ಶನಿವಾರಸಂತೆ, ಜೂ. 20: ಭಾರದ ವಸ್ತುಗಳನ್ನು ತುಂಬಿಸಿಕೊಂಡು ಸಾರ್ವಜನಿಕ ರಸ್ತೆಯಲ್ಲಿ ಚಲಿಸುವ ವಾಹನಗಳ ಸಂಚಾರವನ್ನು ನಿಷೇಧ ಮಾಡಿದ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ (ಕೆಎ 53 ಎ 8535) ಮಾಲೀಕನಿಗೆ ಮಡಿಕೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ರೂ. 12,500 ದಂಡ ವಿಧಿಸಿರುತ್ತಾರೆ.

ತಾ. 15 ರಂದು ರಾತ್ರಿ ಶನಿವಾರಸಂತೆ ಪೊಲೀಸ್ ಠಾಣೆಯ ಪ್ರಭಾರ ಠಾಣಾಧಿಕಾರಿ ಹೆಚ್.ಎಂ. ಗೋವಿಂದ್ ಹಾಗೂ ಸಿಬ್ಬಂದಿಗಳು ಇಲಾಖಾ ಜೀಪಿನಲ್ಲಿ ಗಸ್ತಿನಲ್ಲಿರುವಾಗ ಗುಡುಗಳಲೆ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಸಿಲ್ವರ್ ಮರದ ದಿಮ್ಮಿಗಳನ್ನು ಲಾರಿಯಲ್ಲಿ ತುಂಬಿಸಿಕೊಂಡು ಹೊರ ಜಿಲ್ಲೆಗೆ ಸಾಗಾಟ ಮಾಡುತ್ತಿದ್ದಾಗ ಲಾರಿಯನ್ನು ತಡೆದು ಪರಿಶೀಲಿಸಿ ಲಾರಿಯನ್ನು ವಶಪಡಿಸಿಕೊಳ್ಳಲಾಯಿತು.

ಲಾರಿ ಮಾಲೀಕ ನೌಷದ್ ಪಾಶಾನಿಗೆ ರೂ. 12,500 ದಂಡ ವಿಧಿಸಿರುತ್ತಾರೆ. ಕಾರ್ಯಾಚರಣೆಯಲ್ಲಿ ಪ್ರಭಾರ ಠಾಣಾಧಿಕಾರಿ ಗೋವಿಂದ್, ಸಿಬ್ಬಂದಿಗಳಾದ ಚೆನ್ನಕೇಶವ, ರಘು, ಇತರರು ಪಾಲ್ಗೊಂಡಿದ್ದರು.