ಗೋಣಿಕೊಪ್ಪಲು, ಜೂ. 20: ನಡು ರಾತ್ರಿಯ ವೇಳೆ ವಿದ್ಯುತ್ ಶಾರ್ಟ್ ಸೆಕ್ರ್ಯೂಟ್ ಆದ ಹಿನ್ನೆಲೆಯಲ್ಲಿ ಅಂಗಡಿ ಮಳಿಗೆಯಲ್ಲಿದ್ದ ಸಾಮಾನು, ಸರಂಜಾಮುಗಳಿಗೆ ಬೆಂಕಿ ತಗುಲಿದ ಪರಿಣಾಮ ಅಪಾರ ನಷ್ಟ ಸಂಭವಿಸಿದ ಘಟನೆ ತಿತಿಮತಿ ಗ್ರಾಮ ಪಂಚಾಯ್ತಿಯ ಮರಪಾಲ ಗ್ರಾಮದಲ್ಲಿ ನಡೆದಿದೆ.ಮರಪಾಲ ಗ್ರಾಮದ ಸಿ.ಜೆ.ಜೋಶ್ ಎಂಬವರ ಅಂಗಡಿ ಮಳಿಗೆಗೆ ಶುಕ್ರವಾರ ರಾತ್ರಿ 11.30ಕ್ಕೆ ವಿದ್ಯುತ್ ಶಾರ್ಟ್ ಸೆಕ್ರ್ಯೂಟ್ ಆಗಿದ್ದು, ಮಳಿಗೆಯಲ್ಲಿದ್ದ 2 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ರಾತ್ರಿ ವೇಳೆಯಲ್ಲಿ ಮನೆಯವರು ಮಲಗಿದ್ದ ಸಂದರ್ಭ ಭಾರಿ ಶಬ್ದದೊಂದಿಗೆ ಈ ಅಗ್ನಿ ದುರಂತ ನಡೆÀದಿದ್ದು, ಮನೆಯವರು ಗಾಬರಿಗೊಂಡು ಎದ್ದು ನೋಡಿದ ಸಂದರ್ಭ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ನಂದಿಸುವ ಕೆಲಸ ಮಾಡಿದರಾದರೂ ಪ್ರಯೋಜನ ವಾಗಲಿಲ್ಲ. ಕೂಡಲೇ ಅಗ್ನಿ ಶಾಮಕ ದಳಕ್ಕೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿ ಮುಂದಾಗ ಬಹುದಾದ ಭಾರಿ ದುರಂತವನ್ನು ತಪ್ಪಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಯು ಮಳಿಗೆಯ ಎಲ್ಲಾ ಭಾಗಕ್ಕೂ ಆವರಿಸಿ, ಹೆÀಂಚುಗಳು ಸಿಡಿದು ಹೋಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ.

(ಮೊದಲ ಪುಟದಿಂದ) ಮುಂಜಾನೆ ಸುದ್ದಿ ತಿಳಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಮಾಯಮುಡಿ ಅಧ್ಯಕ್ಷರಾದ ಪುಚ್ಚಿಮಾಡ ರಾಯ್ ಬಿದ್ದಪ್ಪ ರೈತ ಮುಖಂಡರಾದ ಚೆಕ್ಕೆರ ಕಿಶು, ಸಿ.ಜೆ. ವಿಲ್ಸನ್, ಚೆಪ್ಪುಡೀರ ರೋಷನ್, ಚೆಪ್ಪುಡೀರ ಕಾರ್ಯಪ್ಪ, ಹಾಗೂ ಸಿ.ಜೆ. ತಂಗಚ್ಚ ಸ್ಥಳಕ್ಕೆ ತೆರಳಿ ಗೋಣಿಕೊಪ್ಪಲುವಿನ ಚೆಸ್ಕಾಂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದು, ನಂತರ ಮಹಜರು ನಡೆಸಿದ್ದಾರೆ. ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಅವರು ಮನವಿ ಮಾಡಿದ್ದಾರೆ.

ತಿತಿಮತಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷ ಶಿವು ಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪಂಕಜ, ಗ್ರಾಮ ಪಂಚಾಯ್ತಿ ಸದಸ್ಯರಾದ ಚುಬ್ರು, ಪಿಡಿಒ ಮಮತ, ಕಾರ್ಯದರ್ಶಿ ಎಸ್.ಪಿ. ಗಿರೀಶ್ ಕುಮಾರ್,ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿ ದುರಂತ ಸಂಭವಿಸಿದ ಸ್ಥಳಕ್ಕೆ ಮುಂಜಾನೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಗೋಣಿಕೊಪ್ಪ ಚೆಸ್ಕಾಂ ಇಂಜಿನಿಯರ್ ಕೃಷ್ಣ ಕುಮಾರ್ ಈ ಬಗ್ಗೆ ಉನ್ನತ ಅಧಿಕಾರಿಗಳಿಗೆ ವರದಿ ನೀಡುವುದಾಗಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.

-ಹೆಚ್.ಕೆ.ಜಗದೀಶ್