ಮಡಿಕೇರಿ, ಜೂ. 20: ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಭವಿಸಿರುವ ಹಾನಿಯನ್ನು ತಡೆಗಟ್ಟುವುದರೊಂದಿಗೆ ನಿಸರ್ಗದ ಮರು ಸಂರಕ್ಷಣೆಗೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಜಂಟಿಯಾಗಿ ಯೋಜನೆ ರೂಪಿಸುವಲ್ಲಿ ಕಾಳಜಿ ತೋರಬೇಕೆಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿರುವ ಅನಂತ ಹೆಗಡೆ ಅಶೀಸರ ಹೇಳಿದರು. ಈ ಸಂಜೆ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, ತಮ್ಮ ನೇತೃತ್ವದಲ್ಲಿ ಕರ್ನಾಟಕ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಭಾರತೀಯ ಹವಾಮಾನ ಇಲಾಖೆ ಮುಖ್ಯಸ್ಥರು, ಭೂವಿಜ್ಞಾನ ಇಲಾಖೆಯ ಮುಖ್ಯಸ್ಥರು, ವಿಜ್ಞಾನಿಗಳನ್ನು ಒಳಗೊಂಡಂತೆ ಭೂಕುಸಿತ ಅಧ್ಯಯನ ಸಮಿತಿಯನ್ನು ರಾಜ್ಯ ಸರಕಾರ ರಚಿಸಿದ್ದು, ಮುಂದಿನ ಮೂರು ತಿಂಗಳಲ್ಲಿ ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವುದಾಗಿ ಅವರು ನುಡಿದರು.ಅಧ್ಯಯನ ಸಮಿತಿಯು ಭೂ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ವರದಿ ನೀಡಲು ರಾಜ್ಯ ಸರ್ಕಾರ ನಿರ್ದೇಶನ ನೀಡಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಭೂ ಕುಸಿತ ಉಂಟಾಗಿರುವ ಪ್ರದೇಶಗಳಿಗೆ ತಮ್ಮ ತಂಡವು ಭೇಟಿ ನೀಡಿ ಭೂಕುಸಿತ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರಕ್ಕೆ ವರದಿಯನ್ನು ನೀಡಲಾಗುವುದು ಎಂದು ತಿಳಿಸಿದರು. ಜನರ ರಕ್ಷಣೆ, ಪರಿಸರ ಸಂರಕ್ಷಣೆ ಎರಡು ಅತೀ ಮುಖ್ಯ ಅಂಶವಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಸಭೆಯಲ್ಲಿ ತಾಂತ್ರಿಕ ಮಾಹಿತಿಯೊಂದಿಗೆ ಚರ್ಚೆ ನಡೆಸಿದ್ದಾಗಿ ತಿಳಿಸಿದರು. ಪ್ರಕೃತಿ ನಾಶವಾಗದಂತೆ ಮಾನವನ ಹಸ್ತಕ್ಷೇಪ ಪ್ರಕೃತಿಯ ಮೇಲೆ ಹೆಚ್ಚಾಗದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಈ ವರದಿಯನ್ನು ಸರ್ಕಾರಕ್ಕೆ ನೀಡಲಿದ್ದೇವೆ ಎಂದು ಅನಂತ ಹೆಗಡೆ ಅಶೀಸರ ಹೇಳಿದರು.
ಜುಲೈನಿಂದ ಮಳೆ: ಕರ್ನಾಟಕ ಹವಾಮಾನ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಅವರ ಅಭಿಪ್ರಾಯದಂತೆ ಕೊಡಗಿನಲ್ಲಿ ಜುಲೈನಿಂದ ಮಳೆ ಜೋರಾಗಲಿದ್ದು, ಈ ದಿಸೆಯಲ್ಲಿ ಜಿಲ್ಲಾಡಳಿತದಿಂದ ಮುಂಜಾಗ್ರತಾ ಕ್ರಮಕ್ಕೆ ಸಲಹೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಮಾನವನಿಗೆ ವಾಸಿಸುವ ಪ್ರದೇಶ ನಾಶವಾದಲ್ಲಿ ಪುನರ್ ವಸತಿ ಕಲ್ಪಿಸಬಹುದು. ಆದರೆ ಅರಣ್ಯ ನಾಶಕ್ಕೆ ಪರ್ಯಾಯ ವ್ಯವಸ್ಥೆ ಸಾಧ್ಯವೇ ಎಂದು ಪ್ರಶ್ನಿಸಿದ ಅಶೀಸರ ಕೊಡಗಿನ ಕಾಡುಗಳನ್ನು ಉಳಿಸಿಕೊಂಡರೆ ಮಾನವನೊಂದಿಗೆ ಜೀವ ಸಂಕುಲವೂ ರಕ್ಷಿಸಲ್ಪಡುತ್ತದೆ ಎಂದರು.
