ಮಡಿಕೇರಿ, ಜೂ. 19: ಆಯುಷ್ ಮಂತ್ರಾಯಲಯವು ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಮಹಾಮಾರಿ ಕೊರೊನಾ ಪಿಡುಗಿನಿಂದ ಸಾಮಾಜಿಕ ಅಂತರವನ್ನು ಕಾಪಾಡಲು ಕಷ್ಟವಾಗುವುದರಿಂದ ಡಿಜಿಟಲ್ ಮೀಡಿಯಾದಲ್ಲಿ ಮನೆಯಲ್ಲಿಯೇ ಆಚರಿಸಬೇಕಾಗಿ ಕೋರಿದೆ. ಈ ವರ್ಷದ ಘೋಷವಾಕ್ಯವು “ಯೋಗ ಎಟ್ ಹೋಂ ಅಂಡ್ ಯೋಗ ವಿತ್ ಫ್ಯಾಮಿಲಿ”ಆಗಿರುತ್ತದೆ. ಸಾರ್ವಜನಿಕರು ಮನೆಯಲ್ಲಿ ಯೋಗ ದಿನಾಚರಣೆಯನ್ನು ತಾ. 21 ರಂದು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಆಚರಿಸಲು ಕೋರಿದೆ. ಸಾರ್ವಜನಿಕರು ಕೂಡಲೇ ಯೋಗದ ಅಭ್ಯಾಸವನ್ನು ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಕೋವಿಡ್-19 ರೋಗವನ್ನು ಬಾರದಂತೆ ತಡೆಯಲು ಕೂಡಾ ಸತತ ಅಭ್ಯಾಸವನ್ನು ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುಷ್ ಇಲಾಖೆಯು ಸೂಚನೆ ನೀಡಿದೆ.
ಹಿತವಾದ ಆಹಾರವನ್ನು ಸುಲಭವಾಗಿ ಜೀರ್ಣವಾಗುವಂತೆ ಮಿತವಾಗಿ ಋತುವಿಗನುಸಾರ ಸಿಗುವ ಎಲ್ಲಾ ಹಣ್ಣುಗಳನ್ನು ಸೇವಿಸುತ್ತಾ, ಬಿಸಿಯಾದ ನೀರು ಹಾಗೂ ಆಹಾರವನ್ನು ಸೇವಿಸುವುದು ಪ್ರಾಮುಖ್ಯವಾಗಿದೆ. ಯೋಗವು 45 ನಿಮಿಷಗಳ ಅಭ್ಯಾಸವಾಗಿದ್ದು, ಯೋಗದ ಪ್ರಾರಂಭದಲ್ಲಿ 2 ನಿಮಿಷ ಪ್ರಾರ್ಥನೆಯೊಂದಿಗೆ ಪ್ರಾರಂಭಿಸುವುದು. ಪ್ರಾರ್ಥನೆ: ಸಂಗಚದ್ವಂ, ಸಂವದದ್ವಂ, ಸಂವೋ ಮಾನಸಿ ಜನತಂ, ದೇವಭಾಗಂ ಯಥಾಪೂರ್ವೇ, ಸಂಜನಾನನ ಉಪಾಸತೆ.
