಸ್ ವರಿಷ್ಠಾಧಿಕಾರಿ ಡಾ. ಸುಮನ್ ಮಡಿಕೇರಿ, ಜೂ. 21: ಒಂದೂವರೆ ವರ್ಷದ ಹಿಂದೆ ಚೇರಂಬಾಣೆ ಬಳಿಯ ಪಾಕ ಭಗವತಿ ದೇವರ ಉತ್ಸವದಲ್ಲಿ ಪಾಲ್ಗೊಂಡು, ಬಳಿಕ ನಾಪತ್ತೆಯಾಗಿ ಪೊಲೀಸ್ ಇಲಾಖೆಗೆ ಸವಾಲಾಗಿರುವ ನಿವೃತ್ತ ಪೊಲೀಸ್ ನಂಜುಂಡ ಅವರ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ತನಿಖೆ ತೀವ್ರಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಖಚಿತಪಡಿಸಿದ್ದಾರೆ.ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು, ಕಾಣೆಯಾಗಿರುವ ವ್ಯಕ್ತಿಗಾಗಿ ಪೊಲೀಸರು ಎಲ್ಲ ರೀತಿ ಪ್ರಾಮಾಣಿಕ ಶೋಧ ನಡೆಸಿದ್ದು, ಆ ವ್ಯಕ್ತಿಯ ದೇಹಕ್ಕೆ ಸಂಬಂಧಿಸಿದ ಯಾವುದೇ ಕುರುಹು ಲಭಿಸದ ಹೊರತು ಯಾವುದೇ ನಿರ್ಧಾರ ಕೈಗೊಳ್ಳುವುದು ಅಸಾಧ್ಯವೆಂದು ನೆನಪಿಸಿದರು. ಹೀಗಾಗಿ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ ಎಂದು ಎಸ್ಪಿ ಮಾರ್ನುಡಿದರು.
ಜಾನಕಿ ಗೊಂದಲ: ಈ ನಡುವೆ ಪೊಲೀಸ್ ತಂಡವು ದುರ್ಗಮ ಕಾಡಿನ ನಾಲ್ಕಾರು ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ಕೈಗೊಂಡಿದ್ದ ವೇಳೆ ಪತ್ತೆಯಾಗಿದ್ದ ಉಡುಪು ಹಾಗೂ ಕೈಬಳೆಯು ನಂಜುಂಡ ಅವರದ್ದೇ ಎಂದು ಗುರುತಿಸಿರುವ ಅವರ ಪತ್ನಿ ಕಿಟ್ಟಿ ಜಾನಕಿ, ವಾರದ ಹಿಂದೆ ಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆ ನಡೆಸಿರುವ ಶೋಧ ಸಂದರ್ಭ ಕಾಡಿನಲ್ಲಿ ಪತ್ತೆಯಾಗಿರುವ ಚಪ್ಪಲಿಯ ಕುರಿತು ಗೊಂದಲದಲ್ಲಿದ್ದಾರೆ. ತಮ್ಮ ಪತಿ ‘ಬಾಟಾ’ ಕಂಪೆನಿ ಚಪ್ಪಲಿ ಧರಿಸಿದ್ದಾಗಿ ಪ್ರತಿಕ್ರಿಯಿಸಿದ್ದಾರೆ.
ಈ ನಡುವೆ ಮೇಲಿನ ಪ್ರಕರಣ ಸಂಬಂಧ ಪೊಲೀಸ್ ಠಾಣೆಗೆ ಪಾಕ ಗ್ರಾಮಸ್ಥರ ಹೆಸರಿನಲ್ಲಿ ಬೇನಾಮಿ ಪತ್ರ
(ಮೊದಲ ಪುಟದಿಂದ) ರವಾನಿಸಲಾಗಿದ್ದು, ಆ ಸುಳಿವಿನ ಮೇರೆಗೆ ತನಿಖೆ ನಡೆಯುತ್ತಿದೆ ಎಂದು ಕಾಣೆಯಾಗಿರುವ ನಂಜುಂಡ ಸಂಬಂಧಿ ಕಾಳಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸ್ವತಃ ಭಾಗಮಂಡಲ ಪೊಲೀಸ್ ಠಾಣಾಧಿಕಾರಿ ಮಹದೇವ ಅವರು, ಇತ್ತೀಚೆಗೆ ನಂಜುಂಡ ಅವರ ಮನೆಗೆ ಧಾವಿಸಿ ಕಾಡಿನಲ್ಲಿ ಪತ್ತೆಯಾಗಿರುವ ಚಪ್ಪಲಿ ಹಾಗೂ ಬೇನಾಮಿ ಪತ್ರದ ಸುಳಿವಿನ ಬಗ್ಗೆ ಸಂಬಂಧಿಕರಲ್ಲಿ ಮಾಹಿತಿ ಕಲೆ ಹಾಕಿದರೂ, ಈ ತನಕ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಾಳಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ‘ನಂಜುಂಡ ನಾಪತ್ತೆ ಪ್ರಕರಣ’ ಪೊಲೀಸ್ ಇಲಾಖೆಗೆ ತೀವ್ರ ಕಗ್ಗಂಟಾಗಿ ಪರಿಣಮಿಸಿದೆ.