ಕುಶಾಲನಗರ, ಜೂ 20: ಕುಶಾಲನಗರ ಸಮೀಪದ ಬೈಲುಕೊಪ್ಪ ಟಿಬೆಟಿಯನ್ ನಿರಾಶ್ರಿತ ಶಿಬಿರದಲ್ಲಿ ಯುವಕನೋರ್ವನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ದೆಹಲಿಯಿಂದ ಆಗಮಿಸಿರುವ ನಾಲ್ವರಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು ಇನ್ನುಳಿದಂತೆ ಮೂವರಿಗೆ ನೆಗಟಿವ್ ವರದಿ ಬಂದಿದೆ. ಕಳೆದ 4 ದಿನಗಳ ಹಿಂದೆ ದೆಹಲಿಯಿಂದ ಆಗಮಿಸಿದ ಇಬ್ಬರು ಯುವಕರು ಮತ್ತು ಇಬ್ಬರು ಯುವತಿ ಸೇರಿದಂತೆ ಹೊರ ರಾಜ್ಯಗಳಿಂದ ಬಂದ ಟಿಬೆಟಿಯನ್ ನಾಗರಿಕರನ್ನು ಬೈಲುಕೊಪ್ಪೆಯ 1ನೇ ಕ್ಯಾಂಪ್‍ನಲ್ಲಿ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಈ ಸಂದರ್ಭ ಇವರಲ್ಲಿ ಓರ್ವನಿಗೆ ತೀವ್ರ ಜ್ವರ ಕಾಣಿಸಿದ ಹಿನ್ನೆಲೆಯಲ್ಲಿ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ ಸಂದರ್ಭ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದನ್ನು ತಿಳಿದ ಶಿಬಿರದ ಅಧಿಕಾರಿ ಈತನನ್ನು ಬೈಲುಕೊಪ್ಪೆಯ ಲಾಮಾ ಕ್ಯಾಂಪ್ ಸಮೀಪದಲ್ಲಿರುವ ಫಾರ್ಮ್ ಹೌಸ್‍ಗೆ ಸ್ಥಳಾಂತರಿಸಿದ್ದಾರೆ.ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯ ಅಧಿಕಾರಿಗಳು ತಕ್ಷಣ ಆತನನ್ನು ಮೈಸೂರಿನ ಕೊರೊನಾ ಆಸ್ಪತ್ರೆಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಶಿಬಿರದ ಉಸ್ತುವಾರಿ ಅಧಿಕಾರಿ ಸೇರಿದಂತೆ ಒಟ್ಟು 14 ಮಂದಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ. ದೆಹಲಿಯಿಂದ ಆಗಮಿಸಿದ ಈ ವ್ಯಕ್ತಿಗಳ ಬಗ್ಗೆ ಮತ್ತು ಸೋಂಕು ತಗುಲಿರುವ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡದೆ ಗೌಪ್ಯವಾಗಿ ಇಟ್ಟಿರುವ ಹಿನ್ನೆಲೆಯಲ್ಲಿ ಶಿಬಿರದ ಅಧಿಕಾರಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಲು ಮೈಸೂರು ಜಿಲ್ಲಾಡಳಿತ ಮುಂದಾಗಿದೆ ಎಂದು ತಿಳಿದುಬಂದಿದೆ. ಲಾಮಾ ಕ್ಯಾಂಪ್ ಫಾರ್ಮ್‍ಹೌಸ್ ಆವರಣವನ್ನು ಸೀಲ್‍ಡೌನ್ ಮಾಡಲು ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. ಇದೇ ಶಿಬಿರದಲ್ಲಿ ಬಿಹಾರದ ನಾಲ್ವರು ಮತ್ತು ಭೂತಾನ್ ದೇಶದ ಪ್ರಜೆಗಳು ವಾಸವಾಗಿದ್ದು ಇವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿದುಬಂದಿದೆ.

ಸೋಂಕು ತಗುಲಿದ 32 ವರ್ಷದ ಟಿಬೇಟಿಯನ್ ನಾಗರಿಕ ದೆಹಲಿಯಿಂದ ಬಂದಿದ್ದು ಈತ ಹುಣಸೂರಿನ ಸಮೀಪದ ಟಿಬೇಟಿಯನ್ ನಿರಾಶ್ರಿತ ಕೇಂದ್ರದವನಾಗಿದ್ದು ತನ್ನ ಸ್ನೇಹಿತರನ್ನು ನೋಡಲು ಬೈಲುಕೊಪ್ಪೆಗೆ ಆಗಮಿಸಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭ ಈತ ಬೈಲುಕೊಪ್ಪ ಅಲ್ಲದೆ ಸಮೀಪದ ಕುಶಾಲನಗರ ಕಡೆಗೆ ಭೇಟಿ ನೀಡಿರುವ ಬಗ್ಗೆ ಮಾಹಿತಿಗಳನ್ನು ಇನ್ನಷ್ಟೆ ಕಲೆಹಾಕಬೇಕಾಗಿದೆ.

ಸ್ಥಳಕ್ಕೆ ತಹಶೀಲ್ದಾರ್ ಶ್ವೇತ ರವೀಂದ್ರ, ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಶ್, ಸ್ಥಳೀಯ ಠಾಣಾಧಿಕಾರಿ ಸವಿ ಮತ್ತು ಆರೋಗ್ಯ ಇಲಾಖೆಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ನಡುವೆ ಬೈಲುಕೊಪ್ಪೆ ಲಾಮಾ ಕ್ಯಾಂಪ್‍ನ ಟಿಬೆಟಿಯನ್ ಬೌದ್ಧ

(ಮೊದಲ ಪುಟದಿಂದ) ಕೇಂದ್ರದಲ್ಲಿ ಕಟ್ಟುನಿಟ್ಟಿನ ನಿಗಾವಹಿಸಲಾಗುತ್ತಿದ್ದು ಶಿಬಿರಕ್ಕೆ ಬರುವ ಮತ್ತು ಹೊರಹೋಗುವ ವ್ಯಕ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲಾಗುತ್ತಿದೆ. ದಿನದ 24 ಗಂಟೆ ಕಾಲ ಕೋವಿಡ್-19 ತಪಾಸಣಾ ಕೇಂದ್ರವೊಂದನ್ನು ಸ್ಥಾಪಿಸಲಾಗಿದ್ದು ಕೇಂದ್ರಕ್ಕೆ ಭೇಟಿ ನೀಡುವ ಜನರನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತಿದೆ.

ಕ್ಯಾಂಪ್‍ಗೆ ಹೋಗುವ ಮಾರ್ಗದಲ್ಲಿ ದೊಡ್ಡಹರವೆ ಗ್ರಾಮಕ್ಕೆ ನೂರಾರು ಮಂದಿ ಓಡಾಡುತ್ತಿರುವ ಕಾರಣ ಈ ಭಾಗದ ಜನತೆ ಸೇರಿದಂತೆ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.