ಪೆರಾಜೆ, ಜೂ. 18: ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ಪೆರಾಜೆಯ ವಿವಿಧ ಭಾಗಗಳಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ನೆರವೇರಿಸಿದರು.
ನಂತರ ಮಾತನಾಡಿದ ಅವರು ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಿಡುಗಡೆಯಾದ ಅನುದಾನಗಳ ಪೈಕಿ ಒಂದು ಕೋಟಿಯ ಕೆಲಸಗಳು ಈಗ ತಾನೆ ಮುಕ್ತಾಯ ಗೊಂಡಿರುತ್ತದೆ.ಮುಂದಿನ ದಿನಗಳಲ್ಲಿ ಬಾಕಿ ಉಳಿದ ಕೆಲಸಗಳು ತೀವ್ರಗತಿಯಲ್ಲಿ ಮುಗಿಯಲಿದೆ ಎಂದು ಭರವಸೆ ನೀಡಿದರು.
ಬೆಟ್ಟದ ಪುರದ ಕುಡಿಯುವ ನೀರಿನ ವಿದ್ಯುತ್ ಚಾಲಿತ ಪಂಪ್, ಅಡ್ಕದ ಕುಟುಂಬಸ್ಥರ ಸಂಪರ್ಕ ಸೇತುವೆ, ಬಂಗಾರಕೋಡಿ ಕಾಂಕ್ರಿಟ್ ರಸ್ತೆ, ಕುಂಡಾಡು ಕಾಂಕ್ರಿಟ್ ರಸ್ತೆ, ಕುಂಬಳಚೇರಿ ಬಂಡಶಾಲೆ ಸೇತುವೆ, ಕೆಂಗಮಟ್ಟೆ ಪರಿಶಿಷ್ಟ ಪಂಗಡದ ಕಾಲೋನಿ ರಸ್ತೆ, ಗಡಿಗುಡ್ಡೆ ದಾಸರಹಿತ್ಲು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಹಾಗೂ ಪೆರಾಜೆ ಇಂದಿರಾ ಆವಾಜ್ ಕಾಲೋನಿಯ ಕುಡಿಯುವ ನೀರಿನ ಟ್ಯಾಂಕ್‍ಗಳನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು.
ಈ ಸಂದರ್ಭ ಅತಿಥಿಗಳಾಗಿ ಪೆರಾಜೆ ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮಿ ಧರಣೀಧರ್, ಮಡಿಕೇರಿ ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹದೇವ ಪ್ರಭು, ಲೋಕೋಪಯೋಗಿ ಇಂಜಿನಿಯರ್ ಶಿವಕುಮಾರ್ ಹಾಗೂ ಪ್ರಮೋದ್, ಸೇರಿದಂತೆ ಪಂಚಾಯತ್ ಸದಸ್ಯರುಗಳು, ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರುಗಳು,ಹಿರಿಯ ನಾಯಕರು ಗಳು, ವಿವಿಧ ಮೋರ್ಚದ ಪದಾಧಿಕಾರಿಗಳು ಆಯಾಯ ಪ್ರದೇಶಗಳ ಗ್ರಾಮಸ್ಥರು ಪಾಲ್ಗೊಂಡಿದ್ದರು.