ಸೋಮವಾರಪೇಟೆ, ಜೂ.20: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ-ಎಡದಂಟೆ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು, ಕಾಫಿ ತೋಟದಲ್ಲಿದ್ದ ಕೃಷಿ ಫಸಲು ನಷ್ಟಗೊಂಡಿದೆ.
ಈ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳ ಉಪಟಳ ಕಂಡುಬರುತ್ತಿದ್ದು, ನಿನ್ನೆ ರಾತ್ರಿ ಎಡದಂಟೆ ಗ್ರಾಮದ ಬಿ.ಎಂ. ಲವ ಅವರಿಗೆ ಸೇರಿದ ಕಾಫಿ ತೋಟಕ್ಕೆ ಲಗ್ಗೆಯಿಟ್ಟ ಒಂಟಿ ಸಲಗವೊಂದು ತೋಟದೊಳಗೆ ಮನಸೋಯಿಚ್ಚೆ ಸಂಚರಿಸಿದ್ದು, ಕಾಫಿ ಗಿಡಗಳನ್ನು ಕಿತ್ತೆಸೆದಿದ್ದರೆ, ಬಾಳೆ ಫಸಲನ್ನು ಸಂಪೂರ್ಣವಾಗಿ ನಷ್ಟಗೊಳಿಸಿದೆ.
ಈ ಭಾಗದಲ್ಲಿ ನಾಲ್ಕೈದು ಕಾಡಾನೆಗಳು ಸಂಚರಿಸುತ್ತಿವೆ. ಆಗಾಗ್ಗೆ ಕಾಫಿ ತೋಟಕ್ಕೆ ಧಾಳಿ ನಡೆಸಿ, ಕೃಷಿ ಫಸಲನ್ನು ನಷ್ಟಗೊಳಿಸುತ್ತಿವೆ. ಕಾಡಾನೆಗಳ ಉಪಟಳದಿಂದ ಮುಕ್ತಿ ನೀಡುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನ ಶೂನ್ಯವಾಗಿದೆ. ಕೃಷಿಕರಿಗೆ ತೊಂದರೆ ನೀಡುತ್ತಿರುವ ಕಾಡಾನೆಗಳನ್ನು ಬಿಸಿಲೆ ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಬೇಕು. ಕಾಫಿ ಹಾಗೂ ಬಾಳೆ ಫಸಲಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಾಡಾನೆಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದರೆ ಒಂದಿಬ್ಬರು ಗಾರ್ಡ್ಗಳು ಬಂದು ಪಟಾಕಿ ಸಿಡಿಸುವದನ್ನು ಬಿಟ್ಟರೆ ಶಾಶ್ವತ ಪರಿಹಾರ ಇದುವರೆಗೂ ಸಿಕ್ಕಿಲ್ಲ. ಕಾಡಾನೆಗಳ ಹಾವಳಿಯಿಂದ ಈ ಭಾಗದ ರೈತರು ನಿರಂತರವಾಗಿ ಕೃಷಿ ಫಸಲು ನಷ್ಟ ಅನುಭವಿಸಬೇಕಾಗಿದೆ. ಆರ್ಆರ್ಟಿ ತಂಡದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಕಾಡಾನೆಗಳನ್ನು ಬಿಸಿಲೆ ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಎಡದಂಟೆ ಲವ ಅವರು ಒತ್ತಾಯಿಸಿದ್ದಾರೆ.
ಹಾಸನ, ದಕ್ಷಿಣಕನ್ನಡ, ಕೊಡಗು ಜಿಲ್ಲೆಗಳ ಗಡಿಯನ್ನು ಹೊಂದಿಕೊಂಡಿರುವ ಈ ಭಾಗದಲ್ಲಿನ ಕಾಡಾನೆ ಹಾವಳಿ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಜನವಸತಿ ಪ್ರದೇಶದಲ್ಲಿಯೇ ಕಾಡಾನೆಗಳು ಸಂಚರಿಸುತ್ತಿದ್ದು, ಜನತೆ ಭಯಾತಂಕದಿಂದ ದಿನದೂಡುವಂತಾಗಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಇಲಾಖಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.