ಮಡಿಕೇರಿ, ಜೂ. 19 : ಕೊಡಗು ಜಿಲ್ಲಾಡಳಿತವು ಕೋವಿಡ್-19 ರ ಸಂಬಂಧ ಜಿಲ್ಲೆಯಲ್ಲಿ ತೀವ್ರ ನಿಗಾವಹಿಸಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಸ್ತುತ ಹೆಚ್ಚು ಗಂಟಲು-ಮೂಗು ದ್ರವ ಮಾದರಿಗಳನ್ನು ಸಂಗ್ರಹಿಸಿ ಮತ್ತು ಪರೀಕ್ಷಿಸುವ ಬಗ್ಗೆ ಗಮನ ನೀಡಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಗೆ 8303 ರಂತೆ ಗಂಟಲು-ಮೂಗು ದ್ರವ ಮಾದರಿಗಳನ್ನು ಪರೀಕ್ಷಿಸಲಾಗಿದೆ. ತಾ. 18 ರಂದು ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಮತ್ತು ಗೋಣಿಕೊಪ್ಪಗಳಲ್ಲಿ ಒಟ್ಟು 5 ಸಂಚಾರಿ ಗಂಟಲು-ಮೂಗು ದ್ರವ ಮಾದರಿ ಸಂಗ್ರಹಣಾ ಘಟಕಗಳಿಗೆ ಚಾಲನೆ ನೀಡಲಾಗಿದೆ. ಈ ಸಂಚಾರಿ ಗಂಟಲು-ಮೂಗು ದ್ರವ ಮಾದರಿ ಸಂಗ್ರಹಣಾ ಘಟಕಗಳು ಖಾಸಗಿ ಕ್ಲಿನಿಕ್‍ಗಳಿಂದ ಬರುವ ಕರೆಗಳಿಗೆ ಸ್ಪಂದಿಸಿ, ಕ್ಲಿನಿಕ್‍ಗಳಿಗೆ ತೆರಳಿ ಗಂಟಲು-ಮೂಗು ದ್ರವ ಮಾದರಿಗಳನ್ನು ಸಂಗ್ರಹಿಸುತ್ತವೆ. ಮಾದರಿಗಳ ಸಂಗ್ರಹಣೆಯ ನಂತರ ವ್ಯಕ್ತಿಯನ್ನು ಮನೆಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.