ಯೋಗದಿಂದ ನಿರೋಗ
ಜೂನ್ ತಿಂಗಳೆಂದರೆ ಹಾಗೇ... ಹಲವು ವಿಶೇಷಗಳ ಮಾಸ. ಅಂತೇಯೇ ಇಂದು ಜೂನ್ 21 ವಿಶ್ವ ಯೋಗ ದಿನ. ‘ಯೋಗ’ ಅಂದ್ರೆ ಕೂಡಿಸುವಿಕೆ ಅಥವಾ ಸೇರಿಸುವಿಕೆ. ಮಾನಸಿಕ ಮತ್ತು ದೈಹಿಕ ಆರೋಗ್ಯಗಳ ಕ್ರೋಡೀಕರಣ ಅಂತ ಕೂಡ ಹೇಳಬಹುದು. ಯೋಗವೆಂದರೆ ಅದೃಷ್ಟ ಅಂತ ಕೂಡ ಅರ್ಥ. ಯೋಗದ ಮೂಲಕ ಮಾನಸಿಕ ಹಾಗೂ ದೈಹಿಕ ಆರೋಗ್ಯಗಳನ್ನು ಹೆಚ್ಚಿಸಿಕೊಂಡು ಅದೃಷ್ಟವಂತರಾಗಬಹುದು ಎಂದು ಕೂಡ ಅರ್ಥೈಸಬಹುದು.
ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಯೋಗಕ್ಕೆ ತುಂಬಾನೇ ಮಹತ್ವವಿದೆ. ನಮ್ಮದು ತಪಸ್ವಿಗಳ ನಾಡು, ಋಷಿ-ಮುನಿಗಳು ನೂರಾರು ವರ್ಷ ಆರೋಗ್ಯವಂತರಾಗಿ, ಸದೃಢರಾಗಿ, ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ಜಪ-ತಪಗಳನ್ನು ಮಾಡಿಕೊಂಡು ಬದುಕುತ್ತಿದ್ದದ್ದು ಕೂಡ ಯೋಗಸಿದ್ಧಿಯ ಮೂಲಕವೇ ಎಂಬುದು ಜನಜನಿತ.
ಜೂನ್ 21 ರಂದೇ ಯೋಗದಿನವನ್ನಾಗಿ ಏಕೆ ಆಚರಿಸುತ್ತಾರೆ ಅಂದರೆ ಈ ದಿನದ ಹಗಲು ಅತಿ ಉದ್ದದ ದಿನ ಎಂಬ ಕಾರಣಕ್ಕಾಗಿ. ಹಾಗಾಗಿ ಯೋಗದಿಂದ ಕೂಡ ಮನುಷ್ಯನ ಆಯಸ್ಸು ಹೆಚ್ಚಾಗುತ್ತೆ ಅನ್ನೋ ಕಾರಣಕ್ಕೆ. ಇಂದು ಜನರ ಜೀವನಕ್ರಮ, ಆಹಾರ ಪದ್ಧತಿ ಎಲ್ಲವೂ ಬದಲಾಗಿದೆ. ಹಿಂದೆ ಸಿಗುತ್ತಿದ್ದ ಪೌಷ್ಟಿಕ ಹಾಗೂ ಶುದ್ಧ ಆಹಾರ, ಗಾಳಿ, ನೀರು ಯಾವುದು ನಮಗೆ ದೊರೆಯುತ್ತಿಲ್ಲ. ಹೀಗಾಗಿ ನಿರಂತರ ದುಡಿಮೆಯ ಬದುಕಿಗೆ ಚೈತನ್ಯವನ್ನು ತುಂಬಿ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು, ಸುಖಮಯವನ್ನಾಗಿಸಿಕೊಳ್ಳಲು ಯೋಗ ಸಹಕಾರಿಯಾಗಿದೆ. ಹೀಗಾಗಿ ಯೋಗ ಎಂಬುದು ಪ್ರತಿಯೊಬ್ಬರ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಹಕಾರಿಯಾಗಿದೆ.
