ಸೈನಿಕರ ಬಲಿದಾನ ವ್ಯರ್ಥವಾಗದು

ನವದೆಹಲಿ, ಜೂ. 17: ಲಡಾಖ್ ಗಡಿಯಲ್ಲಿ ನಡೆದ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಈ ವಿಚಾರವಾಗಿ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದು, ಸೈನಿಕರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಮಾರಕ ಕೊರೊನಾ ವೈರಸ್ ನಿರ್ವಹಣೆ ವಿಚಾರವಾಗಿ ನಿನ್ನೆಯಿಂದ ನಡೆಯುತ್ತಿರುವ ಎಲ್ಲ ರಾಜ್ಯಗಳ ಸಿಎಂಗಳ ಮ್ಯಾರಥಾನ್ ಸಭೆಯ 2ನೇ ದಿನ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಮೊದಲು ಹುತಾತ್ಮ ಸೈನಿಕರ ಆತ್ಮಕ್ಕೆ 2 ನಿಮಿಷ ಶಾಂತಿ ಕೋರಿದರು. ಬಳಿಕ ಸೈನಿಕರ ಬಲಿದಾನದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಭಾರತ ಶಾಂತಿಯನ್ನು ಬಯಸುತ್ತದೆ ಆದರೆ ಪ್ರಚೋದಿಸಿದಾಗ, ಯಾವುದೇ ರೀತಿಯ ಪರಿಸ್ಥಿತಿ ಇರಲಿ ಭಾರತ ಅದಕ್ಕೆ ಸೂಕ್ತ ತಿರುಗೇಟು ನೀಡಲು ಸಮರ್ಥವಾಗಿದೆ. ಈ ಮೂಲಕ ನಾನು ದೇಶದ ಪ್ರಜೆಗಳಿಗೆ ಭರವಸೆ ನೀಡುತ್ತೇನೆ. ಅದೇನೆಂದರೆ ಸೈನಿಕರ ಬಲಿದಾನ ವ್ಯರ್ಥವಾಗದು. ನಮಗೆ, ದೇಶದ ಏಕತೆ ಮತ್ತು ಸಾರ್ವಭೌಮತ್ವ ಅತ್ಯಂತ ಮುಖ್ಯವಾದದ್ದು. ಆದರೆ ಪ್ರಚೋದಿಸಿದರೆ ಅದಕ್ಕೆ ತಕ್ಕ ಶಾಸ್ತಿ ಖಂಡಿತ ಮಾಡುತ್ತೇವೆ ಎಂದು ಹೇಳಿದರು.

ಪ್ರಧಾನಿಯಿಂದ ನಾಳೆ ಸರ್ವಪಕ್ಷ ಸಭೆ

ನವದೆಹಲಿ, ಜೂ. 17: ಚೀನಾ-ಭಾರತ ಗಡಿಯ ಗಲ್ವಾನ್‍ನಲ್ಲಿ ಉಭಯ ದೇಶಗಳ ಯೋಧರ ನಡುವೆ ಸಂಘರ್ಷ ಏರ್ಪಟ್ಟ ಹಿನ್ನೆಲೆ ಉಭಯ ದೇಶಗಳ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಾ. 19 ರಂದು ಸರ್ವಪಕ್ಷ ಸಭೆ ಕರೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. ಈ ಕುರಿತು ಪ್ರಧಾನಮಂತ್ರಿಗಳ ಕಚೇರಿ ಮಾಹಿತಿ ನೀಡಿದ್ದು, ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆ ಈ ವಿಚಾರ ಸಂಬಂಧ ಚರ್ಚೆ ನಡೆಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಾ. 19 ರ ಸಂಜೆ 5 ಗಂಟೆಗೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರು ವರ್ಚುವಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದೆ. ಪೂರ್ವ ಲಡಾಖ್‍ನ ಗಲ್ವಾನ್ ಗಡಿಯಲ್ಲಿ ಕಳೆದ 5 ವಾರಗಳಿಂದ ಬಿಕ್ಕಟ್ಟು ಏರ್ಪಟ್ಟಿದೆ. ಈ ಕುರಿತು ಎರಡೂ ದೇಶಗಳ ನಡುವೆ ಮಾತುಕತೆ ನಡೆದಿದ್ದು, ಸ್ಥಳದಿಂದ ಹಿಂದೆ ಸರಿಯುವ ಕುರಿತು ಒಮ್ಮತಕ್ಕೆ ಬರಲಾಗಿತ್ತು. ಅದರಂತೆ ಚೀನಾ ಯೋಧರು ಸೋಮವಾರ ರಾತ್ರಿ ಕಾಲ್ತೆಗೆಯಲು ಆರಂಭಿಸಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ಭಾರತೀಯ ಯೋಧರ ಮೇಲೆ ದೊಣ್ಣೆ ಹಾಗೂ ಕಲ್ಲುಗಳಿಂದ ದಾಳಿ ನಡೆಸಿದ್ದರು.

