ಮಡಿಕೇರಿ, ಜೂ. 18: ಚಾಮುಂಡೇಶ್ವರಿ ನಗರದಲ್ಲಿ ಕಳೆದ ರಾತ್ರಿ ಮಣ್ಣು ಕುಸಿದಿದ್ದ ಸ್ಥಳಕ್ಕೆ ಇಂದು ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಅವರು ಭೇಟಿ ನೀಡಿ ಪರಿಶೀಲಿಸಿದರು.
ಗಾಳಿ-ಮಳೆಯಿಂದಾಗಿ ಕಳೆದ ರಾತ್ರಿ ಚಾಮುಂಡೇಶ್ವರಿ ನಗರದ ಶ್ಯಾಂ ಎಂಬವರ ಮನೆಯ ಹಿಂಭಾಗದಲ್ಲಿ ಮಣ್ಣು ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಇಂದು ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಜವರೇಗೌಡ ಖುದ್ದು ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018-19ರಲ್ಲಿ ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಈಗಾಗಲೇ ಮನೆಗಳನ್ನು ವಿತರಿಸಲಾಗಿದೆ. ಮೊದಲ ಪಟ್ಟಿಯಲ್ಲಿ ಸಂಪೂರ್ಣವಾಗಿ ಮನೆಕಳೆದುಕೊಂಡವರಿಗೆ ಆದ್ಯತೆ ನೀಡಲಾಗಿದ್ದು, ಎರಡನೇ ಪಟ್ಟಿಯಲ್ಲಿ ಅಪಾಯದಂಚಿನಲ್ಲಿರುವ ಮನೆಗಳನ್ನು ಗುರುತಿಸಿ ಪಟ್ಟಿ ತಯಾರಿಸಲಾಗಿದೆ. ಈ ಪಟ್ಟಿಯಲ್ಲಿ 420 ಮಂದಿ ಇದ್ದು, ಈ ಪಟ್ಟಿಯನ್ನು ನೋಡೆಲ್ ಅಧಿಕಾರಿಗಳು ಪರಿಶೀಲಿಸಿ, ಸ್ಥಳ ಪರಿಶೀಲನೆ ಮಾಡಿ ಇದರಲ್ಲಿ ಸುಮಾರು 163 ಮಂದಿಗೆ ಪುನರ್ವಸತಿ ಅವಶ್ಯಕತೆ ಇಲ್ಲ ಎಂದು ವರದಿ ನೀಡಿದ್ದಾರೆ.ಆದರೂ ಅಂತಹ ಮನೆಗಳನ್ನು ತಾನೇ ಖುದ್ದಾಗಿ ಪರಿಶೀಲನೆ ನಡೆಸುತ್ತಿದ್ದೇನೆ. ತನ್ನ ಪರಿಶೀಲನೆ ವೇಳೆ ಪುನರ್ವಸತಿಯ ಅಗತ್ಯತೆ ಅನಿವಾರ್ಯವಿದ್ದಲ್ಲಿ ಅಂತಹ ಮನೆಗಳನ್ನು ಪರಿಗಣಿಸಲಾಗುವುದು ಎಂದರು.ಕಳೆದ ರಾತ್ರಿ ಮಣ್ಣು ಕುಸಿತ ಉಂಟಾದ ಶ್ಯಾಂ ಎಂಬವರ ಮನೆ ಹಾಗೂ ಪಕ್ಕದಲ್ಲಿರುವ ಶೈಲಾ ಎಂಬವರ ಹೆಸರುಗಳು ಪುನರ್ವಸತಿಯ 2ನೇ ಪಟ್ಟಿಯಲ್ಲಿತ್ತಾದರೂ ನೋಡೆಲ್ ಅಧಿಕಾರಿಗಳು ಇವರುಗಳಿಗೆ ಪುನರ್ ವಸತಿ ಅಗತ್ಯವಿಲ್ಲ ಎಂದು ವರದಿ ನೀಡಿದ್ದರು.
(ಮೊದಲ ಪುಟದಿಂದ) ಈ ಹಿನ್ನೆಲೆಯಲ್ಲಿ ಇಂದು ತಾನು ಪರಿಶೀಲನೆ ನಡೆಸಿದ್ದು, ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳುವುದಾಗಿ ಜವರೇಗೌಡ ಹೇಳಿದರು.
ಈ ಸಂದರ್ಭ ತಹಶೀಲ್ದಾರ್ ಮಹೇಶ್, ನಗರಸಭಾ ಪ್ರಭಾರ ಆಯುಕ್ತ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಅರುಂಧತಿ ಮತ್ತಿತರರಿದ್ದರು.
ಸಣ್ಣ ಪ್ರಮಾಣದ ಕುಸಿತ: ನಿನ್ನೆ ರಾತ್ರಿಯ ಘಟನೆ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಇದೊಂದು ಸಣ್ಣ ಪ್ರಮಾಣದ ಭೂಕುಸಿತವಾಗಿದ್ದು, ಐದು ಕುಟುಂಬಗಳನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇತರ ನಿವಾಸಿಗಳಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಪರಿಹಾರ ಕಾರ್ಯಾಚರಣೆ ತಂಡ ಸಮೀಪದಲ್ಲೇ ಬೀಡು ಬಿಟ್ಟಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.