ವೀರಾಜಪೇಟೆ, ಜೂ. 19: ಕೊಡಗು ಕೇರಳ ಗಡಿ ಪ್ರದೇಶವಾದ ಮಾಕುಟ್ಟದ ರಬ್ಬರ್ ಎಸ್ಟೇಟ್‍ಗೆ ಹೋಗಲು ವೀರಾಜಪೇಟೆಯಿಂದ ಮಾಕುಟ್ಟಕ್ಕೆ ಬಂದಿದ್ದ ಜೀಪನ್ನು ಕಂದಾಯ ಅಧಿಕಾರಿಗಳು ವಾಪಸು ಕಳಿಸಿದ್ದಾರೆ.

ಕೊರೊನಾ ವೈರಸ್ ಭೀತಿಯ ಲಾಕ್‍ಡೌನ್‍ನ ನಿರ್ಬಂಧದ ಹಿನ್ನೆಲೆಯಲ್ಲಿ ಕಳೆದ 66 ದಿನಗಳಿಂದ ಮಾಕುಟ್ಟ ಹಾಗೂ ಕುಟ್ಟ ಎರಡು ಚೆಕ್‍ಪೋಸ್ಟ್‍ಗಳನ್ನು ರಸ್ತೆಗೆ ಅಡ್ಡಲಾಗಿ ಮಣ್ಣು ಹಾಕಿ ಚೆಕ್‍ಪೋಸ್ಟ್‍ಗೂ ಬೀಗ ಜಡಿದು ಬಂದ್ ಮಾಡಲಾಗಿದೆ. ಈ ಗೇಟ್‍ನಲ್ಲಿ ನುಸುಳಿ ಹೋಗದಂತೆ ಸಿ.ಸಿ.ಕ್ಯಾಮೆರಾ ಕಣ್ಗಾವಲಿದ್ದು ಜೊತೆಯಲ್ಲಿಯೇ ಕಂದಾಯ ಸಿಬ್ಬಂದಿಗಳು, ಪೊಲೀಸರು ಠಿಕಾಣಿ ಹೂಡಿದ್ದಾರೆ. ಮಾಕುಟ್ಟದಲ್ಲಿರುವ ರಬ್ಬರ್ ತೋಟದಲ್ಲಿರುವ ವಾಹನ ದುರಸ್ತಿಗೆ ಮೆಕ್ಯಾನಿಕ್‍ನೊಂದಿಗೆ ಜೀಪು ರಬ್ಬರ್ ತೋಟಕ್ಕೆ ತೆರಳುತ್ತಿತ್ತೆಂದು ಗೊತ್ತಾಗಿದೆ.