ಮೋಡ ಬಿತ್ತನೆ ಸಂಬಂಧವಿಲ್ಲ: ಕೃತಕ ಮೋಡ ಬಿತ್ತನೆಗೂ, ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೂ ಯಾವುದೇ ಸಂಬಂಧವಿಲ್ಲವೆಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹವಾಮಾನ ಇಲಾಖೆಯ ಪ್ರಕಾರ 2019ರಲ್ಲಿ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಿರಲಿಲ್ಲವೆಂದು ಸಮರ್ಥಿಸಿಕೊಂಡರು.
ಭೂಕುಸಿತ ಸ್ಥಳಗಳಿಗೆ ಭೇಟಿ
ಭೂಕುಸಿತ ಅಧ್ಯಯನ ಸಮಿತಿಯ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅವರು ಶನಿವಾರ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಭೂಕುಸಿತ ಉಂಟಾಗಿ ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲೆಯ ಮದೆ, ಜೋಡುಪಾಲ, ಎರಡನೇ ಮೊಣ್ಣಂಗೇರಿ, ಮಕ್ಕಂದೂರು, ಕಾಂಡನಕೊಲ್ಲಿಗೆ ಭೇಟಿ ನೀಡಿ 2018 ಮತ್ತು 2019ರಲ್ಲಿ ಪ್ರಕೃತಿ ವಿಕೋಪದಿಂದ ಉಂಟಾದ ಭೂಕುಸಿತದ ಸ್ಥಳಗಳಿಗೆ ತಜ್ಞರ ತಂಡದೊಡನೆ ಭೇಟಿ ನೀಡಿ ಸ್ಥಳ ಪರಿಶೀಲನೆ ಕೈಗೊಂಡರು. ಈ ಸಂದರ್ಭ ಸಂಬಂಧಪಟ್ಟ ಭೂ ವಿಜ್ಞಾನಿಗಳು, ಉಪ ವಿಭಾಗಾಧಿಕಾರಿ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಕೈಗೊಂಡ ಪರಿಹಾರ ಕ್ರಮಗಳು ಮತ್ತು ಸದ್ಯದ ಪರಿಸ್ಥಿತಿಯ ಬಗ್ಗೆ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅವರು ಮಾಹಿತಿ ಪಡೆದರು.
ಮಲೆನಾಡಿನ ಭೂಕುಸಿತ ಅಧ್ಯಯನ
(ಮೊದಲ ಪುಟದಿಂದ) ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೋಶದ ನಿರ್ದೇಶಕರಾದ ಡಾ.ಶ್ರೀನಿವಾಸ್ ರೆಡ್ಡಿ, ಜಿಎಸ್‍ಐ ನಿರ್ದೇಶಕರಾದ ಮಾರುತಿ ಕೆ.ಇ., ಸಿಸಿಎಫ್ ಹೀರಾಲಾಲ್, ಡಿಸಿಎಫ್ ಪ್ರಭಾಕರನ್, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಭಾರತೀಯ ವಿಜ್ಞಾನ ಅಧ್ಯಯನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ, ಎಸಿಎಫ್ ನೀಲೇಶ್ ಶಿಂಧೆ, ದಯಾನಂದ್, ಆರ್‍ಎಫ್‍ಒ ಸುಮಿತ್ರ, ಹಿರಿಯ ಭೂ ವಿಜ್ಞಾನಿ ರೇಷ್ಮ ಇತರರು ಇದ್ದರು.
ಅರಣ್ಯ ರಕ್ಷಿಸುವುದು ಕರ್ತವ್ಯ
ಕೊಡಗು ಜಿಲ್ಲೆಯಲ್ಲಿ ಒತ್ತುವರಿಯಾಗದಂತೆ ಅರಣ್ಯವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಆ ಮುನ್ನ ನಡೆದ ಸಭೆಯಲ್ಲಿ ಅನಂತ ಹೆಗಡೆ ಅಶೀಸರ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ಅಧ್ಯಯನ ಸಮಿತಿಯು ಭೂ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿ ಪರಿಹಾರ ಕಂಡು ಕೊಳ್ಳಲು, ಭೂಕುಸಿತ ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರಕ್ಕೆ ಸಭೆಯ ವರದಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಕೊಡಗು ಜಿಲ್ಲೆ ಅಪಾರವಾದ ಅರಣ್ಯ ಸಂಪತ್ತು ಮತ್ತು ದಟ್ಟ ಕಾಡುಗಳನ್ನು ಹೊಂದಿದೆ. ಈ ಅರಣ್ಯ ಸಂಪತ್ತನ್ನು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ರಕ್ಷಿಸುವ ಕಾರ್ಯವಾಗಬೇಕಿದೆ ಎಂದ ಅವರು ಜಿಲ್ಲೆಯ ಹಲವು ಭೂಕುಸಿತ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭ ಸಾಕಷ್ಟು ಹಾನಿಯಾಗಿರುವುದು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಪುನರ್ವಸತಿ ಕಾರ್ಯಗಳು ಉತ್ತಮವಾಗಿ ನಡೆದಿದೆ. ಭೂಕುಸಿತವಾದ ಅರಣ್ಯ ಪ್ರದೇಶಗಳನ್ನು