ಚಲನಾ ಕ್ರಿಯೆ: 4 ನಿಮಿಷ ಕುತ್ತಿಗೆ:- ಮುಂದೆ-ಹಿಂದೆ, ಕುತ್ತಿಗೆ:- ಬಲಕ್ಕೆ-ಎಡಕ್ಕೆ, ಕುತ್ತಿಗೆ ಪಕ್ಕಕ್ಕೆ ತಿರುಗಿಸುವುದು. ಕುತ್ತಿಗೆಯನ್ನು ವೃತ್ತಾಕಾರವಾಗಿ ತಿರುಗಿಸುವುದು. ಭುಜದ ಅಭ್ಯಾಸ: ಕೈಯನ್ನು ನೇರವಾಗಿ ಮೇಲೆತ್ತುವುದು. ಕೈಯನ್ನು ಭುಜದ ಸಮನಾಂತರವಾಗಿ ನೀಡುವುದು. ಎರಡು ಕೈಗಳನ್ನು ಸಮನಾಂತರದಿಂದ ಕುತ್ತಿಗೆಯ ಹತ್ತಿರ ತರುವುದು. ಅಲ್ಲಿಂದ ಕೈಯನ್ನು ಮುಂದಕ್ಕೆ ತರವುದು. ಅದೇ ರೀತಿ ಕೈಯನ್ನು ಕುತ್ತಿಗೆಯ ಹಿಂದಕ್ಕೆ ತರುವುದು. ಸೊಂಟದ ಅಭ್ಯಾಸ: ಭುಜದ ಸಮನಾಂತರ ಕೈಗಳನ್ನು ಎತ್ತಿ ಕಾಲುಗಳನ್ನು ಒಂದು ಹೆಜ್ಚೆ ಅಗಲಿಸಿ ಎಡಕ್ಕೆ ಬಲಕ್ಕೆ ತಿರುಗುವುದು. ಮಂಡಿಗಳಿಗೆ: ಹಸ್ತಗಳನ್ನು ಮುಂದೆ ಚಾಚಿ-ಕಲ್ಪನೆಯ ಕುರ್ಚಿಯಲ್ಲಿ ಕುಳಿತುಕೊಳ್ಳುವುದು. ಆಸನಗಳು: 23 ನಿಮಿಷ: ತಾಡಾಸನ, ವೃಕ್ಷಾಸನ, ಪಾದಹಸ್ತಾಸನ, ತ್ರಿಕೋನಾಸನ, ಭದ್ರಾಸನ, ವಜ್ರಾಸನ, ಅರ್ಧ ಉಷ್ಟ್ರಾಸನ, ಉಷ್ಟ್ರಾಸನ, ಶಶಾಂಕಾಸನ, ಉತ್ತಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಭುಜಂಗಾಸನ-1, ಭುಜಂಗಾಸನ-2, ಶಲಭಾಸನ, ಸೇತುಬಂಧಾಸನ, ಉತ್ತಾನ ಪಾದಾಸನ, ಅರ್ಧ ಹಲಾಸನ, ಪವನಮುಕ್ತಾಸನ, ಶವಾಸನ, ಪ್ರಾಣಾಯಾಮ: 6 ನಿಮಿಷ, ಕಪಾಲ ಭಾತಿ, ನಾಡಿಶೋಧನ ಪ್ರಾಣಾಯಾಮ, ಶೀಥಲ ಪ್ರಾಣಾಯಾಮ (ನಾಲಿಗೆಯನ್ನು ಸುರುಳಿ ಸುತ್ತುವುದು), ಭ್ರಾಮರಿ ಪ್ರಾಣಾಯಾಮ (ಹಸ್ತದ ಬೆರಳುಗಳು ಮುಖದ ಮೇಲೆ), ಧ್ಯಾನ- ಪದ್ಮಾಸನದಲ್ಲಿ ಕುಳಿತು 5 ನಿಮಿಷ. ಯೋಗದಿಂದ ಶಾರೀರದ ಅಂಗಾಂಗಗಳು ದೃಢತೆಯನ್ನು ಹೊಂದುವುದಲ್ಲದೇ, ಪರಿಪೂರ್ಣ ರಕ್ತ ಸಂಚಲನವು ಎಲ್ಲಾ ಅಂಗಾಂಗಳಿಗೆ ಉಂಟಾಗಿ ತನ್ನ ಕರ್ತವ್ಯವನ್ನು ಸ್ವಾಸ್ಥ್ಯಗೊಳಿಸುತ್ತದೆ. ಮಾನಸಿಕ ಏಕಾಗ್ರತೆ ಉಂಟಾಗಿ ಚಂಚಲತೆಯು ದೂರವಾಗುತ್ತದೆ. ರೋಗ ಬಾರದಂತೆ ತಡೆಯುವ ಶಕ್ತಿಯು ಶರೀರಕ್ಕೆ ಬರುತ್ತದೆ. ಇದರಿಂದ ಶ್ವಾಸಕೋಶದ ತೊಂದರೆಗಳು, ನರ ದೌರ್ಬಲ್ಯದಂತಹ ಅನೇಕ ರೋಗಗಳು ದೂರವಾಗುತ್ತವೆ. ಸಾರ್ವಜನಿಕರು ದೈನಂದಿನ ಚಟುವಟಿಕೆಗಳಲ್ಲಿ ಬೆಳಿಗ್ಗೆ ಸೂರ್ಯೋದಕ್ಕೆ ಮುಂಚೆ ಯೋಗವನ್ನು ಅಳವಡಿಸಿಕೊಳ್ಳುವುದು ತುಂಬಾ ಒಳ್ಳೆಯದಾಗಿರುತ್ತದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ ಅವರು ತಿಳಿಸಿದ್ದಾರೆ.