ಮಡಿಕೇರಿ, ಜೂ. 17: ಲಡಾಖ್‍ನ ಗಡಿಭಾಗದಲ್ಲಿ ಚೀನಾ ಸೇನೆಯ ಕೃತ್ಯಕ್ಕೆ ಹುತಾತ್ಮರಾಗಿರುವ ಭಾರತೀಯ ಯೋಧರಿಗೆ ಜಿಲ್ಲಾ ಮಾಜಿ ಸೈನಿಕರ ಸಂಘ ಕಂಬನಿ ಮಿಡಿದಿದ್ದು, ಚೀನಾದ ದುಷ್ಕøತ್ಯವನ್ನು ಖಂಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ನಿವೃತ್ತ ಮೇ. ಜ. ಬಿ.ಎ. ಕಾರ್ಯಪ್ಪ ಹಾಗೂ ಕಾರ್ಯದರ್ಶಿ ಮೇಜರ್ ಓ.ಎಸ್. ಚಿಂಗಪ್ಪ ಅವರುಗಳು ಪ್ರಸ್ತುತದ ಸನ್ನಿವೇಶದಲ್ಲಿ ಹುತಾತ್ಮರಾಗಿರುವ ಭಾರತೀಯ ಯೋಧರಿಗೆ ಸಾರ್ವಜನಿಕವಾಗಿ ಶ್ರದ್ಧಾಂಜಲಿ ಸಲ್ಲಿಸುವದು ಕಷ್ಟವಾಗಿದೆ. ಆದರೆ ದೇಶದ ಜನತೆ ಯೋಧರಿಗೆ ನೈತಿಕ ಸ್ಥೈರ್ಯ ತುಂಬಬೇಕು. ಜತೆಗೆ ಪ್ರಾಣತ್ಯಾಗ ಮಾಡಿದ ಯೋಧರ ಕುಟುಂಬದ ಪರ ಪ್ರಾರ್ಥಿಸಿ ಅವರಿಗೆ ನೆರವಾಗುವಂತೆ ಮನವಿ ಮಾಡಿದ್ದಾರೆ.
ಗಡಿಯಲ್ಲಿ ಚೀನಾದ ಸೈನಿಕರು ಅನಾವಶ್ಯಕವಾಗಿ ಅಪ್ರಚೋದಿತ ದಾಳಿ ನಡೆಸುತ್ತಿರುವದು ತೀರಾ ಖಂಡನೀಯ ಎಂದಿರುವ ಅವರುಗಳು ಮಾಜಿ ಸೈನಿಕರು ಭಾರತೀಯ ಸೇನೆಯ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆಯೂ ಚೀನಾದಿಂದ ಇಂತಹ ಪ್ರಯತ್ನ ನಡೆದಿತ್ತು. ಭಾರತ ಇದನ್ನು ದಿಟ್ಟವಾಗಿ ಎದುರಿಸಬೇಕಾಗಿದೆ ಎಂದು ಅವರುಗಳು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಜನತೆ ಹುತಾತ್ಮರಾದವರ ಪರವಾಗಿ ಮಿಡಿಯುವಂತಾಗಬೇಕೆಂದೂ ಅವರುಗಳು ಕರೆ ನೀಡಿದ್ದಾರೆ.
ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು
ಭಾರತದ ಟಿಬೆಟ್ ಭೂಭಾಗವನ್ನು 1962ರ ಯುದ್ಧದಲ್ಲಿ ಚೀನಾ ಕಬಳಿಸಿದ ಸಂದರ್ಭ ಆ ರಾಷ್ಟ್ರಕ್ಕೆ ಭಾರತೀಯ ಸೇನೆ ಸಮರ್ಥ ರೀತಿ ಉತ್ತರ ನೀಡಿದ್ದು, ರಾಜತಾಂತ್ರಿಕ ಕಾರಣದಿಂದ ನಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲಾಯಿತು ಎಂದು ನಿವೃತ್ತ ಯೋಧ ಮಲಚೀರ ಅಚ್ಚಯ್ಯ ನೆನಪಿಸಿದ್ದಾರೆ.