ಚೀನಾ ವಿರುದ್ಧ ತೀವ್ರ ಅಸಮಾಧಾನ

ನವದೆಹಲಿ, ಜೂ. 17: ಭಾರತ ಮತ್ತು ಚೀನಾ ಸೈನಿಕರ ನಡುವೆ ಗಾಲ್ವಾನ್‍ನಲ್ಲಿ ನಡೆದ ಸಂಘರ್ಷ ಪೂರ್ವನಿಯೋಜಿತ ಕೃತ್ಯ ಎಂದು ಕೇಂದ್ರ ಸರ್ಕಾರ ಚೀನಾ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದ ತಾರಕಕ್ಕೇರಿದೆ. ಪರಿಣಾಮ ಸೋಮವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತದ ಕನಿಷ್ಟ 20 ಸೈನಿಕರು ಮೃತಪಟ್ಟಿದ್ದಾರೆ. ಈ ಘಟನೆಯ ನಂತರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಇಂದು ದೂರವಾಣಿ ಕರೆ ಮೂಲಕ ಚರ್ಚೆ ನಡೆಸಿದ್ದಾರೆ. ಗಡಿಯಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿ ಕುರಿತು ಫೋನ್ ಮೂಲಕ ಚರ್ಚೆ ನಡೆಸಿರುವ ಎರಡೂ ದೇಶದ ನಾಯಕರು, ಈ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಮತ್ತು ನ್ಯಾಯಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ. ಇನ್ನು ಚರ್ಚೆ ವೇಳೆ ಚೀನಾ ಸೈನಿಕರ ನಡೆ ವಿರುದ್ಧ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಸೈನಿಕರ ಸಂಘರ್ಷವನ್ನು ಚೀನಾ ಸೈನಿಕರ ಪೂರ್ವನಿಯೋಜಿತ ಕೃತ್ಯ ಎಂದು ಜೈಶಂಕರ್ ಟೀಕಿಸಿದ್ದಾರೆ ಎನ್ನಲಾಗಿದೆ.

ಸೈನಿಕರ ವಿರುದ್ಧ ಚೀನಾ ಕಿಡಿ

ನವದೆಹಲಿ, ಜೂ. 17: ಗಾಲ್ವಾನ್ ಸಂಘರ್ಷಕ್ಕೆ ಭಾರತೀಯ ಸೈನಿಕರ ಆಕ್ರಮಣಶೀಲತೆಯೇ ಕಾರಣ. ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ಚಾಲ್ತಿಯಲ್ಲಿರುವಾಗಲೇ ಸೈನಿಕರು ಲಜ್ಜೆಗೆಟ್ಟವರಂತೆ ವರ್ತಿಸಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಹೇಳಿದ್ದಾರೆ. ಭಾರತ-ಚೀನಾ ಗಡಿ ಪ್ರದೇಶ ಲಡಾಖ್‍ನ ಗಾಲ್ವಾನ್‍ನಲ್ಲಿ ನಡೆದ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಇಂದು ದೂರವಾಣಿ ಕರೆ ಮೂಲಕ ಚರ್ಚೆ ನಡೆಸಿದರು. ಈ ವೇಳೆ ಭಾರತೀಯ ಸೈನಿಕರ ಆಕ್ರಮಣಕಾರಿ ಮನೋಭಾವದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಾಂಗ್ ಯೀ, ಭಾರತ ಸರ್ಕಾರ ಕೂಡಲೇ ತನ್ನ ಸೈನಿಕರ ಪ್ರಚೋದನಾತ್ಮಕ ನಡೆಗೆ ಕೂಡಲೇ ಬ್ರೇಕ್ ಹಾಕಬೇಕು. ಅಲ್ಲದೆ ಗಾಲ್ವಾನ್ ಸಂಘರ್ಷ ಸಂಬಂಧ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥ ಸೈನಿಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಚೀನಾ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತೀಯ ಸೈನಿಕರ ಆಕ್ರಮಣಶೀಲತೆಯೇ ಸಂಘರ್ಷಕ್ಕೆ ಕಾರಣ ಎಂದು ಹೇಳಿರುವ ವಾಂಗ್ ಯೀ, ಭಾರತೀಯ ಸೈನಿಕರೇ ಮೊದಲು ವಿವಾದಿತ ಗಡಿ ಪ್ರದೇಶವನ್ನು ಪ್ರವೇಶ ಮಾಡುವ ಸಾಹಸ ಮಾಡಿದ್ದು, ಇದು ಸಂಘರ್ಷಕ್ಕೆ ಕಾರಣವಾಯಿತು ಎಂದು ಆರೋಪಿಸಿದ್ದಾರೆ.

