ವೀರಾಜಪೇಟೆ, ಜೂ. 17: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಭೀತಿಯ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಅಂತರ ರಾಜ್ಯ ಗಡಿಯ ಮಾಕುಟ್ಟ ರಸ್ತೆ ಮುಚ್ಚುವುದರ ಮೂಲಕ ಉಂಟಾಗಿರುವ ಸಂಚಾರ ನಿರ್ಬಂಧÀಕ್ಕೆ 90 ದಿನಗಳು ಸಂದಿವೆ. ಈಗ ಲಾಕ್‍ಡೌನ್ ಸಡಿಲಿಕೆಯಿಂದಾಗಿ ಕೊಡಗಿನ ವಾಣಿಜ್ಯ ವ್ಯವಹಾರಗಳು ಸ್ವಲ್ಪ ಮಟ್ಟಿಗೆ ಪುನಃಶ್ಚೇತನ ಗೊಂಡಿದೆಯಾದರೂ ಗಡಿ ರಸ್ತೆ ಬಂದ್‍ನಿಂದಾಗಿ ಅಂತರ ರಾಜ್ಯ ವಾಣಿಜ್ಯ ವ್ಯವಹಾರಗಳು ನೀರಸ. ಅದರಲ್ಲಿಯೂ ಕೇರಳಿಗರಿಲ್ಲದ ವೀರಾಜಪೇಟೆಯ ವ್ಯಾಪಾರ-ವಹಿವಾಟುಗಳ ಬಗ್ಗೆ ಊಹಿಸಲೂ ಅಸಾಧ್ಯ. ಹಾಗೆಯೇ ಜಿಲ್ಲೆಯ ಮಳೆಗಾಲದ ಉತ್ಪನ್ನಗಳಾದ ಪಣಪುಳಿ, ಕಾಚಂಪುಳಿ, ಬಂಡುಳಿ, ಬಟರ್‍ಫ್ರೂಟ್ ಹಾಗೂ ನಿಂಬೆಗಳಿಗೆ ಹೆಚ್ಚಿನ ಬೇಡಿಕೆಯಿರುವುದು ಕೇರಳದಲ್ಲಿ. ವಾಹನ ಸಂಚಾರ ನಿರ್ಬಂಧದಿಂದಾಗಿ ಈ ಉತ್ಪನ್ನಗಳ ವ್ಯವಹಾರಗಳನ್ನು ಹಚ್ಚಿಕೊಂಡಿರುವವರ ಬದುಕು ದಿಕ್ಕು ತೋಚದಂತಾಗಿದೆ. ಎಲ್ಲ ಫಸಲು ಉತ್ಪನ್ನಗಳು ಖರೀದಿಸುವವರಿಲ್ಲದೆ ತೋಟದಲ್ಲೇ ಕೊಳೆತು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕೇರಳದ ವಲಸೆÀ ಜನರ ಬದುಕಿನ ಅವಿಭಾಜ್ಯ ಅಂಗವಾಗಿತ್ತು. ಆದರೆ ಸಂಚಾರ ನಿರ್ಬಂಧದಿಂದ ಇವೆಲ್ಲವೂ ಸ್ಥಗಿತಗೊಂಡಂತಾಗಿವೆ. 80 ಕಿ.ಮೀ. ಹಾದು ಬರಬೇಕಿದ್ದ ಕೇರಳದ ಸಮುದ್ರದ ಕರಾವಳಿಯ ಹಸಿ ಮೀನು 256 ಕಿ.ಮೀ. ಹಾದು ಬರಬೇಕಿದೆ. ಮೀನಿನ ಧಾರಣೆ ಮತ್ತು ಗುಣಮಟ್ಟದ ಮೇಲೆ ಇದು ಪರಿಣಾಮ ಉಂಟುಮಾಡಿದೆ.