ಯೋಗ ದಿನದ ಇತಿಹಾಸ: 2014 ಡಿಸೆಂಬರ್ 11 ರಂದು ಸಂಯುಕ್ತ ರಾಷ್ಟ್ರಗಳ 177 ಸದಸ್ಯ ದೇಶಗಳಿಂದಲೂ ‘ಅಂತರರಾಷ್ಟ್ರೀಯ ಯೋಗ ದಿನ’ದ ಆಚರಣೆಯ ಪ್ರಸ್ತಾವಕ್ಕೆ ಅಂಗೀಕಾರ ದೊರೆಯಿತು. ಪ್ರಧಾನ ಮಂತ್ರಿ ಮೋದಿಯವರ ಈ ಪ್ರಸ್ತಾವನೆಗೆ 90 ದಿನಗಳಲ್ಲಿ ಬಹುಮತ ಸಿಕ್ಕಿತು. ಇದು ಸಂಯುಕ್ತ ರಾಷ್ಟ್ರ ಸಂಘಗಳಲ್ಲಿನ ಪ್ರಸ್ತಾವನೆಗಳ ಅಂಗೀಕಾರಕ್ಕೆ ತೆಗೆದುಕೊಂಡ ಅತ್ಯಂತ ಕಡಿಮೆ ಅವಧಿ ಎಂದೂ ಕೂಡ ದಾಖಲೆ ಬರೆಯಿತು. ಮಾನವನ ಬದುಕಿನಲ್ಲಿ ವ್ಯಾಯಾಮದ ಮತ್ತೊಂದು ರೂಪವಾದ ಯೋಗಕ್ಕೆ ಅತಿ ಹೆಚ್ಚಿನ ಮಹತ್ವವಿದೆ. ಮಕ್ಕಳು, ಹೆಂಗಸರು, ಗಂಡಸರೆನ್ನದೇ ಎಲ್ಲರೂ ನಿಯಮಿತವಾಗಿ ಯೋಗ ಮಾಡುವುದರಿಂದ ಹಲವಾರು ರೀತಿಯ ಲಾಭಗಳಿವೆ.
ನನ್ನಿಂದ ಸಾಧ್ಯ: ಹೌದು... ನನ್ನಿಂದ ಸಾಧ್ಯವಿಲ್ಲ ಎಂಬ ಮಾತು ತೊರೆದು ಗಟ್ಟಿಯಾಗಿ ನಿಂತರೆ ಎಲ್ಲವೂ ಸಾಧ್ಯ, ‘ಆರೋಗ್ಯವಂತ ದೇಹದಲ್ಲಿ ಆರೋಗ್ಯವಂತ ಮನಸ್ಸಿರುತ್ತದೆ ಎಂಬ ಮಾತಿದೆ’. ದೇಹ ಮತ್ತು ಮನಸ್ಸುಗಳೆರೆಡು ಲವಲವಿಕೆಯಿಂದ ಕೂಡಿರಲು ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದೆ. ಯಾರು ಪ್ರತಿನಿತ್ಯ ನಿಯಮಿತವಾಗಿ ಯೋಗ ಮಾಡುವರೋ ಅವರು ಬಹುತೇಕ ರೋಗಗಳಿಂದ ವಿಮುಕ್ತರಾಗಿರುತ್ತಾರೆ. ಶರೀರ ಸುಂದರ ಮತ್ತು ಸದೃಢವಾಗಿರುತ್ತದೆ, ಮನಸ್ಸು ಪ್ರಫುಲಿತವಾಗಿ ದಣಿವು, ಸುಸ್ತು ಕಾಣಿಸುವುದಿಲ್ಲ, ಸೋಮಾರಿತನವೂ ದೂರವಾಗುತ್ತದೆ. ರಕ್ತದ ಕೆಟ್ಟ ಅಂಶವೂ ಬೆವರಿನ ರೂಪದಲ್ಲಿ ಹೊರಬಂದು, ದೇಹದಲ್ಲಿ ಶುದ್ಧ ರಕ್ತವು ಸಂಚಾರವಾಗುತ್ತದೆ. ಹೃದಯದಗತಿಯೂ ಸರಿಯಾದ ಗತಿಯಲ್ಲಿರುತ್ತದೆ. ಹೊಟ್ಟೆಯೂ ಸರಿಯಾದ ಸಮಯಕ್ಕೆ ಹಸಿಯುತ್ತದೆ. ಜೀರ್ಣಶಕ್ತಿಯೂ ಹೆಚ್ಚುತ್ತದೆ. ಮಾಂಸಖಂಡಗಳು ದಷ್ಟಪುಷ್ಟವಾಗುತ್ತವೆ. ಇದರಿಂದ ಹೃದಯ ಹೂವಂತೆ ಹಗುರವಾಗಿ ಮೂಳೆಗಳೂ ಬಲಿಷ್ಠವಾಗುತ್ತವೆ. ಈ ಎಲ್ಲಾ ಕಾರಣಗಳಿಂದ ಯೋಗಾಭ್ಯಾಸವೂ ಮಾನವನ ಜೀವನಕ್ಕೆ ಒಂದು ವರದಾನವೆಂದೇ ಹೇಳಬಹುದು.
