ಮಡಿಕೇರಿ, ಜೂ. 18: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ರೈತರ ಕೃಷಿ ಜಮೀನಿನಲ್ಲಿ ಪ್ರವಾಹದಿಂದಾಗಿ ಸೇರಿಕೊಂಡಿದ್ದ ಮರಳನ್ನು ತೆಗೆಯಲು ಆ ರೈತರಿಂದಲೇ ರಾಜಧನ (ರಾಯಲ್ಟಿ)ವನ್ನು ಸಂಗ್ರಹಿಸಲಾಗಿದೆ ಎಂದು ಕೊಡಗು ಸೇವಾ ಕೇಂದ್ರದ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೃಷಿಗೆ ಉತ್ತೇಜನ ನೀಡಬೇಕು ಎಂಬ ಬೇಡಿಕೆ ಇರುವ ಬೆನ್ನಲ್ಲೇ ವಿಕೋಪದ ಪರಿಣಾಮದಿಂದ ಎದುರಾದ ಸಮಸ್ಯೆಯನ್ನು ಸರಿಪಡಿಸಲು ಸಂಕಷ್ಟಕ್ಕೆ ತುತ್ತಾದವರಿಂದಲೇ ರಾಜಧನವನ್ನು ಸಂಗ್ರಹಿಸಿರುವ ಕ್ರಮ ಸರಿಯಲ್ಲ. ಈ ಸಂಗ್ರಹಿತ ಹಣವನ್ನು ರೈತರಿಗೆ ಮರು ಪಾವತಿ ಮಾಡುವಂತಾಗಬೇಕು ಎಂದು ಕೊಡಗು ಸೇವಾ ಕೇಂದ್ರದ ಪ್ರಮುಖರಾದ ಎ.ಎ. ತಮ್ಮುಪೂವಯ್ಯ ಹಾಗೂ ತೇಲಪಂಡ ಪ್ರಮೋದ್ ಸೋಮಯ್ಯ ಅವರುಗಳು ಆಗ್ರಹಿಸಿದ್ದಾರೆ.

2019-20ನೇ ಸಾಲಿನಲ್ಲಿ ರಾಜ್ಯದಲ್ಲಿ ಉಂಟಾದ ಭಾರೀ ಮಳೆಯಿಂದಾಗಿ ನದಿಗಳಲ್ಲಿ ಪ್ರವಾಹ ಉಂಟಾಗಿ ನದಿಪಾತ್ರದ ಹಲವು ಕಡೆ ಕೃಷಿ ಜಮೀನುಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿ ಮರಳು ಸಂಗ್ರಹವಾಗಿತ್ತು. ಈ ಜಮೀನನ್ನು ಮತ್ತೆ ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಲು ಮರಳನ್ನು ತೆರವುಗೊಳಿಸುವ ಅವಶ್ಯಕತೆ ಇದ್ದುದರಿಂದ ಪ್ರವಾಹದಿಂದ ಕೃಷಿ ಜಮೀನುಗಳಲ್ಲಿ ಸಂಗ್ರಹವಾಗಿರುವ ಮರಳನ್ನು ಜೂನ್ 15ರೊಳಗೆ ವಿಲೇವಾರಿ ಮಾಡಲು ಪಟ್ಟಾ ಜಮೀನುಗಳ ಮಾಲೀಕರಿಗೆ ಅನುಮತಿ ನೀಡಲು ಸರಕಾರ ಆದೇಶ ನೀಡಿತ್ತು. ಆದರೆ, ಇದಕ್ಕಾಗಿ ಜಮೀನಿನಲ್ಲಿ ಮರಳು ತುಂಬಿದ್ದ ಪ್ರದೇಶದ ರೈತರಿಂದಲೇ ರಾಜಧನ ಪಡೆದಿರುವುದು

(ಮೊದಲ ಪುಟದಿಂದ) ಸರಿಯಾದ ಕ್ರಮವಲ್ಲ. ಅದರಲ್ಲೂ ಕೊಡಗು ಜಿಲ್ಲೆಯಲ್ಲಿ ಈ ರೀತಿ ಸಂಗ್ರಹಿತ ಮರಳು ಮಣ್ಣು ತುಂಬಿಕೊಂಡಿರುವುದರಿಂದ ಇತರ ರೀತಿಯಲ್ಲಿ ಸ್ವಂತ ಉಪಯೋಗಕ್ಕೂ ಬಳಸಲು ಸಾಧ್ಯವಾಗದ ತರಹದ್ದು ಎಂದು ಅವರುಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಯಮ ಏನಿತ್ತು?