ಸಹ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವಂತಹ ಕಾರ್ಯವಾಗಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇರುವ ಪೈಸಾರಿ, ದೇವರಕಾಡು, ಇತರೆ ಕಂದಾಯ ಅರಣ್ಯಗಳನ್ನು ಉಳಿಸಿಕೊಳ್ಳಲು ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಒಗ್ಗಟ್ಟಿನ ಕೆಲಸವನ್ನು ಮಾಡಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರಲ್ಲದೆ, ಸಾಮಾಜಿಕ ಅರಣ್ಯ ಯೋಜನೆ, ಮನ್ರೇಗಾ, ಹೀಗೆ ವಿವಿಧ ಯೋಜನೆಗಳಡಿ ಅರಣ್ಯವನ್ನು ಸಂರಕ್ಷಿಸುವ ಕೆಲಸ ನಡೆಯಬೇಕು ಎಂದು ಸೂಚಿಸಿದರು. ಪ್ರಕೃತಿಯ ಮೇಲೆ ಒತ್ತಡ ಹೆಚ್ಚಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಸಮಿತಿ ಅಧ್ಯಕ್ಷರು ತಿಳಿಹೇಳಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾತನಾಡಿ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸಮತಟ್ಟಾದ ಪ್ರದೇಶ ಸಿಗುವುದು ತೀರಾ ವಿರಳ. ಜನವಸತಿ ಮಾತ್ರವಲ್ಲದೆ ದಟ್ಟ ಅರಣ್ಯ ಪ್ರದೇಶದಲ್ಲಿಯೂ ಸಹ ಭೂಕುಸಿತ ಉಂಟಾಗಿತ್ತು ಎಂದು ಸಭೆಗೆ ವಿವರಿಸಿದರು.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೋಶದ ನಿರ್ದೇಶಕ ಡಾ. ಶ್ರೀನಿವಾಸ್ ರೆಡ್ಡಿ ಮಾತನಾಡಿ ಜಿಲ್ಲೆಯಲ್ಲಿ ಭೂಕುಸಿತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ನೀಡುವ ರಿಮೋಟ್ ಸೆನ್ಸಿಂಗ್ ಮಾಹಿತಿಯನ್ನು ಆಧರಿಸಿ ಹೆಚ್ಚಿನ ಮುಂಜಾಗ್ರತೆ ವಹಿಸುವುದು, ಮಳೆಯ ಪ್ರಮಾಣದ ಆಧಾರದ ಮೇಲೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದರಿಂದ ಭೂಕುಸಿತದಿಂದ ಉಂಟಾಗುವ ಜೀವ ಹಾನಿಯನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
ಮಲೆನಾಡಿನ ಭೂಕುಸಿತ ಅಧ್ಯಯನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ಮಾತನಾಡಿ, ಅರಣ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು. ಜೊತೆಗೆ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಣೆ ಮಾಡಿದಲ್ಲಿ ಸಾಕಷ್ಟು ಅಪಾಯಗಳನ್ನು ತಪ್ಪಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಭಾರತೀಯ ವಿಜ್ಞಾನ ಅಧ್ಯಯನ ಸಂಸ್ಥೆಯ ವಿಜ್ಞಾನಿ ಟಿ.ವಿ. ರಾಮಚಂದ್ರ ಮಾತನಾಡಿ, ಜಾಗತಿಕ ತಾಪಮಾನ ಏರಿಕೆಯಿಂದಾಗಿ ಪ್ರಕೃತಿಯಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಈ ಹಿಂದೆ ಮಳೆ ದಿನಗಳು ಹೆಚ್ಚಿದ್ದವು. ಈ ಹಿನ್ನೆಲೆಯಲ್ಲಿ ಪ್ರವಾಹ, ಭೂಕುಸಿತವಾಗುವ ಸಂಭವ ತೀರ ಕಡಿಮೆಯಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಳೆ ದಿನಗಳು ಕಡಿಮೆ ಇದ್ದು 2-3 ದಿನಗಳಲ್ಲಿ ಗರಿಷ್ಠ ಮಳೆಯುಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಹ, ಭೂಕುಸಿತದ ಪ್ರಕರಣಗಳು ಕಂಡು ಬರುತ್ತಿದೆ ಎಂದು ತಿಳಿಸಿದರು.
ಜಿಎಸ್‍ಐ ನಿರ್ದೇಶಕ ಮಾರುತಿ ಕೆ.ಇ., ಪರಿಸರ ಅಧಿಕಾರಿ ಗಣೇಶನ್, ಹಿರಿಯ ಭೂ ವಿಜ್ಞಾನಿ ರೇಷ್ಮ ಅವರು ಸಭೆಗೆ ಹಲವು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಅರಣ್ಯಾಧಿಕಾರಿ ಪ್ರಭಾಕರನ್, ಉಪ ವಿಭಾಗಾಧಿಕಾರಿ ಟಿ. ಜವರೇಗೌಡ, ವಿಪತ್ತು ನಿರ್ವಹಣಾ ಘಟಕದ ಅನನ್ಯ ವಾಸುದೇವ್ ಹಾಗೂ ಇತರ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.