ಬಸ್‍ಗಳ ಓಡಾಟ ಕಾಣದ ಮೂರು ತಿಂಗಳು
ದಿನನಿತ್ಯ ನೂರಾರು ಅಂತರ ರಾಜ್ಯ ಸೇವೆ ಒದಗಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಬಸ್‍ಗಳೂ, ಕೇರಳ ರಾಜ್ಯ ಸರಕಾರಿ ಬಸ್‍ಗಳೂ, ಖಾಸಗಿ ಬಸ್‍ಗಳು ಸೇರಿದಂತೆ ನೂರಾರು ಬಸ್‍ಗಳು ಈ ಮಾರ್ಗದಲ್ಲಿ ಓಡಾಟ ನಿಲ್ಲಿಸಿವೆ. ಕರ್ನಾಟಕ-ಕೇರಳ ರಾಜ್ಯಗಳ ಸಂಬಂಧವನ್ನು ಕಲ್ಪಿಸುವ ಅಂತರ ರಾಜ್ಯ ಹೆದ್ದಾರಿ ಎಂಬ ನೆಲೆಯಲ್ಲಿ ಹಿಂದಿನಿಂದಲೂ ಅತ್ಯಂತ ಪ್ರಮುಖ ಹೆದ್ದಾರಿಯಾಗಿದೆ.
ಕೊಡಗು-ಕೇರಳ (ಹಿಂದಿನ ಮಲಬಾರು)ದ ನಂಟಿಗೆ ಶತಮಾನದ ಇತಿಹಾಸವಿದೆ. ಎರಡೂ ರಾಜ್ಯಗಳ ಸಂಬಂಧಕ್ಕೆ ಕುಂದು ಉಂಟಾಗಿರು ವುದು ಕಡಿಮೆ. ಕೊಡಗಿನವರ ಸಾನಿಧ್ಯವಿಲ್ಲದೆ ಕೇರಳದ ಬೈತೂರು ಉತ್ಸವವಿಲ್ಲ. ಹಾಗೆಯೇ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಕೊಡಗಿನಲ್ಲಿ ನಡೆಯುವ ಎಲ್ಲಾ ಉತ್ಸವಗಳಿಗೆ ಕೇರಳಿಗರ ಸಾನಿಧ್ಯವೂ ಬಹುಮುಖ್ಯ. ಜಿಲ್ಲೆಯ ಪ್ರಸಿದ್ಧ ಎಮ್ಮೆಮಾಡು ಉರೂಸನ್ನು ಹೆಚ್ಚು ವರ್ಣರಂಜಿತ ಗೊಳಿಸುವುದೂ ಕೇರಳಿಗರ ಸಾನಿಧ್ಯವೇ. ಈ ಕಾರಣದಿಂದಾಗಿಯೇ ಎರಡೂ ರಾಜ್ಯಗಳ ಸಂಬಂಧ ಹೆಚ್ಚು ಭದ್ರವಾಗುತ್ತಲೇ ಸಾಗಿತ್ತು. ಅಂತಹಾ ಅವಿನಾಭಾವದ ಭಾವತಂತು ಉಭಯ ರಾಜ್ಯಗಳದ್ದು. ಎರಡೂ ರಾಜ್ಯಗಳ ನಾಗರಿಕರ ನಡುವಣ ವ್ಯಾವಹಾರಿಕ ಬಾಂಧವ್ಯ ಒಂದೆಡೆ ಇದ್ದರೆ ಕೌಟುಂಬಿಕ, ಸಾಂಸ್ಕøತಿಕ, ಸಾಮಾಜಿಕ, ಧಾರ್ಮಿಕ ಬಾಂಧವ್ಯವೂ ಅಷ್ಟೇ ಗಾಢವಾಗಿರುವುದು ವಾಸ್ತವ. ಆದರೆ ಮೂರು ತಿಂಗಳ ಹಿಂದೆ ಜಗತ್ತನ್ನು ಆವರಿಸಿದ ಕೊರೊನಾ ವೈರಾಣು ಹೆಮ್ಮಾರಿಯ ಕಾರಣದಿಂದಾಗಿ ಕಳೆದ ಮೂರು ತಿಂಗಳುಗಳಲ್ಲಿ ಉಭಯ ರಾಜ್ಯಗಳ ಜನರು ಪರಸ್ಪರ ಸಂಧಿಸಲಾಗದೆ ಅನುಭವಿಸುತ್ತಿರುವ ನೋವು ಮಾತ್ರ ಹೇಳ ತೀರದು.