ದೈಹಿಕ ಪರಿಶ್ರಮಗಳಲ್ಲಿ ಹಲವಾರು ವಿಧಗಳಿರುವಂತೆ ‘ಯೋಗಾಭ್ಯಾಸ’ದಲ್ಲೂ ಹಲವಾರು ವಿಧಗಳಿವೆ. ಮಕ್ಕಳಿಗೆ ಮೈದಾನದಲ್ಲಿ ಆಟವಾಡುವುದೇ ಅತ್ಯಂತ ಹೆಚ್ಚಿನ ವ್ಯಾಯಾಮವಾಗಿದೆ, ಇದರ ಜತೆಗೆ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಆಟೋಟಗಳಿಗೆ ನೀಡುವಷ್ಟೇ ಮಹತ್ವವನ್ನುಯೋಗಕ್ಕೂ ನೀಡಲಾಗಿದೆ. ಶಾಲೆಯ ದಿನನಿತ್ಯದ ವೇಳಾಪಟ್ಟಿಯಲ್ಲಿ ಯೋಗಾಭ್ಯಾಸಕ್ಕೆಂದೇ ಕೆಲವು ಪಿರಿಯಡ್ಗಳನ್ನು ಮೀಸಲಿಡಲಾಗಿದೆ. ಪ್ರತಿ ವರ್ಷವೂ ತಾಲೂಕು, ಜಿಲ್ಲಾ ಹಂತಗಳಲ್ಲಿ ಸ್ವರ್ಧೆಗಳು ನಡೆದು ವಿಜೇತರಾದವರಿಗೆ ಬಹುಮಾನ ಪುರಸ್ಕಾರಗಳನ್ನೂ ಸಹ ನೀಡಲಾಗುತ್ತದೆ. ಒತ್ತಡದ ನಿಯಂತ್ರಣಕ್ಕೂ ಯೋಗ ಅತ್ಯುತ್ತಮ ಸಹಕಾರಿ ಹೀಗಾಗಿ ಮನೆ-ಕಚೇರಿಗಳೆಡರಲ್ಲೂ ದುಡಿಯುವ ಮಹಿಳೆಯರು, ಪುರುಷರು, ವಯೋವೃದ್ಧರು ಎಲ್ಲರೂ ಯೋಗದ ಮೂಲಕ ನಿರೋಗಿಗಳಾಗಬಹುದು. ಆಯಸ್ಸು ವೃದ್ಧಿಸಿ, ಬಹುಕಾಲ ಬದುಕಬಹುದು. ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚುತ್ತಿರುವ ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಮಂದಿ ದಿನನಿತ್ಯದ ತಮ್ಮ ಜೀವನದಲ್ಲಿ ಯೋಗ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಅಭ್ಯಾಸ ಮತ್ತೂ ಹೆಚ್ಚಾಗಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಕೂಡ ಇಂದಿದೆ.
ಕೊನೆಯ ಮಾತು: ಕೇವಲ ಯೋಗವನ್ನಷ್ಟೇ ರೂಢಿಸಿಕೊಂಡು, ಆಹಾರ, ವಿಹಾರ, ಜೀವನ ಶೈಲಿಯಲ್ಲಿ ಶಿಸ್ತನ್ನು ರೂಢಿಸಿಕೊಳ್ಳದಿದ್ದರೆ ಏನೂ ಸಾಧ್ಯವಾಗಲಾರದು. ಹೀಗಾಗಿ ಉತ್ತಮ ಹವ್ಯಾಸ ಕೂಡ ಬದುಕಿಗೆ ಸಹಕಾರಿ ಎಂಬ ಅಂಶವನ್ನು ಮನದಟ್ಟು ಮಾಡಿಕೊಂಡು ಬದುಕಬೇಕಾಗಿದೆ. ಆರೋಗ್ಯವೇ ಭಾಗ್ಯ. ಇದಕ್ಕೆ ಯೋಗ ಪೂರಕ. ಈ ನೆಲದ ಸಂಸ್ಕøತಿ ಯೋಗ ಎಲ್ಲರ ಬಾಳಿಗೆ ಹಾಸು ಹೊಕ್ಕಾಗಲಿ ಎಂದು ಹಾರೈಸೋಣ.
- ಡಿ. ಸುಜಲಾದೇವಿ, ಶನಿವಾರಸಂತೆ.