ಪಟ್ಟಾ ಜಮೀನಿನಲ್ಲಿ ಶೇಖರಣೆಗೊಂಡಿರುವ ಮರಳು ನಿಕ್ಷೇಪದ ಛಾಯಾಚಿತ್ರ, ಆರ್.ಟಿ.ಸಿ. ಹಾಗೂ ಜಮೀನು ಮಾಲೀಕರ ಭಾವಚಿತ್ರದೊಂದಿಗೆ ಜಮೀನು ಮಾಲೀಕರು ಹಿರಿಯ ಭೂವಿಜ್ಞಾನಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮರಳು ಸಾಗಾಣಿಕೆ ಪರವಾನಗಿಗೆ ಅರ್ಜಿ ಸಲ್ಲಿಸಬೇಕಿತ್ತು. ಅಲ್ಲದೆ, ಈ ಇಲಾಖೆಯ ತಂಡ ಸ್ಥಳ ಪರಿಶೀಲಿಸಿ ನಿಗದಿ ಮಾಡುವ ಮರಳಿಗೆ ಪ್ರತಿ ಮೆಟ್ರಿಕ್‍ಟನ್‍ಗೆ ಇಂತಿಷ್ಟು ರಾಜಧನ ನೀಡುವಂತೆ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಇದು ಒಂದು ರೀತಿಯಲ್ಲಿ ಸನಿಹದಲ್ಲಿ ತೋಡು - ನದಿಗಳು ಇದ್ದಲ್ಲಿ ಅಕ್ರಮ ವಹಿವಾಟಿಗೂ ಅವಕಾಶ ಕಲ್ಪಿಸಿದಂತಾಗಿತ್ತು ಎಂದು ಅವರುಗಳು ಹೇಳಿದ್ದಾರೆ.

ಜಿಲ್ಲೆಯಲ್ಲಿ 68 ಅರ್ಜಿ

ಇದರಂತೆ ಜಿಲ್ಲೆಯಲ್ಲಿ ಇದಕ್ಕಾಗಿ ಒಟ್ಟು 68 ಅರ್ಜಿಗಳು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಲ್ಲಿಕೆಯಾಗಿತ್ತು. ಇದರಲ್ಲಿ 57 ಅರ್ಜಿಗಳನ್ನು ಮಾನ್ಯ ಮಾಡಲಾಗಿತ್ತು. 11 ಅರ್ಜಿಗಳು ತಿರಸ್ಕರಿಸಲ್ಪಟ್ಟಿದ್ದವು. ಮಾಲೀಕರು ಈ ಮರಳನ್ನು ಪಡೆದುಕೊಳ್ಳಲು ಸರಕಾರಕ್ಕೆ (ಈ ಇಲಾಖೆ) ರಾಜಧನವನ್ನು ಪಾವತಿಸಬೇಕಾಗಿತ್ತು. ಒಂದು ಮೆಟ್ರಿಕ್ ಟನ್ ಮರಳಿಗೆ ಇದಕ್ಕೆ ರೂ. 96 ದರ ನಿಗದಿಪಡಿಸಲಾಗಿದ್ದು, ಒಟ್ಟು 2722 ಮೆಟ್ರಿಕ್ ಟನ್ ಮರಳನ್ನು ತೆಗೆಯಲು ರೂ. 2.61 ಲಕ್ಷ ರಾಜಧನ ಸಂಗ್ರಹವಾಗಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಮಾಲೀಕರ ಅರ್ಜಿಯನ್ವಯ 302 ಮೆಟ್ರಿಕ್ ಟನ್‍ಗೆ ರೂ. 28,992, ಮಡಿಕೇರಿ ತಾಲೂಕಿನಲ್ಲಿ 174 ಮೆಟ್ರಿಕ್ ಟನ್‍ಗೆ ರೂ. 16,704 ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 2246 ಮೆಟ್ರಿಕ್‍ಟನ್‍ಗೆ ರೂ.2.15 ಲಕ್ಷ ರಾಜಧನ ಸಂಗ್ರಹಣೆಯಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಚೇರಿಗೆ ಬಂದ ಮನವಿಯಂತೆ ತಾಂತ್ರಿಕ ತಂಡ ಸ್ಥಳ ಪರಿಶೀಲಿಸಿ ಇಂತಿಷ್ಟು ಮರಳು ಎಂದು ನೀಡಿದ ವರದಿಯಂತೆ ಅನುಮತಿ ನೀಡಲಾಗಿತ್ತು. ಇದು ಕೇವಲ ಸ್ವಂತ ಬಳಕೆಗೆ ಮಾತ್ರವಲ್ಲದೆ, ಮಾರಾಟಕ್ಕೆ ಅವಕಾಶ ಇರಲಿಲ್ಲ. ತೋಡು- ನದಿಪಾತ್ರಗಳ ಬದಿಯಲ್ಲಿ ಇರುವ ಜಮೀನಿಗೆ ಸಂಬಂಧಿಸಿದಂತೆ ಬಂದ ಅರ್ಜಿಗಳನ್ನು ಪುರಸ್ಕರಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.