ಮಡಿಕೇರಿ, ಜೂ. 20: ರಾಜ್ಯ ಸರಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿರುವುದನ್ನು ವಿರೋಧಿಸಿ ರೈತ ಸಂಘ-ಹಸಿರು ಸೇನೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.ಮಾನವ ಸರಪಳಿ ರಚಿಸಿ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ದಕ್ಷಿಣ ಭಾರತಕ್ಕೆ ಪ್ರಮುಖ ಜಲಮೂಲವಾಗಿರುವ ಕೊಡಗು ಜಿಲ್ಲೆಗೆ ಇಂತಹ ಕಾಯ್ದೆಯಿಂದ ಧಕ್ಕೆಯಾಗಲಿದೆ. ಭೂಸುಧಾರಣೆ ಕಾಯ್ದೆ ತಿದ್ದುಪಡಿಯಿಂದಾಗಿ ಹೆಚ್ಚು ಆದಾಯಕ್ಕೆ ಅನುಗುಣವಾಗಿ ಭೂಮಿ ದುರ್ಬಳಕೆ ಮಾಡುವವರಿಗೆ ಹಾಗೂ ಕೈಗಾರಿಕೋದ್ಯಮಗಳಿಗೆ ಕೃಷಿ ಭೂಮಿಯನ್ನು ಕಬಳಿಸಲು ಅನುಕೂಲವಾಗಲಿದೆ ಎಂದು ಆರೋಪಿಸಿದರಲ್ಲದೇ ಈ ಕಾಯ್ದೆ ತಿದ್ದುಪಡಿಯನ್ನು ಜಾರಿಗೆ ತರುವುದಾದರೆ ಕೊಡಗು ಜಿಲ್ಲೆಯನ್ನು ಹೊರತುಪಡಿಸಿ ಜಾರಿಗೆ ತರಲಿ ಎಂದು ಆಗ್ರಹಿಸಿದರು.ಕಾಯ್ದೆ ತಿದ್ದುಪಡಿಯಿಂದ ಸಣ್ಣ ರೈತಾಪಿಗಳ ಒಕ್ಕಲುತನವನ್ನು ರಕ್ಷಿಸುವ ಹಾಗೂ ಸಣ್ಣಪುಟ್ಟ ಹಿಡುವಳಿದಾರರ ಅಸಹಾಯಕತೆಯನ್ನು ಹಣ ಉಳ್ಳವರು, ಕೈಗಾರಿಕೋದ್ಯಮಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸ್ನೇಹ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.(ಮೊದಲ ಪುಟದಿಂದ) ಮಾತಿನ ಚಕಮಕಿ: ನಿನ್ನೆದಿನ ಸುದ್ದಿಗೋಷ್ಠಿಯಲ್ಲಿ ಪ್ರತಿಭಟನೆ ವೇಳೆ ಹೆದ್ದಾರಿ ತಡೆ ಮಾಡುವುದಾಗಿ ಚಿಮ್ಮಂಗಡ ಗಣೇಶ್ ಹೇಳಿಕೆ ನೀಡಿದ್ದರು. ಅದರಂತೆ ಇಂದು ಜಿ.ಟಿ. ವೃತ್ತದಲ್ಲಿ ಹೆದ್ದಾರಿ ತಡೆಗೆ ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ.
ಈ ಬಗ್ಗೆ ಪ್ರತಿಭಟನಾಕಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಮಡಿಕೇರಿ ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಪ್ರತಿಭಟನೆಗೆ ಮಾನವ ಸರಪಳಿ ರಚನೆಗೆ ನಮ್ಮ ಅಡ್ಡಿ ಇಲ್ಲ. ಆದರೆ ಹೆದ್ದಾರಿ ತಡೆಯಿಂದ ಜನತೆಗೆ ತೊಂದರೆಯಾಗಲಿದ್ದು, ಈ ಹಿನ್ನೆಲೆಯಲ್ಲಿ ಹೆದ್ದಾರಿ ತಡೆಗೆ ಅವಕಾಶ ನೀಡುವುದಿಲ್ಲ ಎಂದರು.
ಬಳಿಕ ಪ್ರತಿಭಟನಾಕಾರರು ಕೆಲಹೊತ್ತು ಮಾನವ ಸರಪಳಿ ರಚಿಸಿದ್ದರು. ಈ ಸಂದರ್ಭವೂ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಡಿವೈಎಸ್ಪಿ ದಿನೇಶ್ ಕುಮಾರ್ ಸ್ಥಳಕ್ಕಾಗಮಿಸಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಪ್ರತಿಭಟನಾಕಾರರ ಮನವೊಲಿಸಿದ ಬಳಿಕ ಸಂಚಾರ ಸುಗಮಗೊಂಡಿತು. ನಗರ ಠಾಣಾಧಿಕಾರಿ ಅಂತಿಮ ಇದ್ದರು.
ರೈತ ಸಂಘ, ಹಸಿರುಸೇನೆಯ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್, ಪ್ರಧಾನ ಕಾರ್ಯದರ್ಶಿ ಕಳ್ಳಿಚಂಡ ಧನು, ಬಾದುಮಂಡ ಮಹೇಶ್, ವಿನು, ದೀಪಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.