ಕುಶಾಲನಗರ, ಜೂ. 19: ಗಡಿ ಕಾಯುವ ಸೈನಿಕರನ್ನು ಹತ್ಯೆಗೈದ ಚೀನಾ ವಿರುದ್ಧ ಯುವ ಕಾಂಗ್ರೆಸ್ ಘಟಕ ಕುಶಾಲನಗರದಲ್ಲಿ ಪ್ರತಿಭಟಿಸಿತು.

ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಚೀನಾ ದೇಶದ ವಿರುದ್ಧ ಧಿಕ್ಕಾರ ಕೂಗಲಾಯಿತು. ಮಡಿದ ಹುತಾತ್ಮ ಯೋಧರು ಹಾಗೂ ಭಾರತೀಯ ಸೇನೆಗೆ ಜಯಕಾರ ಹಾಕುವ ಮೂಲಕ ಚೀನಾ ದೇಶದ ವಸ್ತುಗಳನ್ನು ಉಪಯೋಗಿಸದಂತೆ ಘೋಷಣೆಗಳನ್ನು ಕೂಗಲಾಯಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ.ಪಿ.ಶಶಿಧರ್, ಭಾರತ ಮತ್ತು ಚೀನಾ ಗಡಿಯಲ್ಲಿ ಕಳೆದ ಒಂದು ತಿಂಗಳಿನಿಂದ ಪರಿಸ್ಥಿತಿ ಹದಗೆಟ್ಟಿತ್ತು. ರಾಜತಾಂತ್ರಿಕ ಮಾತುಕತೆಗಳು ಮೂಲಕ ಇದನ್ನು ಶಮನಗೊಳಿಸಲು ಪ್ರಯತ್ನಿಸಿದ್ದರೆ ಯೋಧರು ಪ್ರಾಣತ್ಯಾಗ ತಡೆಯಬಹುದಿತ್ತು ಎಂದರು.

ಚೀನಾ ದೇಶ ಉತ್ಪನ್ನಗಳನ್ನು ತ್ಯಜಿಸುವುದು ಕೇವಲ ಭಾರತೀಯ ಪ್ರಜೆಗಳ ಕರ್ತವ್ಯವಲ್ಲ. ಚೀನಾದೊಂದಿಗೆ ಆರ್ಥಿಕ ವ್ಯವಹಾರಗಳನ್ನು ಭಾರತ ಸರಕಾರ ಮೊಟಕುಗೊಳಿಸಿ ಭಾರತವನ್ನು ಸ್ವಾವಲಂಬಿಗೊಳಿಸಲು ತನ್ನ ಜವಾಬ್ದಾರಿ ತೋರಬೇಕಿದೆ ಎಂದರು.

ಮಡಿಕೇರಿ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಹಾನಗಲ್ ಮಾತನಾಡಿದರು. ಈ ಸಂದರ್ಭ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶಿವಶಂಕರ್, ಕಾರ್ಯದರ್ಶಿ ಶಿವಕುಮಾರ್, ಕುಶಾಲನಗರ ಅಧ್ಯಕ್ಷ ಪುನಿತ್, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ಎಸ್.ಎನ್.ನರಸಿಂಹಮೂರ್ತಿ, ಕುಶಾಲನಗರ ಪ.ಪಂ. ಸದಸ್ಯರಾದ ಶೇಖ್ ಖಲೀಮುಲ್ಲಾ, ಪ್ರಮೋದ್ ಮುತ್ತಪ್ಪ, ಜಯಲಕ್ಷ್ಮಿ ಮತ್ತಿತರರು ಇದ್ದರು.