ಸೋಮವಾರಪೇಟೆ, ಜೂ. 21: ಇಲ್ಲಿನ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವಾರ್ಡ್ 7ರಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಜಿಲ್ಲಾಧಿಕಾರಿ ಸಹಿತ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಪಟ್ಟಣದ ಬಹುತೇಕ ಕಡೆಗಳಲ್ಲಿ ಚರಂಡಿ, ರಸ್ತೆ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ. ವಾರ್ಡ್ 7ರ ರೇಂಜರ್ಸ್ ಬ್ಲಾಕ್‍ನ ವಲಯ ಅರಣ್ಯಾಧಿಕಾರಿ ವಸತಿ ಗೃಹದ ಹಿಂಭಾಗದಲ್ಲಿ ಎಸ್.ಎಫ್.ಸಿ. ಅನುದಾನದಡಿ ರೂ. 5ಲಕ್ಷ ವೆಚ್ಚದಲ್ಲಿ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚರಂಡಿ ಕಾಮಗಾರಿಗೆ ಸಮರ್ಪಕ ಸಾಮಗ್ರಿಗಳನ್ನು ಬಳಸಿಲ್ಲ. ಫ್ಲೋರಿಂಗ್ ಸರಿಯಾಗಿ ಮಾಡದೆ ಇರುವದರಿಂದ ನೀರು ಸರಿಯಾಗಿ ಹರಿಯಲು ಸಾಧ್ಯವಿಲ್ಲ. ಚರಂಡಿ ಕಳಪೆ ಮಾಡಿರುವದರಿಂದ ಗುಣಮಟ್ಟ ಪರಿಶೀಲಿಸದೇ ಬಿಲ್ ಪಾವತಿಸಬಾರದು ಮತ್ತು ಗುತ್ತಿಗೆ ಪಡೆದಿರುವ ಹೆಚ್.ಡಿ.ಕೋಟೆಯ ಗುತ್ತಿಗೆದಾರರ ಮೇಲೆ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿ,ಪಟ್ಟಣ ಪಂಚಾಯ್ತಿಯ ಆಡಳಿತಾಧಿಕಾರಿಗಳಾದ ತಹಶೀಲ್ದಾರ್ ಸೇರಿದಂತೆ ಮುಖ್ಯಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.