ಪ್ರಸ್ತುತ ದೇಶದ ಗಡಿ ಪರಿಸ್ಥಿತಿ ಕುರಿತು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದ ಅಚ್ಚಯ್ಯ ತಾಷ್ಕಾಂಟ್ ಒಪ್ಪಂದದಿಂದಾಗಿ ನಮ್ಮ ಸೈನಿಕರನ್ನು ವಾಪಾಸು ಕರೆಸಿಕೊಂಡಿದ್ದು, ಯುದ್ಧಭೂಮಿಯಲ್ಲಿ ಸೋಲಿನಿಂದ ಅಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ಬಹುಪಾಲು ಗಡಿಗಳಲ್ಲಿ ಚೀನಾ, ಪಾಕಿಸ್ತಾನ, ನೇಪಾಳ ನಿರಂತರವಾಗಿ ನಮ್ಮ ಸೈನಿಕರಿಗೆ ಕಿರುಕುಳ ನೀಡುತ್ತಿದ್ದು, ನಿತ್ಯ ಇಂತಹ ಉಪದ್ರ ಎದುರಿಸುತ್ತಲೇ ಭಾರತದ ಯೋಧರು ಗಡಿ ರಕ್ಷಿಸುವಂತಾಗಿದೆ ಎಂದು ಈಗಿನ ಸನ್ನಿವೇಶದ ಬಗ್ಗೆ ಅವರು ವಿವರಿಸಿದರು.
1961 - 62 ರ ಚೀನಾ ವಿರುದ್ಧ ಯುದ್ಧ ಬಳಿಕ ಮತ್ತೆ 1965ರಲ್ಲಿ ಪಾಕಿಸ್ತಾನದ ಕುತಂತ್ರವನ್ನು ಸದೆಬಡಿದು, 1971ರಲ್ಲಿ ಮತ್ತೆ ಬಾಂಗ್ಲಾ ವಿಮೋಚನೆಗಾಗಿ ನಡೆದ ಯುದ್ಧದಲ್ಲಿ ಭಾರತ ಸೇನೆ ಆ ರಾಷ್ಟ್ರದ 91 ಸಾವಿರ ಸೈನಿಕರನ್ನು ಯುದ್ಧ ಖೈದಿಗಳಾಗಿ ಸೆರೆಹಿಡಿದಿತ್ತು ಎಂದು ಗಡಿ ಪರಿಸ್ಥಿತಿ ಬಗ್ಗೆ ಬೊಟ್ಟು ಮಾಡಿದರು.
ಆ ಬಳಿಕ ಕಾರ್ಗಿಲ್ ಸಮರ ನಡೆದಿದ್ದನ್ನು ನೆನಪಿಸಿಕೊಂಡ ಅಚ್ಚಯ್ಯ, ತಾವು 1965ರ ಪಾಕ್ ಯುದ್ಧದಲ್ಲಿ ಕಾಲಿಗೆ ಗುಂಡು ತಗಲಿ ಮಿಲಿಟರಿ ನೆಲೆಯಲ್ಲಿ ಚಿಕಿತ್ಸೆಯೊಂದಿಗೆ 1972ರಲ್ಲಿ ಹುಟ್ಟೂರಿಗೆ ವಾಪಾಸ್ಸಾಗಬೇಕಾಯಿತು ಎಂದರು. ಆದರೆ ಯಾವದೇ ಸಂದರ್ಭ ಭಾರತ ಸೇನೆ ಶತ್ರುಗಳಿಗೆ ಬೆನ್ನು ತೋರಿಸಿಲ್ಲ ಎನ್ನುವ ಅವರು, ಪ್ರಸ್ತುತ ಸನ್ನಿವೇಶವನ್ನು ಭಾರತ ಸೇನೆ ಹಾಗೂ ಕೇಂದ್ರ ಸರಕಾರ ಸಮರ್ಥ ರೀತಿಯಲ್ಲಿ ಎದುರಿಸಿ, ಶತ್ರುರಾಷ್ಟ್ರಗಳಿಗೆ ಪ್ರತ್ಯುತ್ತರ ನೀಡುವ ವಿಶ್ವಾಸ ಇದೆ ಎಂದು ಅನಿಸಿಕೆ ಹಂಚಿಕೊಂಡರು. ಸೇನೆಯಿಂದ ಮರಳಿದ ತಮಗೆ ಐಟಿಸಿ ಸಂಸ್ಥೆ ವ್ಯಾಪಾರ ಮಳಿಗೆಯೊಂದಿಗೆ ಬದುಕಿಗೆ ದಾರಿ ಕಲ್ಪಿಸಿಕೊಟ್ಟಿದೆ. ಹಾಗಾಗಿ ‘ಜೈ ಜವಾನ್ ಸ್ಟಾಲ್’ ಹೆಸರಿನಲ್ಲಿ ಮಡಿಕೇರಿಯಲ್ಲಿ ನೆಲೆ ಕಂಡುಕೊಂಡಿದ್ದಾಗಿ ಮೆಲುಕು ಹಾಕಿದರು.