ಭಾಗಮಂಡಲ, ಜೂ. 18: ವಯೋವೃದ್ಧರೊಬ್ಬರ ಮನೆಯ ಮೇಲ್ಛಾವಣಿ ನಿರ್ಮಿಸಿ ಮಾನವೀಯತೆ ಮೆರೆದ ಘಟನೆಯೊಂದು ಇಲ್ಲಿಗೆ ಸಮೀಪದ ಸಣ್ಣಪುಲಿಕೋಟು ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಚಂಗೀರ ಮೋಟಯ್ಯ (90) ತಮ್ಮ ಇಬ್ಬರು ಹೆಣ್ಣಮಕ್ಕಳೊಂದಿಗೆ ವಾಸವಾಗಿದ್ದರು. ಸುರಿಯುವ ಮಳೆಗೆ ಮನೆಯ ಮೇಲ್ಛಾವಣಿ ಹಾಳಾಗಿ ಮನೆಯ ಗೋಡೆ ಕೋಣೆಗಳು ನೀರು ತುಂಬಿ ಸಮಸ್ಯೆಯುಂಟಾಗಿತ್ತು. ಮೇಲ್ಚಾವಣಿಯ ದುಸ್ಥಿತಿಯಿಂದ ಗೋಡೆ ಕುಸಿಯುವ ಹಂತದಲ್ಲಿದ್ದುದನ್ನು ಮನಗಂಡು ಬಡಕುಟುಂಬಕ್ಕೆ ಗ್ರಾಮಸ್ಥರು ನೆರವಿನ ಹಸ್ತ ಚಾಚಿದ್ದಾರೆ.
ಸ್ಥಳೀಯ ಗ್ರಾಮಪಂಚಾಯಿತಿ ಮಾಜಿ ಸದಸ್ಯ ಕುಯ್ಯಮುಡಿ ಮನೋಜ್,ಕಾವೇರಿಮನೆ ದಿನೇಶ್ ಹಾಗೂ ಕಾವೇರಿ ಮನೆ ರಾಜೇಶ್ ಒಟ್ಟಾಗಿ ಗ್ರಾಮಸ್ಥರಿಂದ ಹಣ ಸಂಗ್ರಹಿಸಿ ಗ್ರಾಮಸ್ಥರ ಸಹಕಾರದೊಂದಿಗೆ ಮನೆಯ ಮೇಲ್ಛಾವಣಿ ದುರಸ್ತಿ ಮಾಡಿಕೊಟ್ಟಿದ್ದಾರೆ. ಗ್ರಾಮ ಪಂಚಾಯಿತಿ ವತಿಯಿಂದ ಮಂಚ ಹಾಗೂ ಹಾಸಿಗೆಗಳನ್ನು ಒದಗಿಸಲಾಗಿದೆ. ಭಾಗಮಂಡಲದ ಅರಣ್ಯ ಇಲಾಖೆ ಮರಮುಟ್ಟುಗಳನ್ನು ನೀಡಿ ನೆರವಿಗೆ ನಿಂತಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಕೈಜೋಡಿಸಿದ್ದಾರೆ. ಗ್ರಾಮಸ್ಥರ ನೆರವಿನಿಂದ ಮನೆ ದುರಸ್ತಿಯಾಗಿದ್ದು ಬಡಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
-ಸುನಿಲ್ ಕುಯ್ಯಮುಡಿ