ಮಡಿಕೇರಿ, ಜೂ. 18: ಇತ್ತೀಚೆಗಷ್ಟೇ ವೀರಾಜಪೇಟೆಯಲ್ಲಿ ಗಾಂಜಾ ಮಾರಾಟದ ಭಾರೀ ಜಾಲವೊಂದನ್ನು ಬೇಧಿಸಿದ್ದ ಬೆನ್ನಲ್ಲೆ ಅದೇ ರೀತಿಯ ಮತ್ತೊಂದು ಗಾಂಜಾ ಮಾರಾಟದ ತಂಡವನ್ನು ಪತ್ತೆ ಹಚ್ಚುವಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.ಚೆಟ್ಟಳ್ಳಿ ಪ್ರೌಢ ಶಾಲಾ ಮೈದಾನದ ಬಳಿಯ ಸಾರ್ವಜನಿಕ ರಸ್ತೆ ಬದಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯನ್ವಯ ದಾಳಿ ನಡೆಸಿದ ಪೊಲೀಸರ ತಂಡವು ಆರೋಪಿಗಳಾದ ಮೈಸೂರು ಹೆಬ್ಬಾಳದ ಆನಂದ ಅಲಿಯಾಸ್ ಜ್ಞಾನನಂದ, ವೀರಾಜಪೇಟೆ ಮೊಗರ ಗಲ್ಲಿಯ ಖಲೀಲ್, ಸೋಮವಾರಪೇಟೆ ತಾಲೂಕು ವಾಲ್ನೂರು ಗ್ರಾಮದ ಕೆ.ಎಸ್. ಫರೀದ್, ಅಭ್ಯತ್‍ಮಂಗಲ ಗ್ರಾಮದ ಹೆಚ್.ಎನ್. ನಿಖಿಲ್, ಹೆಚ್.ಎಸ್. ಹರೀಶ್ ಹಾಗೂ ಚೇರಳ ಶ್ರೀಮಂಗಲದ ಕೆ.ಎನ್. ಅರುಣ್ ಕುಮಾರ್ ಎಂಬವರುಗಳನ್ನು ಬಂಧಿಸಿದ್ದಾರೆ.

ಬಂಧಿತರಿಂದ 1.50 ಲಕ್ಷ ಮೌಲ್ಯದ 5 ಕೆ.ಜಿ. ಗಾಂಜಾ, 5 ಸಾವಿರ ನಗದು, 4 ಲಕ್ಷ ಮೌಲ್ಯದ ಟಾಟಾ ಇಂಡಿಕಾ ಕಾರು (ಕೆಎ 09 ಸಿ 0971), 1 ಲಕ್ಷ ಮೌಲ್ಯದ ಬೈಕ್ (ಕೆಎ 12 ಪಿ 9040) ಹಾಗೂ 1.50 ಲಕ್ಷ ಮೌಲ್ಯದ ಆಟೋರಿಕ್ಷಾ (ಕೆಎ ಬಿ 8023) ಅನ್ನು ವಶಪಡಿಸಿ ಕೊಂಡಿದ್ದಾರೆ. ಆರೋಪಿಗಳ ಪೈಕಿ ಆನಂದ್ ಎಂಬಾತ ಕೊಡಗಿನ ವಿವಿಧೆಡೆಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದವನಾಗಿದ್ದು, ಈತ

ಒರಿಸ್ಸಾ ದಿಂದ ಗಾಂಜಾವನ್ನು ತರಿಸಿಕೊಳ್ಳುತ್ತಿದ್ದ ಎಂಬದು ತನಿಖೆಯಿಂದ ತಿಳಿದು ಬಂದಿದೆ.

ಖಲೀಲ್ ಎಂಬಾತ ವೀರಾಜಪೇಟೆಯಲ್ಲಿ ಪತ್ತೆಯಾಗಿದ್ದ ಗಾಂಜಾ ದಂಧೆಯ ಆರೋಪಿಗಳ ಲ್ಲೊಬ್ಬನಾದ ಸಾಧಿಕ್ ಎಂಬಾತನ ಸಹೋದರನಾಗಿದ್ದಾನೆ. ಆನಂದ ಮನೆ ಬ್ರೋಕರ್ ಕೆಲಸ, ಖಲೀಲ್ ಬಟ್ಟೆ ವ್ಯಾಪಾರಿ, ಫರೀದ್ ಹಾಗೂ ಹರೀಶ್ ಕೂಲಿ ಕೆಲಸ. ನಿಖಿಲ್ ಪೈಂಟಿಂಗ್ ಕೆಲಸ, ಅರುಣ್ ಕುಮಾರ್ ಮಣಿಪಾಲದಲ್ಲಿ ಸ್ವಿಗ್ಗಿ ಸರಬರಾಜು ಮಾಡುವ ಕೆಲಸ ನಿರ್ವಹಿಸುತ್ತಿದ್ದ ಎಂದು ವಿವರಿಸಿದ ಎಸ್ಪಿ, ಗಾಂಜಾ ದಂಧೆಯನ್ನು ಕೊಡಗಿನಲ್ಲಿ ಹತ್ತಿಕ್ಕುವ ಸಲುವಾಗಿ ಪೊಲೀಸ್ ಇಲಾಖೆ ಕಾರ್ಯೋನ್ಮುಖ ವಾಗಿದ್ದು, ಬಿರುಸಿನ ತನಿಖೆ ಮುಂದುವರೆಸಲಿದೆ ಎಂದು ಹೇಳಿದರು.

(ಮೊದಲ ಪುಟದಿಂದ) ಎಸ್ಪಿ ಡಾ. ಸುಮನ್ ಹಾಗೂ ಡಿವೈಎಸ್ಪಿ ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಿ.ಎನ್. ದಿವಾಕರ್, ಠಾಣಾಧಿಕಾರಿ ಹೆಚ್.ವಿ. ಚಂದ್ರಶೇಖರ್, ಸದಾಶಿವ, ಅಪರಾಧ ಪತ್ತೆದಳದ ನಿರೀಕ್ಷಕ ಎನ್. ಕುಮಾರ್ ಆರಾಧ್ಯ, ಎಎಸ್‍ಐ ಹಮೀದ್, ಸಿಬ್ಬಂದಿಗಳಾದ ಯೋಗೇಶ್, ನಿರಂಜನ್, ವೆಂಕಟೇಶ್, ವಸಂತ್, ಶರತ್ ರೈ, ಅನಿಲ್, ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ ಶ್ರೀಧರ್, ತೀರ್ಥಕುಮಾರ್, ಮಂಜುನಾಥ್, ಶಶಿಧರ್, ಚಾಲಕರುಗಳಾದ ಶಶಿ ಹಾಗೂ ಪ್ರವೀಣ್ ಕುಮಾರ್, ನಾಗರಾಜ್, ಸಿಡಿಆರ್ ವಿಭಾಗದ ರಾಜೇಶ್, ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.