ಕೊರೊನಾ ಬಿಕ್ಕಟ್ಟಿನ ಪ್ರಾರಂಭದ ಆತಂಕಮಯ ದಿನಗಳಲ್ಲಿ ಕರ್ನಾಟಕ-ಕೇರಳ ರಾಜ್ಯಗಳ ನಡುವಣ ಗಡಿಯಲ್ಲಿ ಸಂಚಾರ ನಿರ್ಬಂಧ ಹೇರಲೇ ಬೇಕಾದಂತಹ ಅನಿವಾರ್ಯ ಸನ್ನಿವೇಶ ಸೃಷ್ಟಿಯಾಗಿದ್ದವು. ಇದು ಅನಿವಾರ್ಯ ಎಂಬುದು ಉಭಯ ರಾಜ್ಯಗಳ ಪ್ರಜ್ಞಾವಂತರಿಗೆ ಅನಿಸಿದ್ದೂ ಉಂಟು. ಆದರೆ ಈಗ ಪರಿಸ್ಥಿತಿ ತಿಳಿಗೊಂಡಿದ್ದು ಎರಡೂ ಸರಕಾರಗಳು ಗಂಭೀರವಾಗಿ ಮನಸ್ಸು ಮಾಡಿದರೆ ಗಡಿ ರಸ್ತೆಗೆ ಮುಕ್ತಿ ನೀಡಬಹುದು. ಎರಡೂ ರಾಜ್ಯಗಳ ಸರಕಾರಗಳು ಚರ್ಚಿಸಿ ಗಡಿಯಲ್ಲಿ ಷರತ್ತಿನ ಆಧಾರದಲ್ಲಿ ಜನರ ಓಡಾಟಕ್ಕೆ ಅವಕಾಶವೇಕೆ ಮಾಡಿಕೊಡಬಾರದು? ಎಂಬುದು ಉಭಯ ರಾಜ್ಯಗಳ ಪ್ರಮುಖ ಜನರ ಪ್ರಶ್ನೆಯಾಗಿದೆ.
ತಹಶೀಲ್ದಾರ್ ಪ್ರತಿಕ್ರಿಯೆ
ಕೊಡಗು ಕೇರಳ ಅಂತರ ರಾಜ್ಯ ಗಡಿಭಾಗವನ್ನು ಕೊರೊನಾ ವೈರಸ್ ಭೀತಿಯ ಲಾಕ್‍ಡೌನ್ ನಿರ್ಬಂಧದ ಹಿನೆÀ್ನಲೆಯಲ್ಲಿ ಕೇರಳದಿಂದ ಕೊಡಗಿನ ಕಡೆಗೆ ಯಾರೂ ನುಸಳದಂತೆ ಮಾಕುಟ್ಟ ಚೆಕ್‍ಪೋಸ್ಟ್‍ನಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಕೆಯೊಂದಿಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕೊರೊನಾ ನಿರ್ಬಂಧದ ಸಡಿಲಿಕೆಯಿಂದಾಗಿ ಕುಟ್ಟ ಹಾಗೂ ಮಾಕುಟ್ಟ ಚೆಕ್‍ಪೋಸ್ಟ್‍ನ ಓಪನ್‍ಗೆ ಸರಕಾರ ಸಾಧಕ ಬಾಧಕಗಳನ್ನು ಪರಿಶೀಲಿಸಿದ ನಂತರ ಜಿಲ್ಲಾಡಳಿತ, ತಾಲೂಕು ಆಡಳಿತ ವಿವಿಧ ಇಲಾಖೆಗಳ ಅಧಿಕಾರಿಗಳು ಚಿಂತನೆ ನಡೆಸಬೇಕಾಗಿದೆ ಎಂದು ತಹಶೀಲ್ದಾರ್ ಎಲ್.ಎಂ. ನಂದೀಶ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
- ಡಿ.ಎಂ.ಆರ್.