ಗೋಣಿಕೊಪ್ಪ ವರದಿ, ಜೂ. 20 : ಆಹಾರ ಅರಸಿ, ತೋಟಕ್ಕೆ ನುಗ್ಗುತ್ತಿದ್ದ ಕಾಡಾನೆಗಳು ಹಣ್ಣು ತಿನ್ನಲು ಅಂಗಡಿಗಳಿಗೆ ನುಗ್ಗುವ ದಾರಿ ಹುಡುಕಿಕೊಂಡಿವೆ. ಅದೂ ವಾಹನ ಜನ ಸಂಚಾರ ಇರುವ ಮುಖ್ಯ ರಸ್ತೆಯಲ್ಲಿ...!

ಗೋಣಿಕೊಪ್ಪ-ಪೊನ್ನಂಪೇಟೆ ರಸ್ತೆಯ ಅರ್ವತೋಕ್ಲು ಎಂಬಲ್ಲಿ (ಕಾಡ್ಲಯ್ಯಪ್ಪ ದೇವಾಲಯ ರಸ್ತೆ ಜಂಕ್ಷನ್) ಹಾರುನ್ ಎಂಬವರಿಗೆ ಸೇರಿದ ಅಂಗಡಿಗೆ ಕಳೆದ 3 ದಿನಗಳಿಂದ ಕಾಡಾನೆಗಳು ದಾಳಿ ಇಡುತ್ತಿವೆ. ಅಂಗಡಿಯಲ್ಲಿನ ಮಾವು, ಆಪಲ್ ತಿಂದು ಹೊಟ್ಟೆ ತುಂಬಿಸಿ ಕೊಳ್ಳುತ್ತಿವೆ. ಇದರಿಂದ ವ್ಯಾಪಾರಿ ಸೇರಿದಂತೆ ಸ್ಥಳಿಯರು ಆಶ್ಚರ್ಯಗೊಂಡಿದ್ದಾರೆ.

ಶುಕ್ರವಾರ ರಾತ್ರಿ ಮತ್ತೆ ದಾಳಿ ಇಟ್ಟಿರುವ ಆನೆಗಳು ಅಂಗಡಿ ಹೊರ ಭಾಗದಲ್ಲಿ ಪ್ಲಾಸ್ಟಿಕ್ ಒಳಗೆ ಕಾಯ್ದಿರಿಸಿದ್ದ ಹಣ್ಣುಗಳನ್ನು ತಿಂದಿವೆ. ಸಮೀಪದ ಗೋದಾಮಿನ ಹೊರಗೆ ಎರಡು ಗೂಡ್ಸ್ ವಾಹನದಲ್ಲಿ ಮಾವಿನ ಹಣ್ಣು ಶೇಖರಿಸಿಟ್ಟಿದ್ದರು. ಇದನ್ನು ಸಂಪೂರ್ಣ ತಿಂದಿವೆ. ಸುಮಾರು 400 ಕೆ. ಜಿ. ಮಾವಿನ ಹಣ್ಣು ಇತ್ತು. 50 ಸಾವಿರಕ್ಕೂ ಅಧಿಕ ನಷ್ಟವಾಗಿದೆ ಎಂದು ಮಾಲೀಕ ಹಾರುನ್ ತಿಳಿಸಿದ್ದಾರೆ.

ಸಮೀಪವಿರುವ ಕಾಫಿ ತೋಟದಲ್ಲಿ ಸೇರಿಕೊಂಡಿರುವ ಕಾಡಾನೆಗಳ ಹಿಂಡು ಸುಲಭವಾಗಿ ಸಿಗುವ ಆಹಾರಕ್ಕೆ ಲಗ್ಗೆ ಇಡುತ್ತಿವೆ. ರಾತ್ರಿ ಅಂಗಡಿ ಮುಚ್ಚಿದ ನಂತರ ಬಂದು ಹಣ್ಣು ತಿನ್ನುತ್ತವೆ. ಬೆಳಗ್ಗೆ ಸಾಕಷ್ಟು ವಾಹನಗಳು ಓಡಾಡುತ್ತವೆ. ರಾತ್ರಿ ಆನೆ ಸಂಚಾರದಿಂದ ಹಣ್ಣು ಗಳನ್ನು ರಕ್ಷಿಸಿಕೊಳ್ಳಲು ಪರದಾಡು ವಂತಾಗಿದೆ. ಅಂಗಡಿಯ ಸಮೀಪವಿ ರುವ ತೆಂಗಿನ ಗಿಡವನ್ನು ಕೂಡ ನಾಶ ಮಾಡಿದೆ. ಪೊನ್ನಂಪೇಟೆ ಅರಣ್ಯ ಇಲಾಖೆಗೆ ದೂರು ನೀಡಲು ನಿರ್ಧರಿಸಿದ್ದಾರೆ. -ಸುದ್ದಿಪುತ್ರ.