20 ಯೋಧರ ವಿವರ ಬಿಡುಗಡೆ

ನವದೆಹಲಿ, ಜೂ. 17: ಇಂಡೋ-ಚೀನಾ ಗಡಿ ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಮಲ್ಲಯುದ್ಧದಲ್ಲಿ ಚೀನೀ ಯೋಧರೊಂದಿಗೆ ಸೆಣಸಿ ವೀರಮರಣವನ್ನಪ್ಪಿದ ಭಾರತದ 20 ಯೋಧರ ವಿವರವನ್ನು ಸೇನೆ ಬಿಡುಗಡೆ ಮಾಡಿದೆ. ಸೋಮವಾರ ತಡರಾತ್ರಿ ಲಡಾಖ್‍ನಲ್ಲಿ ನಡೆದ ಸಂಘರ್ಷದಲ್ಲಿ ಮೂವರು ಯೋಧರು ಹುತಾತ್ಮರಾಗಿ, 17 ಸೈನಿಕರು ಗಂಭೀರ ಗಾಯಗೊಂಡಿದ್ದರು. ಆದರೆ, ಎತ್ತರದ ಪ್ರದೇಶ ಹಾಗೂ ಶೂನ್ಯಕ್ಕಿಂತಲೂ ಕಡಿಮೆ ಉಷ್ಣಾಂಶವಿರುವ ಪ್ರದೇಶವಿದ್ದರಿಂದ ಗಾಯಗೊಂಡ ಸೈನಿಕರು ಹುತಾತ್ಮರಾಗಿದ್ದಾರೆ. ಈ ಮೂಲಕ 20 ಭಾರತೀಯ ಯೋಧರು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಅಂತಿಮ

ಬೆಂಗಳೂರು, ಜೂ. 17: ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಬಿ.ಕೆ. ಹರಿಪ್ರಸಾದ್ ಹಾಗೂ ನಸೀರ್ ಅಹ್ಮದ್ ಅವರ ಹೆಸರನ್ನು ಎಐಸಿಸಿ ಅಂತಿಮಗೊಳಿಸಿದೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಅವರು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ತಾ. 29 ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್‍ನಿಂದ ಹಲವು ನಾಯಕರು ಟಿಕೆಟ್‍ಗಾಗಿ ಪ್ರಯತ್ನಿಸಿದ್ದರು. ಕಾಂಗ್ರೆಸ್ ರಾಜ್ಯ ನಾಯಕರು ಸಭೆ ನಡೆಸಿ ಹೆಸರನ್ನು ಅಂತಿಮಗೊಳಿಸಿ ಹೈಕಮಾಂಡ್‍ಗೆ ಕಳುಹಿಸಿದ್ದರು. ಒಟ್ಟು 7 ಸ್ಥಾನಗಳಲ್ಲಿ ಬಿಜೆಪಿಗೆ 4 ಕಾಂಗ್ರೆಸ್‍ಗೆ 2 ಹಾಗೂ ಜೆಡಿಎಸ್ ಪಕ್ಷಕ್ಕೆ 1 ಸ್ಥಾನಕ್ಕೆ ಸ್ಪರ್ಧೆ ಇರಲಿದೆ.

ರಾಜ್ಯಗಳ ಬಗ್ಗೆ ಪ್ರಧಾನಿ ಮೆಚ್ಚುಗೆ

ಬೆಂಗಳೂರು, ಜೂ. 17: ಕೋವಿಡ್-19 ನಿಯಂತ್ರಣ ಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಜತೆಗೆ ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಒತ್ತು ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ವಿವಿಧ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿದ ಪ್ರಧಾನಿ, ರಾಜ್ಯಗಳು ಇನ್ನು ಅನ್‍ಲಾಕ್‍ನತ್ತ ಹೆಜ್ಜೆಯಿಡಬೇಕು. ನಿರ್ಬಂಧ ಕಡಿಮೆಯಾಗಿ, ಚಟುವಟಿಕೆಗಳು ಚುರುಕಾಗಲಿ ಎಂದು ಸಲಹೆ ನೀಡಿದರು. ಆತ್ಮನಿರ್ಭರ ಪ್ಯಾಕೇಜ್ ಆರ್ಥಿಕ ಚಟುವಟಿಕೆ ಚುರುಕಾಗಲು ನೆರವಾಗಲಿದ್ದು, ಈ ಪ್ಯಾಕೇಜ್ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ ಎಂದು ನರೇಂದ್ರ ಮೋದಿ ಹೇಳಿದರು. ವೀಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಭಾಗವಹಿಸಿ, ರಾಜ್ಯದಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.